ಸುಳ್ಯ: ವಕ್ರತುಂಡ ಮಹಾಕಾಯ ಕೋಟಿ ಸೂರ್ಯ ಸಮಪ್ರಭ..
ನಿರ್ವಿಘ್ನಂ ಕುರು ಮೇ ದೇವ ಸರ್ವ ಕಾರ್ಯೇಷು ಸರ್ವದ..
ಎಂಬ ಪ್ರಾರ್ಥನೆಯೊಂದಿಗೆ ನಾಡಿನೆಲ್ಲೆಡೆ ಗಣೇಶೋತ್ಸವ ಸಂಭ್ರಮ. ಗಣೇಶ ಚತುರ್ಥಿಯ ಪ್ರಯುಕ್ತ ಎಲ್ಲೆಡೆ ವಿಘ್ನ ವಿನಾಶಕ, ಪ್ರಥಮ ಪೂಜಿತ ಗಣಪತಿಯ ಆರಾಧನೆ ನಡೆಯುತಿದೆ. ವಾರಗಳ ಕಾಲ ನಡೆಯುವ
ಗಣೇಶೋತ್ಸವದಲ್ಲಿ ನಾಡಿಗೆ ನಾಡೇ ಭಕ್ತಿ ಸಂಭ್ರಮದಲ್ಲಿ ತೇಲಾಡುತ್ತದೆ. ಇಂದು ಬೆಳಿಗ್ಗೆ ವಿವಿಧ ಕಡೆಗಳಲ್ಲಿ
ಗಣೇಶ ವಿಗ್ರಹದ ಪ್ರತಿಷ್ಠೆ, ಗಣಪತಿ ಹವನ, ವಿಶೇಷ ಪೂಜೆಗಳು, ಭಜನೆ, ಸಾಂಸ್ಕೃತಿಕ ಕಾರ್ಯಕ್ರಮಗಳು, ಧಾರ್ಮಿಕ ಸಭೆಗಳು, ಸ್ಪರ್ಧೆಗಳು ನಡೆಯುತ್ತದೆ. ಸುಳ್ಯ, ಬೆಳ್ಳಾರೆ, ಸುಬ್ರಹ್ಮಣ್ಯ ಪೊಲೀಸ್ ವ್ಯಾಪ್ತಿ ಅಂದರೆ ಸುಳ್ಯ ವೃತ್ತದಲ್ಲಿ 40ಕ್ಕೂ ಹೆಚ್ಚು ಕಡೆಗಳಲ್ಲಿ ಗಣೇಶೋತ್ಸವ ನಡೆಯುತ್ತಿದೆ.
ಬಹುತೇಕ ಕಡೆಗಳಲ್ಲಿ ಇಂದು ಒಂದು ದಿನ ಮಾತ್ರ ಗಣೇಶೋತ್ಸವ
ನಡೆದರೆ ಕೆಲವೆಡೆ, 2 ದಿನ, 3 ದಿನ, 5 ದಿನ, 7 ದಿನಗಳ ಕಾಲ ವಿವಿಧ ಕಾರ್ಯಕ್ರಮಗಳೊಂದಿಗೆ ಗಣೇಶೋತ್ಸವ ನಡೆಯುತ್ತದೆ. ಒಂದು ದಿನ ನಡೆಯುವ ಗಣೇಶೋತ್ಸವದಲ್ಲಿ ಇಂದು ಸಂಜೆಯ ವೇಳೆಗೆ ವೈಭವದ ಶೋಭಾಯಾತ್ರೆಯೊಂದಿಗೆ ಗಣೇಶ ವಿಗ್ರಹದ ವಿಸರ್ಜನೆ ನಡೆಯಲಿದೆ. ದೇವಸ್ಥಾನಗಳಲ್ಲಿ ವಿಶೇಷ ಪೂಜೆ ನಡೆಯುತ್ತದೆ. ದೇವಸ್ಥಾನಗಳಲ್ಲಿ ಭಕ್ತರ ಸಂದಣಿ ಹೆಚ್ಚು ಕಂಡು ಬಂದಿದೆ. ಗಡಿ ಗ್ರಾಮಗಳಲ್ಲಿಯೂ ಗಣೇಶೋತ್ಸವದ ಸಂಭ್ರಮ ಕಂಡು ಬಂದಿದೆ.












