ಸುಳ್ಯ: ಸಂಪಾಜೆ ಗ್ರಾಮದ ಮೂಲಭೂತ ಅಭಿವೃದ್ಧಿಗೆ ಹೋರಾಟ ನಡೆಸಲು ಸಮಾನ ಮನಸ್ಕರು ಸೇರಿ ‘ಮೂಲಭೂತ ಸೌಕರ್ಯಗಳ ಹಿತರಕ್ಷಣಾ ವೇದಿಕೆ’ಯನ್ನು ರಚಿಸಿದ್ದು ಗ್ರಾಮದ ಸಮಗ್ರ ಅಭಿವೃದ್ಧಿ ಆಗಬೇಕು ಎಂಬ ಬೇಡಿಕೆಯನ್ನು ಮುಂದಿರಿಸಿ ಸರಕಾರದ ಮಟ್ಟದಲ್ಲಿ ಪ್ರಯತ್ನ, ಹೋರಾಟ ನಡೆಸಲಾಗುವುದು ಎಂದು ಸಂಪಾಜೆ ಮೂಲಭೂತ ಸೌಕರ್ಯಗಳ ಹಿತರಕ್ಷಣಾ ವೇದಿಕೆಯ ಗೌರವ ಸಂಚಾಲಕರಾದ ಸೋಮಶೇಖರ ಕೊಯಿಂಗಾಜೆ ಹೇಳಿದ್ದಾರೆ. ಸ್ವಾತಂತ್ರ್ಯ ಬಂದು 75 ವರ್ಷಗಳೇ ಕಳೆದರೂ ಸಂಪಾಜೆಯ ನಾಗರಿಕರ ಮೂಲಭೂತ
ಸಮಸ್ಯೆಗಳು ಹಾಗೆಯೇ ಉಳಿದು ಮುಂದಿನ ತಲೆಮಾರುಗಳ ಮೇಲೆಯೂ ಮಾರಕವಾಗಿ ಪರಿಣಾಮವನ್ನು ಬೀರುವಂತಿದ್ದು ಗ್ರಾಮದ ಅತೀ ಅಗತ್ಯ ಬೆಳವಣಿಗೆಯೂ ಕುಂಠಿತಗೊಳ್ಳುತ್ತಿರುವುದನ್ನು ಮನಗಂಡು ಸಮಾನ ಮನಸ್ಕರೆಲ್ಲಾ ಒಟ್ಟು ಸೇರಿ ಒಂದು ಹೋರಾಟ ಸಮಿತಿಯನ್ನು ರಚಿಸಿದ್ದು ಈ ಸಮಿತಿಯ ಅಡಿಯಲ್ಲಿ ಮುಂದಿನ ವಿವಿಧ ಸಮಸ್ಯೆಗಳ ವಿರುದ್ಧ ಹೋರಾಟಗಳನ್ನು ಕೈಗೊಳ್ಳಲು ನಿರ್ಧರಿಸಲಾಗಿದೆ.
ಸಂಪಾಜೆಯ ಜನತೆ ತಮ್ಮಲ್ಲಿರುವ ಭೂದಾಖಲೆಗಳಿಗೆ ಸಂಬಂಧಿಸಿ ಪ್ಲಾಟಿಂಗ್, ಕನ್ವರ್ಷನ್ , ನೈನ್ಇಲವೆನ್’, ಮಾಡಿಸಲು ಸಾದ್ಯವಾಗದೆ ಹೆಣಗಾಡುತ್ತಿದ್ದು ಈ ಸಮಸ್ಯೆ ಬಗೆಹರಿಯಬೇಕು.ಭೂ ದಾಖಲೆಗಳು ಇಲ್ಲದೆ ಜನರು ಸೌಲಭ್ಯಗಳಿಂದ ವಂಚಿತರಾಗುತ್ತಿದ್ದಾರೆ.
ಎಲ್ಲಾ ಸಮುದಾಯದ ಜನರಿಗೂ ಅತೀ ಅಗತ್ಯವಾಗಿ ಬೇಕಾಗಿರುವ ಸಾರ್ವಜನಿಕ ಸ್ಮಶಾನ ಭೂಮಿಯ ಸಮಸ್ಯೆಗೆ ಪರಿಹಾರವಾಗಬೇಕು.
ಅಡಿಕೆ ಎಲೆ ಹಳದಿ ರೋಗ ಭಾಧಿತ ರೈತರು ಮತ್ತು ಕೃಷಿಕೂಲಿ ಕಾರ್ಮಿಕರು ಅನುಭವಿಸುತ್ತಿರುವ ಸಮಸ್ಯೆ ಪರಿಹರಿಸಬೇಕು. ಹಳದಿ ರೋಗ ಬಾದೆಯಿಂದ ಕೃಷಿ ನಾಶವಾದ ಜನರಿಗೆ ಸೂಕ್ತ ಪರಿಹಾರ ಮತ್ತು ಪರ್ಯಾಯ ಒದಗಿಸಬೇಕು.
ಸಂಪಾಜೆ ಭಾಗದ ಅರಣ್ಯ ಜಾಗಕ್ಕೆ ಹೊಂದಿಕೊಂಡಿರುವ ಜಮೀನಿನ ಸಮಸ್ಯೆ ಪರಿಹರಿಸಲು ಕಂದಾಯ ಇಲಾಖೆ ಮತ್ತು ಅರಣ್ಯ ಇಲಾಖೆಯು ಜಂಟಿ ಸರ್ವೇ ಮಾಡಿಸಿ ಗಡಿ ಗುರುತು ಮಾಡಬೇಕು. ನಿವೇಶನ ರಹಿತ ಫಲಾನುಭವಿಗಳಿಗೆ ಇಂದಿಗೂ ವಾಸ ಮಾಡಲು ಸ್ವಂತ ಮನೆಯೇ ಇಲ್ಲದೆ ಪರದಾಡುತ್ತಿದ್ದು ಇವರ ಸಮಸ್ಯೆಗೆ ಪರಿಹಾರ ಒದಗಿಸಬೇಕು.
ತಮಿಳು ಜನಾಂಗದವರ ನಿವೃತ್ತಿ ನಂತರ ಅವರ ಬದುಕು ಅತಂತ್ರ ಸ್ತಿತಿಗೆ ತಲುಪುತ್ತಿದ್ದು ಮೂಲಭೂತ ಅಗತ್ಯತೆಗಳಾದ ಪಡಿತರ ನಿವೇಶನ, ಸ್ಮಶಾನ ,ವಿದ್ಯತ್ ನಂತಹಾ ಅಗತ್ಯತೆಗಳಿಂದ ವಂಚಿಸಲ್ಪಡುತ್ತಿದ್ದು ಸಮಸ್ಯೆ ಪರಿಹರಿಸಲ್ಪಡಬೇಕು.
ಈ ಎಲ್ಲಾ ಸಮಸ್ಯೆಗಳ ತಾರ್ಕಿಕ ಅಂತ್ಯಕ್ಕಾಗಿ ಸಂಬಂಧಪಟ್ಟ ಇಲಾಖೆಗಳಿಗೂ ಸರಕಾರದ ಮಟ್ಟದಲ್ಲೂ ಪ್ರಯತ್ನಿಸಿ ಶಾಶ್ವತ ಪರಿಹಾರ ಕಾಣಲು ಒಗ್ಗಟ್ಟಿನೊಂದಿಗೆ ಹೋರಾಟ ಮಾಡಲಾಗುವುದು. ಮೊದಲ ಹಂತವಾಗಿ ಈ ಸಮಸ್ಯೆಯ ಪರಿಹಾರಕ್ಕಾಗಿ ಸಚಿವರುಗಳು, ಜಿಲ್ಲಾಧಿಕಾರಿ ಮತ್ತು ಸಂಬಂಧಪಟ್ಟ ಅಧಿಕಾರಿಗಳಿಗೆ ಮನವಿ ಸಲ್ಲಿಸಲಾಗುವುದು. ಭೂದಾಖಲೆಗಳ ಸಮಸ್ಯೆ ಗ್ರಾಮದಲ್ಲಿ ದೊಡ್ಡ ಸಮಸ್ಯೆಯಾಗಿದೆ. ಇದರ ಪರಿಹಾರಕ್ಕೆ ಕಂದಾಯ, ಸರ್ವೆ, ಅರಣ್ಯ ಇಲಾಖೆಗಳು ಜಂಟಿ ಸರ್ವೆ ಮಾಡಿ ಗಡಿ ಗುರುತು ಮಾಡಬೇಕು ಎಂದು ಹೇಳಿದರು.
ನದಿಯ ಹೂಳೆತ್ತಲು ಆದ್ಯತೆ ನೀಡಿ:
ಕಳೆದ ಬಾರಿಯ ಜಲಪ್ರಳದಿಂದ ನದಿಗಳಲ್ಲಿ ಮರಳು, ಹೂಳು ತುಂಬಿದೆ. ಇದರಿಂದ ಈ ಬಾರಿಯೂ ಮಳೆಗಾಲದಲ್ಲಿ ನದಿಗಳಲ್ಲಿ ನೀರು ತುಂಬಿ ಗ್ರಾಮದಲ್ಲಿ ಪ್ರಳಯ ಭೀತಿ ಇದೆ. ಈ ಹೂಳೆತ್ತಲು ಗ್ರಾಮ ಪಂಚಾಯತ್ ನೇತೃತ್ವದಲ್ಲಿ ನಡೆಸುವ ಹೋರಾಟ ಮತ್ತು ಪ್ರಯತ್ನಕ್ಕೆ ವೇದಿಕೆಯು ಎಲ್ಲಾ ರೀತಿಯ ಬೆಂಬಲ ನೀಡಲಿದೆ. ಈಗಾಗಲೇ ಜಿಲ್ಲಾಡಳಿತದ, ಇಲಾಖೆಗಳ ಗಮನಕ್ಕೆ ತರಲಾಗಿದೆ. ಇದು ಆದ್ಯತೆಯ ಮೇರೆ ಆಗಬೇಕಾಗಿದೆ. ಈ ಬಾರಿಯೂ ಜಲಪ್ರಳಯದ ಭೀತಿ ಇರುವುದರಿಂದ ಆದಷ್ಟು ಶೀಘ್ರ ಹೂಳೆತ್ತುವ ಕೆಲಸವನ್ನು ಮಾಡಲು ಜಿಲ್ಲಾಡಳಿತ ಕ್ರಮ ಕೈಗೊಳ್ಳಬೇಕು ಎಂದು ಸೋಮಶೇಖರ ಕೊಯಿಂಗಾಜೆ ಒತ್ತಾಯಿಸಿದರು.
ಪಕ್ಷಭೇಧ ಮರೆತು ಹೋರಾಟ- ಕೆ.ಪಿ.ಜಾನಿ:
ಸಂಪಾಜೆ ಗ್ರಾಮದ ಮೂಲಭೂತ ಅಭಿವೃದ್ಧಿ ಆಗಬೇಕು ಎಂಬ ನೆಲೆಯಲ್ಲಿ ವೇದಿಕೆಯನ್ನು ರಚಿಸಲಾಗಿದ್ದು ಪಕ್ಷ ಭೇಧ ಮರೆತು ಹೋರಾಟ ನಡೆಸಲಾಗುವುದು ಎಂದು ವೇದಿಕೆಯ ಅಧ್ಯಕ್ಷ ಕೆ.ಪಿ.ಜಾನಿ ಕಲ್ಲುಗುಂಡಿ ಹೇಳಿದರು.ಹಲವು ಸಮಸ್ಯೆಗಳಿಂದ ಜನರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಇದಕ್ಕೆ ಪರಿಹಾರಕ್ಕಾಗಿ ವೇದಿಕೆ ಮುಂಚೂಣಿಯಲ್ಲಿ ನಿಂತು ಹೋರಾಟ ನಡೆಸಲಿದೆ ಎಂದು ಅವರು ಹೇಳಿದರು.
ವೇದಿಕೆಯ ಗೌರವಾಧ್ಯಕ್ಷ ಯು.ಬಿ.ಚಕ್ರಪಾಣಿ, ಉಪಾಧ್ಯಕ್ಷ ಸುಬ್ರಹ್ಮಣ್ಯ ಕದಿಕಡ್ಕ, ಸದಸ್ಯ ಮಹಮ್ಮದ್ ಕುಂಞಿ ಗೂನಡ್ಕ, ಗ್ರಾಮ ಪಂಚಾಯತ್ ಉಪಾಧ್ಯಕ್ಷೆ ಲಿಸ್ಸಿ ಮೊನಾಲಿಸಾ, ಸದಸ್ಯರಾದ ವಿಮಲಾ ಪ್ರಸಾದ್, ಶೌವಾದ್ ಗೂನಡ್ಕ, ವೇದಿಕೆಯ ಪ್ರಧಾನ ಕಾರ್ಯದರ್ಶಿ ವಸಂತ ಗೌಡ ಪೆಲ್ತಡ್ಕ, ಪದಾಧಿಕಾರಿಗಳಾದ ಎ.ಕೆ.ಇಬ್ರಾಹಿಂ, ಜ್ಞಾನಶೀಲನ್ ರಾಜು, ಸೆಬಾಸ್ಟಿಯನ್ ಉಪಸ್ಥಿತರಿದ್ದರು.