ಸುಳ್ಯ: ಜಿಲ್ಲೆಯಾದ್ಯಂತ ಸಂಚರಿಸುತ್ತಿರುವ ಸಂವಿಧಾನ ಜಾಗೃತಿ ಜಾಥಾ
ಫೆ. 17ರಂದು ಸುಳ್ಯಕ್ಕೆ ಆಗಮಿಸಿತು. ಕನಕಮಜಲು, ಜಾಲ್ಸೂರು ಗ್ರಾಮ ಪಂಚಾಯತ್ ಕಾರ್ಯಕ್ರಮದ ಬಳಿಕ ಸಂವಿಧಾನ ಜಾಗೃತಿ ಜಾಥಾ ಸುಳ್ಯ ನಗರಕ್ಕೆ ಆಗಮಿಸಿತು. ಸುಳ್ಯ ನಗರದ ಜ್ಯೋತಿ ವೃತ್ತದಲ್ಲಿ ಜಾಥಾವನ್ನು ಸ್ವಾಗತಿಸಿ ಮೆರವಣಿಗೆಯಲ್ಲಿ ಸುಳ್ಯದ ಖಾಸಗಿ ಬಸ್ ನಿಲ್ದಾಣದ ವರೆಗೆ ಆಗಮಿಸಿ ಬಳಿಕ ಕಾರ್ಯಕ್ರಮ ನಡೆಸಲಾಯಿತು. ಪಾರಿವಾಳ ಹಾರಿಸುವ ಮೂಲಕ
ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು. ಡಾ.ಬಿ.ಆರ್.ಅಂಬೇಡ್ಕರ್ ಅವರ ಪ್ರತಿಮೆಗೆ ಮಾಲಾರ್ಪಣೆ ಮಾಡಲಾಯಿತು. ತಹಶಿಲ್ದಾರ್ ಜಿ.ಮಂಜುನಾಥ್ ಪ್ರತಿಜ್ಞಾ ವಿಧಿ ಬೋಧಿಸಿದರು.
ನಗರ ಪಂಚಾಯತ್ ಸದಸ್ಯರಾದ ವಿನಯ ಕುಮಾರ್ ಕಂದಡ್ಕ ಮಾತನಾಡಿ ‘ಸಂವಿಧಾನ ಪ್ರಜಾಪ್ರಭುತ್ವದ ಪ್ರಮುಖ ಅಂಗ, ಆದುದರಿಂದ ನಮ್ಮ ಸಂವಿಧಾನವನ್ನು ಅರ್ಥ ಮಾಡಿಕೊಂಡು, ದೇಶದ ಅಖಂಡತೆ ಮತ್ತು ಸಮಗ್ರತೆಯನ್ನು ಕಾಪಾಡಬೇಕು. ಸಂವಿಧಾನದ ಕಾರಣದಿಂದ ಸಮಾನನತೆ ಮತ್ತು ಸಹಬಾಳ್ವೆ ಕಾಪಾಡಲು ಸಾಧ್ಯವಾಗಿದೆ. ಜನ ಸಾಮಾನ್ಯರು ಕೂಡ ಸಮಾನ ಹಕ್ಕನ್ನು ಪಡೆಯಲು ಸಾಧ್ಯವಾಗಿದೆ ಎಂದು ಹೇಳಿದರು.

ನಗರ ಪಂಚಾಯತ್ ಸದಸ್ಯ ಎಂ.ವೆಂಕಪ್ಪ ಗೌಡ ಮಾತನಾಡಿ’
ಸಂವಿಧಾನದ ಅರಿವನ್ನು ಮಕ್ಕಳಲ್ಲಿ ಮೂಡಬೇಕು ಎಂಬ ಉದ್ದೇಶದಿಂದ ಸಂವಿಧಾನ ಜಾಥಾ ಹಮ್ಮಿಕೊಳ್ಳಲಾಗಿದೆ. ಸರ್ವರಿಗೂ ಸಮಬಾಳು, ಸರ್ವರಿಗೂ ಸಮಪಾಲು ಎಂಬುದು ಸಂವಿಧಾನದ ಆಶಯ ಎಂದು ಹೇಳಿದರು.

ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕ ಮೋಹನ್ ಕುಮಾರ್, ನಗರ ಪಂಚಾಯತ್ ಮುಖ್ಯಾಧಿಕಾರಿ ಸುಧಾಕರ್ ಎಂ.ಎಚ್, ಜಿ.ಪಂ. ಇಂಜಿನಿಯರ್ ರುಕ್ಮು, ನಗರ ಪಂಚಾಯತ್ ಸದಸ್ಯರಾದ ಕೆ.ಎಸ್.ಉಮ್ಮರ್, ಬುದ್ಧ ನಾಯ್ಮ್, ಸುಧಾಕರ ಕುರುಂಜಿಭಾಗ್, ರಿಯಾಝ್ ಕಟ್ಟೆಕ್ಕಾರ್, ಶಿಲ್ಪಾ ಸುದೇವ್, ಶಶಿಕಲಾ ನೀರಬಿದಿರೆ, ಕಿಶೋರಿ ಶೇಟ್, ಡೇವಿಡ್ ಧೀರಾ ಕ್ರಾಸ್ತಾ, ಶರೀಫ್ ಕಂಠಿ, ಶೀಲಾ ಅರುಣ ಕುರುಂಜಿ, ಪ್ರವಿತಾ ಪ್ರಶಾಂತ್ ಮತ್ತಿತರರು ಉಪಸ್ಥಿತರಿದ್ದರು.ಶಾಲಾ ವಿದ್ಯಾರ್ಥಿಗಳು, ಸಾರ್ವಜನಿಕರು, ಇಲಾಖಾ ಅಧಿಕಾರಿಗಳು, ಸಿಬ್ಬಂದಿಗಳು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.









