ಕೋಲ್ಕತ್ತ:ಸಂಜು ಸ್ಯಾಮ್ಸನ್ ಅವರ ಭರ್ಜರಿ ಬ್ಯಾಟಿಂಗ್ ನೆರವಿನಿಂದ ಭಾರತ ಕ್ರಿಕೆಟ್ ತಂಡವು ಟಿ20 ವಿಶ್ವಕಪ್ನ ಸೂಪರ್ 8ರ ನಿರ್ಣಾಯಕ ಪಂದ್ಯದಲ್ಲಿ ವೆಸ್ಟ್ ಇಂಡೀಸ್ ವಿರುದ್ಧ ರೋಚಕ ಜಯ ಸಾಧಿಸಿ ಸೆಮಿಫೈನಲ್ ಪ್ರವೇಶಿಸಿದೆ. ಅವರ ಬ್ಯಾಟಿಂಗ್ನಲ್ಲಿ ಹಲವು ದಾಖಲೆ ಕೂಡ ಸೃಷ್ಟಿಸಿದೆ. ಸಂಜು ಬೌಂಡರಿ, ಸಿಕ್ಸರ್ಗಳ ಜೊತೆಗೆ
ಸರಾಗವಾಗಿ ಒಂದು, ಎರಡು ರನ್ಗಳನ್ನು ಸುಲಭವಾಗಿ ಗಳಿಸಿ ರನ್ ವೇಗ ಹೆಚ್ಚಿಸಿದರು. ಅಷ್ಟೇ ಅಲ್ಲದೆ ಈ ಅದ್ಬುತ ಪ್ರದರ್ಶನದ ಮೂಲಕ ವಿರಾಟ್ ಕೊಹ್ಲಿ ಅವರ ದಾಖಲೆ ಒಂದನ್ನು ಮೀರಿದ್ದಾರೆ.
ವಿಂಡೀಸ್ ವಿರುದ್ಧ ಅಜೇಯ 97 ರನ್ ಗಳಿಸಿದ ಸಂಜು ಸ್ಯಾಮ್ಸನ್, ಟಿ20 ವಿಶ್ವಕಪ್ನಲ್ಲಿ ಚೇಸಿಂಗ್ ವೇಳೆ ಭಾರತ ಪರ ಒಂದೇ ಪಂದ್ಯದಲ್ಲಿ ಅತ್ಯಧಿಕ ರನ್ ಗಳಿಸಿದ ಆಟಗಾರ ಎಂಬ ದಾಖಲೆಯನ್ನು ತಮ್ಮದಾಗಿಸಿಕೊಂಡರು.
ಇದಕ್ಕೂ ಮೊದಲು 2016ರ ಮೊಹಾಲಿಯಲ್ಲಿ ಆಸ್ಟ್ರೇಲಿಯಾ ತಂಡದ ವಿರುದ್ಧ ಮತ್ತು 2022ರ ಆವೃತ್ತಿಯಲ್ಲಿ ಮೆಲ್ಬರ್ನ್ನಲ್ಲಿ ಪಾಕಿಸ್ತಾನದ ವಿರುದ್ಧ ಅಜೇಯ 82 ರನ್ಗಳಿಸಿದ್ದ ವಿರಾಟ್ ಕೊಹ್ಲಿ ಅವರ ಹೆಸರಿನಲ್ಲಿ ಈ ದಾಖಲೆ ಇತ್ತು.ಭಾರತ ತಂಡದ ಪರ ಅತ್ಯಧಿಕ 6ನೇ ಅರ್ಧಶತಕ ಸಿಡಿಸುವ ಮೂಲಕ, ಭಾರತದ ಪರ ಅತೀ ಹೆಚ್ಚು ಅರ್ಧಶತಕ ಸಿಡಿಸಿದ ವಿಕೆಟ್ ಕೀಪರ್-ಬ್ಯಾಟರ್ ಎಂಬ ದಾಖಲೆಯನ್ನು ಸಂಜು ಸ್ಯಾಮ್ಸನ್ ತಮ್ಮದಾಗಿಸಿಕೊಂಡರು. 5 ಅರ್ಧಶತಕ ಸಿಡಿಸಿರುವ ಇಶಾನ್ ಕಿಶನ್ ನಂತರದ ಸ್ಥಾನದಲ್ಲಿದ್ದಾರೆ. ಕೆ.ಎಲ್. ರಾಹುಲ್ ಅವರು ಟಿ20ಯಲ್ಲಿ ಒಟ್ಟಾರೆ 22 ಅರ್ಧಶತಕ ದಾಖಲಿಸಿದ್ದರೂ, ವಿಕೆಟ್ ಕೀಪರ್ ಆಗಿ ಅವರು 3 ಅರ್ಧಶತಕ ಬಾರಿಸಿದ್ದಾರೆ.









