ಧರ್ಮಸ್ಥಳ: ಧರ್ಮಸ್ಥಳದಲ್ಲಿ ಅನ್ನದಾನ, ವಿದ್ಯಾದಾನ, ಔಷಧದಾನ ಮತ್ತು ಅಭಯದಾನ ಎಂಬ ಚತುರ್ವಿಧ ದಾನಗಳು ನಿತ್ಯೋತ್ಸವವಾಗಿದ್ದು ಇಲ್ಲಿ ಸತ್ಯ, ಧರ್ಮ, ನ್ಯಾಯ ಮತ್ತು ನೀತಿ ನೆಲೆ ನಿಂತಿದೆ ಎಂದು ಕೇಂದ್ರ ಸರ್ಕಾರದ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ, ಅಲ್ಪಸಂಖ್ಯಾತ ವ್ಯವಹಾರಗಳ ಸಚಿವೆ ಸ್ಮೃತಿ ಇರಾನಿ ಹೇಳಿದರು.ಅವರು ಮಂಗಳವಾರ ಧರ್ಮಸ್ಥಳದಲ್ಲಿ ಲಕ್ಷದೀಪೋತ್ಸವದ ಸಂದರ್ಭದಲ್ಲಿ ಸರ್ವಧರ್ಮ ಸಮ್ಮೇಳನದ 90ನೇ ಅಧಿವೇಶವನ್ನು ಉದ್ಘಾಟಿಸಿ ಮಾತನಾಡಿದರು. ದೇವರ ಭಯ ಮತ್ತು ಭಕ್ತಿಯಿಂದ ನಾವು ಧರ್ಮದ ಮರ್ಮವನ್ನರಿತು
ಸನ್ಮಾರ್ಗದಲ್ಲಿ ಸಾಗಲು ಪ್ರೇರಣೆ ಸಿಗುತ್ತದೆ. ಲಕ್ಷ್ಮಿ ಸದಾ ಚಂಚಲೆಯಾಗಿದ್ದು ನಾವು ಧನದಾಹ ಹಾಗೂ ಲೌಕಿಕ ಸುಖ-ಭೋಗಕ್ಕೆ ಬಲಿಯಾಗಬಾರದು. ಉತ್ತಮ ಸಂಸ್ಕಾರವೇ ನೈಜ ಧರ್ಮವಾಗಿದೆ. ಸರ್ವಧರ್ಮಗಳ ಸಾರವೂ ಒಂದೇ ಆಗಿದ್ದು ನಾವು ಎಲ್ಲಾ ಧರ್ಮಗಳನ್ನು ಸಮಾನವಾಗಿ ಗೌರವಿಸಬೇಕು, ಪ್ರೀತಿಸಬೇಕು ಎಂದು ಅವರು ಸಲಹೆ ನೀಡಿದರು. ಧರ್ಮಸ್ಥಳದ ಗ್ರಾಮಾಭಿವೃದ್ಧಿ ಯೋಜನೆ ಹಾಗೂ ಸ್ವ-ಸಹಾಯ ಸಂಘಗಳ ಮೂಲಕ ಮಹಿಳಾ ಸಬಲೀಕರಣಕ್ಕೆ ಹೆಗ್ಗಡೆಯವರು ಮತ್ತು ಹೇಮಾವತಿ ಹೆಗ್ಗಡೆಯವರು ನೀಡಿದ ಕೊಡುಗೆಯನ್ನು ಅವರು ಶ್ಲಾಘಿಸಿ ಅಭಿನಂದಿಸಿದರು.

ಪ್ರಾಸ್ತಾವಿಕ ಮಾತುಗಳೊಂದಿಗೆ ಸ್ವಾಗತಿಸಿದ ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆಯವರು ಧರ್ಮವು ಶಾಶ್ವತವಾಗಿದ್ದು, ಸುಖ-ದುಖಃಗಳು ತಾತ್ಕಾಲಿಕವಾಗಿವೆ. ಮಾನವೀಯತೆ ಮತ್ತು ಸಮನ್ವಯತೆ ಧರ್ಮದ ಮೂಲ ಉದ್ದೇಶವಾಗಿದ್ದು ನಮ್ಮ ಸಾರ್ಥಕ ಬದುಕಿಗೆ ಪ್ರೇರಣೆ ನೀಡುವ ಸಾಧನವಾಗಿದೆ. ಜ್ಞಾನ ಸಂಗ್ರಹವೇ ನಮ್ಮ ಬದುಕಿನ ಗುರಿಯಾಗಬೇಕು. ಧರ್ಮ ಮತ್ತು ನೈತಿಕತೆ ಮೂಲಕ ಚಾರಿತ್ರ್ಯ ನಿರ್ಮಾಣವಾಗಬೇಕು ಎಂದು ಸಲಹೆ ನೀಡಿದ ಅವರು ರಾಷ್ಟ್ರ ನಿರ್ಮಾಣದಲ್ಲಿ ಮಾನವೀಯ ಮೌಲ್ಯಗಳ ಪಾತ್ರ ಮುಖ್ಯವಾಗಿದ್ದು, ಪ್ರತಿಯೊಬ್ಬರೂ ಧರ್ಮ ಮತ್ತು ನೈತಿಕತೆಯ ನೆಲೆಯಲ್ಲಿ ಮಾನವೀಯ ಮೌಲ್ಯಗಳನ್ನು ಬೆಳೆಸಿಕೊಳ್ಳಬೇಕು ಎಂದು ಹೇಳಿದರು.
‘ಕ್ರೈಸ್ತ ಧರ್ಮದಲ್ಲಿ ಧರ್ಮ ಸಮನ್ವಯದ’ ಬಗ್ಗೆ ಧರ್ಮಗುರು ಮಾರ್ಸೆಲ್ ಪಿಂಟೊ, ‘ಇಸ್ಲಾಂ ಮತ್ತು ಭಾರತೀಯ ಭಾವೈಕ್ಯದ’ ಬಗ್ಗೆ ಹಾಸಿಂಪೀರ ಇ ವಾಲೀಕರ ಮತ್ತು ‘ಜೈನಧರ್ಮದಲ್ಲಿ ಸಾಮರಸ್ಯ’ ಎಂಬ ವಿಷಯದ ಬಗ್ಗೆ ಮೂಡಬಿದ್ರೆಯ ನಿವೃತ್ತ ಮುಖ್ಯ ಶಿಕ್ಷಕ ಮುನಿರಾಜ ರೆಂಜಾಳ ಉಪನ್ಯಾಸ ನೀಡಿದರು. ಶಿವಮೊಗ್ಗದ ಖ್ಯಾತ ವಕೀಲ ಎಂ.ಆರ್. ಸತ್ಯನಾರಾಯಣ ಅಧ್ಯಕ್ಷತೆ ವಹಿಸಿದ್ದರು.ಧರ್ಮಸ್ಥಳ ಗ್ರಾಮ ಪಂಚಾಯಿತಿ ಪಿ.ಡಿ.ಒ. ಉಮೇಶ್ ಗೌಡ ಧನ್ಯವಾದವಿತ್ತರು. ಎಸ್.ಡಿ.ಎಂ. ಕಾಲೇಜಿನ ಉಪನ್ಯಾಸಕ ಡಾ. ಶ್ರೀಧರ ಭಟ್ ಕಾರ್ಯಕ್ರಮ ನಿರೂಪಿಸಿದರು.