ಸುಳ್ಯ:ಫೆ. 17ರಿಂದ 22ರ ವರೆಗೆ ಸುಳ್ಯ ತಾಲೂಕಿನ 25 ಗ್ರಾಮಗಳಲ್ಲಿ ಮತ್ತು ಒಂದು ನಗರ ಪಂಚಾಯಿತಿ ವ್ಯಾಪ್ತಿಯಲ್ಲಿ ಸಂಚರಿಸುವ ಸಂವಿಧಾನ ಜಾಗೃತಿ ಜಾಥಾ ನಡೆಯಲಿದೆ. ಜಾಥಾದ ಯಶಸ್ವಿಗಾಗಿ ಸುಳ್ಯ ತಾ.ಪಂ. ಸಭಾಂಗಣದಲ್ಲಿ ಪೂರ್ವಭಾವಿ ಸಭೆ ಬುಧವಾರ ನಡೆಯಿತು.
ತಹಸೀಲ್ದಾರ್ ಮಂಜುನಾಥ್ ಅಧ್ಯಕ್ಷತೆಯಲ್ಲಿ ಸಂವಿಧಾನ ಜಾಗೃತಿ ಜಾಥಾದ ಪೂರ್ವಭಾವಿ ಸಭೆ ನಡೆಯಿತು. ಪ್ರಾಸ್ತಾವಿಕ ಮಾತನಾಡಿದ ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕ ಮೋಹನ್ ಕುಮಾರ್ ಸಿ.ಎಂ, ಸಂವಿಧಾನ ರಚನೆಗೊಂಡು 75 ವರ್ಷ ಆದ
ಸವಿನೆನಪಿಗಾಗಿ ಸಂವಿಧಾನ ಜಾಗೃತಿ ಜಾಥ ರಾಜ್ಯಾದಂತ ನಡೆಯಲಿದೆ. ಸುಳ್ಯ ತಾಲೂಕಿಗೆ ಫೆ.17 ರಂದು ಕನಕಮಜಲು ಗ್ರಾಮದಲ್ಲಿ ಜಾಥಾಕ್ಕೆ ಸ್ವಾಗತ ನಡೆಯಲಿದೆ. ಫೆ.17 ರಿಂದ 22ರ ವರೆಗೆ ಜಾಗೃತಿ ಜಾಥಾ ಸುಳ್ಯ ತಾಲೂಕಿನ 25 ಗ್ರಾಮ ಪಂಚಾಯಿತಿಗಳಲ್ಲಿ ಮತ್ತು ಒಂದು ನ.ಪಂ. ನಲ್ಲಿ ಸಂಚಾರ ಮಾಡಲಿದೆ.ಜಾಗೃತಿ ಜಾಥಾ ಸಂಚಾರಿಸುವ ಪ್ರತಿ ಪಂಚಾಯಿತಿಗಳಲ್ಲಿ ಕಾರ್ಯಕ್ರಮಗಳು ನಡೆಯಲಿದೆ. ಸಂವಿಧಾನ ಪೀಠಿಕೆಯ ಬೋಧನೆ ಇರುತ್ತದೆ. ಅಲ್ಲದೇ ಹತ್ತಿರದ ಅಂಗನವಾಡಿ, ಪ್ರಾಥಮಿಕ, ಪ್ರೌಢಶಾಲೆ ಮತ್ತು ಕಾಲೇಜು ವಿದ್ಯಾರ್ಥಿಗಳನ್ನು ಸ್ಥಳೀಯ ಸಂಘಟನೆಗಳು, ಸ್ವಸಹಾಯ ಸಂಘಗಳನ್ನು ಸೇರಿಸಿಕೊಂಡು ಕಾರ್ಯಕ್ರಮ ನಡೆಯಲಿದೆ. ಅಲ್ಲದೇ ಮಕ್ಕಳಿಗಾಗಿ ಸಂವಿಧಾನದ ಬಗ್ಗೆ ಆಶುಭಾಷಣ, ಪ್ರಬಂಧ, ಹಾಡು ಮುಂತಾದ ಸ್ಪರ್ಧೆಗಳು ನಡೆಯಲಿದೆ. ಜಾಗೃತಿ ಜಾಥಾದ ಕಡೆಯಿಂದ ಸಂವಿಧಾನದ ಬಗ್ಗೆ ಬೀದಿ ನಾಟಕ ನಡೆಯಲಿದೆ. ಅಲ್ಲದೇ ಸ್ಥಳೀಯ ಸಂಘಟನೆಗಳು ಮತ್ತು ಸಾರ್ವಜನಿಕರಿಂದ ಬೈಕ್ ರ್ಯಾಲಿ ಅಥವಾ ಮೆರವಣಿಗೆ ನಡೆಯಲಿದೆ ಎಂದರು.

Lಕಾರ್ಯಕ್ರಮಕ್ಕೆ ಮೊದಲು ಪ್ರತಿ ಗ್ರಾಮದಲ್ಲಿ ಸ್ವಚ್ಚತಾ ವಾಹನದಲ್ಲಿ ಧ್ವನಿ ವರ್ಧಕದ ಮೂಲಕ ಸಂವಿಧಾನದ ಜಾಗೃತಿ ಮತ್ತು ಕಾರ್ಯಕ್ರಮದ ಜಾಗೃತಿ ಮೂಡಿಸುವ ಕೆಲಸ ನಡೆಯುತ್ತದೆ. ಅಲ್ಲದೇ ಪ್ರತಿ ಪಂಚಾಯಿತಿಗೆ ನೋಡೆಲ್ ಅಧಿಕಾರಿಗಳ ನೇಮಕ ನಡೆಯಲಿದೆ ಎಂದರು.
ಸಭೆಯಲ್ಲಿ ಆನಂದ ಬೆಳ್ಳಾರೆ ಮಾತನಾಡಿ ಸಂವಿಧಾನ ಜಾಗೃತಿ ಕಾರ್ಯಕ್ರಮಗಳು ಕೇವಲ ಎಸ್ಸಿ, ಎಸ್.ಟಿ ಪಂಗಡದವರಿಗೆ ಮಾತ್ರ ಸೀಮಿತ ಆಗಬಾರದು. ಅಲ್ಲದೇ ಈ ಕಾರ್ಯಕ್ರಮ ಇಲಾಖೆಯ ಕಾರ್ಯಕ್ರಮವಾಗದೇ ಜನರಿಗೆ ಜಾಗೃತಿ ಮೂಡಿಸುವ ಕೆಲಸ ಆಗಬೇಕು.
ಲಕ್ಷ್ಮೀಶ ಗಬ್ಬಲಡ್ಕ ಮಾತನಾಡಿ ಸರಕಾರ ಸಂವಿಧಾನದ ಬಗ್ಗೆ ಜಾಗೃತಿ ಮೂಡಿಸುವ ಕಾರ್ಯ ಮಾಡುತ್ತಿದೆ. ಇದು ಕೇವಲ ಇಲಾಖೆಗೆ ಮಾತ್ರ ಸೀಮಿತ ಆಗಬಾರದು. ತಾಲೂಕಿನ ಒಂದು ಕಡೆ ತಾಲೂಕು ಮಟ್ಟದ ಕಾರ್ಯಕ್ರಮ ನಡೆಸಬೇಕು. ಅಲ್ಲಿ ಸಂವಿಧಾನ ತಿಳಿದುಕೊಂಡವರಿಂದ ಉಪನ್ಯಾಸ ಇಡಬೇಕು. ಇದರಲ್ಲಿ ತಾಲೂಕಿನ ಪ್ರಮುಖರು ಭಾಗವಹಿಸಿಸುವ ಕಾರ್ಯಕ್ರಮ ಆಗಬೇಕು. ಈ ಮೂಲಕ ಸಂವಿಧಾನ ಆಶಯ ಜನರಿಗೆ ಮುಟ್ಟುವ ಕೆಲಸ ಆಗಬೇಕು ಎಂದರು.
ತಾಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ರಾಜಣ್ಣ ಮಾತನಾಡಿ ಫೆ. 17 ರಂದು ಬೆಳಿಗ್ಗೆ ಕನಕಮಜಲು ಗ್ರಾಮದ ಮೂಲಕ ಸುಳ್ಯ ತಾಲೂಕಿನ ಪ್ರವೇಶ ಮಾಡುತ್ತದೆ. ಜಾಗೃತಿ ರಥ, ಟ್ಯಾಬ್ಲೋ, ಬೀದಿನಾಟಕಗಳು ಇರಲಿದೆ. ಅಲ್ಲಿ ಕಾರ್ಯಕ್ರಮ ನಡೆಸಿ ಬಳಿಕ ಜಾಲ್ಸೂರು ಗ್ರಾ.ಪಂ, ಮಂಡೆಕೋಲು ಗ್ರಾಮ ಬಳಿಕ ಅಜ್ಜಾವರ ಗ್ರಾಮದಲ್ಲಿ ಮೊದಲ ದಿನ ಜಾಥಾ ಸಂಚಾರಿಸಲಿದೆ. ಸಂಜೆ ಸುಳ್ಯ ನಗರಕ್ಕೆ ಪ್ರವೇಶ ಪಡೆದು ನಗರ ಪಂಚಾಯಿತಿಯಲ್ಲಿ ಉಳಿದುಕೊಳ್ಳಲಿದೆ.

ಫೆ. 18 ರಂದು ಬೆಳಿಗ್ಗೆ ಸುಳ್ಯ ನಗರ ಪಂಚಾಯಿತಿ ಕಾರ್ಯಕ್ರಮ ನಡೆದು ಬಳಿಕ ಸಂಪಾಜೆ, ಅರಂತೋಡು, ಮರ್ಕಂಜ, ಮಡಪ್ಪಾಡಿ ಗ್ರಾಮದಲ್ಲಿ ಕಾರ್ಯಕ್ರಮ ನಡೆಯಲಿದೆ. ಸಂಜೆ ಆಲೆಟ್ಟಿಯಲ್ಲಿ ಜಾಗೃತಿ ಜಾಥಾ ತಂಗಲಿದೆ. ಫೆ. 19ರಂದು ಬೆಳಿಗ್ಗೆ ಆಲೆಟ್ಟಿ, ಉಬರಡ್ಕ ಮಿತ್ತೂರು, ಐವರ್ನಾಡು, ಪೆರುವಾಜೆ ಗ್ರಾಮಗಳಲ್ಲಿ ಸಂಚಾರಿಸಿ ಬೆಳ್ಳಾರೆಯಲ್ಲಿ ರಾತ್ರಿ ಉಳಿದುಕೊಳ್ಳಲಿದೆ.
ಫೆ. 29 ರಂದು ಬೆಳ್ಳಾರೆ, ಕಳಂಜ, ಮುರುಳ್ಯ, ಬಾಳಿಲ ಗ್ರಾಮದಲ್ಲಿ ಸಂಚಾರ ಮಾಡಿ ಪಂಜದಲ್ಲಿ ರಾತ್ರಿ ನಿಲ್ಲಲಿದೆ. ಫೆ. 21 ರಂದು ಪಂಜ, ಕಲ್ಮಡ್ಕ, ಅಮರ ಮೂಡ್ನೂರು, ನೆಲ್ಲೂರು ಕೆಮ್ರಾಜೆ ಗ್ರಾಮದಲ್ಲಿ ಕಾರ್ಯಕ್ರಮ ನಡೆಯಲಿದೆ. ಫೆ. 22 ರಂದು ದೇವಚಳ್ಳ, ಗುತ್ತಿಗಾರು, ಹರಿಹರ ಪಲ್ಲತಡ್ಕ ಮತ್ತು ಕೊಲ್ಲಮೊಗ್ರ ಗ್ರಾಮದಲ್ಲಿ ಸಂವಿಧಾನ ಜಾಗೃತಿ ಜಾಥಾ ಸಂಚರಿಸಲಿದೆ ಎಂದು ರಾಜಣ್ಣ ಹೇಳಿದರು.

ವೇದಿಕೆಯಲ್ಲಿ ಸುಳ್ಯ ವೃತ್ತ ನಿರೀಕ್ಷಕ ಮೋಹನ್ ಕೊಠಾರಿ ಉಪಸ್ಥಿತರಿದ್ದರು. ಸಭೆಯಲ್ಲಿ ವಿವಿಧ ಇಲಾಖೆಗಳ ಅಧಿಕಾರಿಗಳು, ಪ್ರಮುಖರಾದ ಕೆ.ಪಿ.ಜಾನಿ, ಕೆ.ಎಂ. ಮುಸ್ತಫ, ಚನಿಯ ಕಲ್ತಡ್ಕ, ನ.ಪಂ. ಸದಸ್ಯರಾದ ಶಶಿಕಲಾ ನೀರಬಿದಿರೆ, ಶಿಲ್ಪಾ ಸುದೇವ್, ಕೆ.ಎಸ್. ಉಮ್ಮರ್, ಶೀಲಾ ಅರುಣ್ ಕುರುಂಜಿ, ಕಿಶೋರಿ ಶೇಟ್, ಮುಖಂಡರಾದ ಮಹಮ್ಮದ್ ಕುಂಞಿ ಗೂನಡ್ಕ, ದಿವಾಕರ್ ಪೈ, ಭರತ್ ಕುಮಾರ್, ಹಸೈನಾರ್ ಎ.ಕೆ. ಕಲ್ಲುಗುಂಡಿ, ಅಚ್ಚುತ್ತ ಮೆಲ್ಕಜೆ, ಕರುಣಾಕರ ಪಲ್ಲತಡ್ಕ, ಪ್ರಕಾಶ್ ಅರ್ಲಡ್ಕ ಮೋದಲಾದವರು ಭಾಗವಹಿಸಿದರು.







