ಸುಳ್ಯ:ಸಂಪಾಜೆ ಗ್ರಾಮದ ನದಿಗಳಲ್ಲಿ ತುಂಬಿರುವ ಹೂಳನ್ನು ಕೂಡಲೇ ತೆರವು ಮಾಡದಿದ್ದರೆ ಮತ್ತು ನದಿ ಬದಿಯಲ್ಲಿ ಪೇಟೆಗೆ ಸುತ್ತ ತಡೆಗೋಡೆ ನಿರ್ಮಾಣ ಮಾಡದಿದ್ದರೆ ಮುಂದಿನ ಚುನಾವಣೆಯನ್ನು ಬಹಿಷ್ಕರಿಸುವುದು ಸೇರಿದಂತೆ ಉಗ್ರ ಹೋರಾಟ ನಡೆಸಲಾಗುವುದು.ಪ್ರಧಾನಿ ಕಚೇರಿಗೂ ದೂರು ನೀಡಲಾಗುವುದು ಎಂದು ಸಂಪಾಜೆ ಗ್ರಾಮದ ಪ್ರಮುಖರು ಘೋಷಿಸಿದ್ದಾರೆ. ಸುಳ್ಯ ಪ್ರಸ್ ಕ್ಲಬ್ನಲ್ಲಿ ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಂಪಾಜೆ ಗ್ರಾಮ ಪಂಚಾಯತ್ ಅಧ್ಯಕ್ಷ ಜಿ.ಕೆ.ಹಮೀದ್ ಗೂನಡ್ಕ ‘ಪ್ರಳಯ, ಭೂಕಂಪ ಸೇರಿದಂತೆ ಪ್ರಾಕೃತಿಕ ವಿಕೋಪಕ್ಕೆ ಸಿಲುಕಿ ತತ್ತರಿಸಿದ ಸಂಪಾಜೆ ಗ್ರಾಮದಲ್ಲಿ ನದಿಯಲ್ಲಿ ಹೂಳು ತುಂಬಿದ್ದು
ಮಳೆಗಾಲದಲ್ಲಿ ಮತ್ತೆ ಪ್ರಳಯದ ಆತಂಕ ಎದುರಾಗಿದೆ.ಸಂಪಾಜೆ ಗ್ರಾಮದಲ್ಲಿ ಹರಿಯುವ ನದಿಗಳಲ್ಲಿ ಪೂರ್ತಿಯಾಗಿ ಹೂಳು ತುಂಬಿದ್ದು ಅದನ್ನು ತೆರವು ಮಾಡಲು ಕಳೆದ ಏಳು ತಿಂಗಳಿನಿಂದ ನಿರಂತರ ಪ್ರಯತ್ನ ನಡೆಸಿದರೂ ಸರಕಾರ, ಗಣಿ ಇಲಾಖೆ ಸ್ಪಂದಿಸಿಲ್ಲ. ನದಿಯಲ್ಲಿ ಹೂಳು ತುಂಬಿ ಹೊಂಡಗಳೆಲ್ಲ ಭರ್ತಿಯಾಗಿದೆ. ಈಗ ನದಿಯಲ್ಲಿ ನೀರೇ ಇಲ್ಲದೆ ಬತ್ತಿ ಹೋಗಿರುವ ಸ್ಥಿತಿ ನಿರ್ಮಾಣ ಆಗಿದೆ. ಈ ಹೂಳನ್ನು ತೆಗೆಯದಿದ್ದರೆ ಈ ಬಾರಿ ಮಳೆಗಾಲದಲ್ಲಿ ಮತ್ತಷ್ಟು ಅನಾಹುತ ಸಂಭವಿಸುವ ಆತಂಕ ಇದೆ. ಸರಕಾರಕ್ಕೆ, ಗಣಿ ಇಲಾಖೆಗೆ ನಿರಂತರ ಬೇಡಿಕೆ ಸಲ್ಲಿಸಿದರೂ ಸ್ಪಂದಿಸಿಲ್ಲ. ಅದೇ ರೀತಿ ಕಲ್ಲುಗುಂಡಿ ಪೇಟೆಗೆ ನೀರು ನುಗ್ಗುವುದನ್ನು ತಡೆಯಲು ತಡೆಗೋಡೆ ನಿರ್ಮಾಣ ಮಾಡಬೇಕು ಎಂಬ ಬೇಡಿಕೆ ಇದೆ. ನದಿಯಲ್ಲಿ ತುಂಬಿದ ಹೂಳೆತ್ತದಿದ್ದರೆ ಮತ್ತು ತಡೆಗೋಡೆ ನಿರ್ಮಿಸದಿದ್ದರೆ ಉಗ್ರ ಹೋರಾಟ ಮಾಡಲಾಗುವುದು. ಏಪ್ರಿಲ್ ತಿಂಗಳಲ್ಲಿ ರಸ್ತೆ ತಡೆ ಸೇರಿದಂತೆ ನಿರಂತರ ಪ್ರತಿಭಟನೆ ನಡೆಸಲಾಗುವುದು. ಮುಂದಿನ ಚುನಾವಣೆಯನ್ನು ಬಹಿಷ್ಕರಿಸುವ ಬಗ್ಗೆ ಚಿಂತನೆ ನಡೆಸಲಾಗುವುದು

ಎಂದು ಹೇಳಿದರು. ಸಂಪಾಜೆ ಗ್ರಾಮಸ್ಥರು ಬದುಕಿಗಾಗಿ ಹೋರಾಟ ಮಾಡಬೇಕಾದ ಅನಿವಾರ್ಯತೆ ನಿರ್ಮಾಣ ಅಗಿದೆ. ಮುಖ್ಯಮಂತ್ರಿ, ಸಚಿವರುಗಳು, ರಾಜ್ಯ, ರಾಷ್ಟ್ರ ಮಟ್ಟದ ಅಧಿಕಾರಿಗಳು ಬಂದು ವೀಕ್ಷಿಸಿ, ಸಮೀಕ್ಷೆ ನಡೆಸಿ ಹೋದರೂ ಏನೂ ಪ್ರಯೋಜನ ಆಗಿಲ್ಲ
ಕಳೆದ ವರ್ಷ ಭೂಕಂಪ ಪ್ರಳಯದಲ್ಲಿ ಹಲವು ಮಂದಿ ಕೃಷಿಕರಿಗೆ, ವರ್ತಕರಿಗೆ ದೊಡ್ಡ ಮಟ್ಟದ ನಷ್ಟ ಉಂಟಾಗಿದೆ. ಆದರೆ ಸರಕಾರ ಯಾವುದೇ ಪರುಹಾರವನ್ನೂ ನೀಡಿಲ್ಲ. ರಸ್ತೆಯಲ್ಲಿ, ಚರಂಡಿಯಲ್ಲಿ ನೀರು ಹರಿದರೂ, ನದಿಯ ನೀರು ನುಗ್ಗಿ ನಾಶ ನಷ್ಟಗಳು ನಿರಂತರ ಸಂಭವಿಸಿದರೂ ರಾಷ್ಟ್ರೀಯ ಹೆದ್ದಾರಿ ಇಲಾಖೆ, ಗಣಿ ಇಲಾಖೆ ಸೇರಿ ಯಾವುದೇ ಇಲಾಖೆ ಸೂಕ್ತವಾಗಿ ಸ್ಪಂದಿಸುತ್ತಿಲ್ಲ ಎಂದು ಅವರು ದೂರಿದರು.
ಪ್ರಧಾನಿ ಕಚೇರಿಗೆ ದೂರು:
ನದಿಯಲ್ಲಿ ತುಂಬಿದ ಹೂಳು ತೆಗೆಯಬೇಕು, ನದಿ ಬದಿಯಲ್ಲಿ ತಡೆಗೋಡೆ ನಿರ್ಮಿಸಬೇಕು ಎಂದು ಕಳೆದ ಏಳು ತಿಂಗಳಿನಿಂದ ನಿರಂತರ ಪ್ರಯತ್ನ ನಡೆಸಿದರೂ ಸರಕಾರ, ಗಣಿ ಇಲಾಖೆ ಸ್ಪಂದಿಸುತ್ತಿಲ್ಲಾ ಎಂದು ಗ್ರಾಮದ ಹಿರಿಯರಾದ ರವಿಶಂಕರ ಭಟ್ ಹೇಳಿದ್ದಾರೆ. ಸಚಿವರಾದ ಎಸ್.ಅಂಗಾರ, ಆರ್.ಅಶೋಕ್, ಜಿಲ್ಲಾಧಿಕಾರಿ, ಗಣಿ ಇಲಾಖೆಯ ಅಧಿಕಾರಿಗಳು ಸೇರಿ ಎಲ್ಲರಿಗೂ ಮನವಿ ಸಲ್ಲಿಸಿದರೂ ಯಾವುದೇ ಸ್ಪಂದನೆ ಸಿಕ್ಕಿಲ್ಲ. ಕೊನೆಯ ಪ್ರಯತ್ನವಾಗಿ ಈ ದಾಖಲೆಗಳನ್ನು ಇರಿಸಿ ಪ್ರಧಾನಿ ಕಚೇರಿಗೆ ದೂರು ನೀಡುವುದಾಗಿ ಅವರು ಹೇಳಿದ್ದಾರೆ.
ಮುಖ್ಯಮಂತ್ರಿಯೇ ಬಂದರೂ ಪರಿಹಾರ ಇಲ್ಲ-ಟಿ.ಎಂ.ಶಹೀದ್:
ಸಂಪಾಜೆಯಲ್ಲಿ ಭೂಕಂಪ, ಪ್ರಳಯದಿಂದ ಭಾರೀ ಪ್ರಮಾಣದಲ್ಲಿ ನಾಶ ನಷ್ಟ ಉಂಟಾಗಿತ್ತು. ಕೃಷಿಕರು, ವರ್ತಕರು, ಜನ ಸಾಮಾನ್ಯರು ದೊಡ್ಡ ನಷ್ಟವನ್ನು ಅನುಭವಿಸಿದ್ದರು. ಇದರ ವೀಕ್ಷಣೆಗೆ ರಾಜ್ಯದ ಮುಖ್ಯಮಂತ್ರಿ, ಸಚಿವರುಗಳು ಬಂದರೂ ಏನೂ ಪ್ರಯೋಜನ ಆಗಲಿಲ್ಲ. ಯಾರಿಗೂ ಪರಿಹಾರ ಸಿಕ್ಕಿಲ್ಲ ಎಂದು ಕೆಪಿಸಿಸಿ ವಕ್ತಾರ ಟಿ.ಎಂ.ಶಹೀದ್ ತೆಕ್ಕಿಲ್ ಹೇಳಿದ್ದಾರೆ. ನದಿಯಲ್ಲಿರುವ ಹೂಳೆತ್ತಲು ಮತ್ತು ತಡೆಗೋಡೆ ನಿರ್ಮಾಣಕ್ಕೆ ಕ್ರಮ ಕೈಗೊಳ್ಳದಿದ್ದರೆ ಉಗ್ರ ಹೋರಾಟ ನಡೆಸಲಾಗುವುದು ಎಂದು ಅವರು ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಉದ್ಯಮಿ ಪದ್ಮಯ್ಯ ಗೌಡ, ಗ್ರಾಮ ಪಂಚಾಯತ್ ಸದಸ್ಯರಾದ ಜಗದೀಶ್ ರೈ, ಅಬೂಸಾಲಿ ಗೂನಡ್ಕ, ಎಸ್.ಕೆ.ಹನೀಫ ಉಪಸ್ಥಿತರಿದ್ದರು