ಸುಳ್ಯ:ನದಿಗಳು ಸೇರಿ ಸಮುದ್ರ ಆದಂತೆ ಎಲ್ಲರೂ ಸೇರಿದ ಮಹಾ ಸಮುದ್ರ ಹಿಂದೂ ಸಮಾಜ.ಮಕ್ಕಳಿಗೆ ಶಿಕ್ಷಣದ ಜೊತೆ ಸಂಸ್ಕಾರವನ್ನೂ ನೀಡಿ ಬೆಳೆಸಬೇಕು ಎಂದು ಕಲಬುರ್ಗಿ ಚಿತ್ತಾಪುರ ತಾಲೂಕು ಕೊಂಚೂರು ಸವಿತಾ ಪೀಠದ ಶ್ರೀ ಸವಿತಾನಂದನಾಥ ಮಹಾಸ್ವಾಮೀಜಿ ಹೇಳಿದರು.
ಸುಳ್ಯ ತಾಲೂಕಿನ ಸಮಾಜ ಬಾಂಧವರು ಮತ್ತು ಇತರ ಸಮಾಜದ ಗಣ್ಯರ ಉಪಸ್ಥಿತಿಯಲ್ಲಿ ಜಟ್ಟಿಪಳ್ಳದ ಹರೀಶ್ ಬಂಟ್ವಾಳ ಅವರ ನಿವಾಸದಲ್ಲಿ ನಡೆದ ‘ಸವಿತಾ ಸತ್ಸಂಗ’ ಕಾರ್ಯಕ್ರಮದಲ್ಲಿ
ಅವರು ಆಶೀರ್ವಚನ ನೀಡಿದರು. ಮಠಗಳಿಗೆ ಯಾವುದೇ ಭೇದ ಭಾವ ಇಲ್ಲ, ಸರ್ವರನ್ನೂ ಸಮಭಾವದಿಂದ ಕಾಣುವ ಮಠಗಳು ಸಮಾಜದ ಉನ್ನತಿಗಾಗಿ ಶ್ರಮಿಸುತ್ತಿದೆ ಎಂದರು. ಇಂದು ಮನುಷ್ಯರ ಆಸೆ, ಆಕಾಂಕ್ಷೆಗಳಿಗೆ ಮಿತಿ ಇಲ್ಲಂದಾಗಿದೆ. ಇದರಿಂದ ಪರಿಸರದ ಮೇಲೂ ದೊಡ್ಡ ಹಾನಿಯಾಗಿದೆ. ಎಲ್ಲರನ್ನೂ ಸಮಾನಾಗಿ ಕಾಣುವ ಸರಸರಕ್ಕೆ
ಹಾನಿಯಾಗದ ರೀತಿಯಲ್ಲಿ ಪ್ರತಿಯೊಬ್ಬರೂ ಬದುಕಬೇಕು. ಹಿರಿಯರಿಗೆ ಗೌರವ ನೀಡುವ ಸಂಸ್ಕಾರ ಬೆಳೆಸಬೇಕು.ಸಮಾಜದಲ್ಲಿ ಎಲ್ಲರೂ ಬೇಕು. ಎಲ್ಲರೂ ಇದ್ದರೆ ಮಾತ್ರ ಸಮಾಜ ಇರಲು ಸಾಧ್ಯ ಎಂದು ಅವರು ಹೇಳಿದರು.
ಶ್ರೀ ಸವಿತಾ ಪೀಠ ಮಹಾಸಂಸ್ಥಾನದ ಟ್ರಸ್ಟಿ ಹರೀಶ್ ಬಂಟ್ವಾಳ್ ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು. ಗೌಡರ ಯುವ ಸೇವಾ ಸಂಘದ ಅಧ್ಯಕ್ಷ ಪಿ.ಎಸ್.ಗಂಗಾಧರ, ಮಾಜಿ ಅಧ್ಯಕ್ಷ ದಿನೇಶ್ ಮಡಪ್ಪಾಡಿ, ಹಿರಿಯರಾದ ನಾರಾಯಣ ಫಾರೆಸ್ಟರ್, ಮಹಾಲಿಂಗ ಸಂಪ, ಹಾಸನ ಜಿಲ್ಲಾ ಸವಿತಾ ಸಂಘಟನೆಯ ಅಧ್ಯಕ್ಷ ರವಿಕುಮಾರ್, ಸುಳ್ಯ ತಾಲೂಕು ಸವಿತಾ ಸಮಾಜದ ಅಧ್ಯಕ್ಷ ಗುರುರಾಜ್ ಅಜ್ಜಾವರ, ಜಯಪ್ರಕಾಶ್ ಮಂಡೆಕೋಲು, ಬಾರ್ಬರ್ಸ್ ಅಸೋಸಿಯೇಷನ್ ಅಧ್ಯಕ್ಷ ಪದ್ಮನಾಭ ಭಂಡಾರಿ ವೇದಿಕೆಯಲ್ಲಿ ಉಪಸ್ಥಿತರಿದ್ದರು.