ಸುಳ್ಯ: ಸಂಪಾಜೆ ಗ್ರಾಮದಲ್ಲಿ ವಿದ್ಯುತ್ ಸಮಸ್ಯೆ ಮುಂದುವರಿದಿದೆ. ಸಂಪಾಜೆಯ ವಿದ್ಯುತ್ ಸಮಸ್ಯೆ ಪರಿಹಾರಕ್ಕೆ 33 ಕೆವಿ ಸಬ್ ಸ್ಟೇಷನ್ ನಿರ್ಮಾಣ ಆಗಬೇಕು ಎಂಬ ಗ್ರಾಮಸ್ಥರ ಹೋರಾಟಕ್ಕೆ ಎರಡೂವರೆ ದಶಕಗಳೇ ಸಂದಿದೆ. ಇಂಧನ ಸಚಿವರೇ ಜಿಲ್ಲಾ ಉಸ್ತುವಾರಿ ಸಚಿವರಾದರೂ ಸಂಪಾಜೆಗೆ ವಿದ್ಯುತ್ ಸಬ್ ಸ್ಟೇಷನ್ ಮರೀಚಿಕೆಯಾಗಿದೆ ಎಂದು ಸಂಪಾಜೆ ಗ್ರಾಮಸ್ಥರು ಬೇಸರ ವ್ಯಕ್ತಪಡಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಂಪಾಜೆ ಗ್ರಾಮ ಪಂಚಾಯತ್ ಅಧ್ಯಕ್ಷ ಜಿ.ಕೆ.ಹಮೀದ್ ಗೂನಡ್ಕ ‘ಸಂಪಾಜೆ, ಚೆಂಬು, ಕಲ್ಲುಗುಂಡಿ ಭಾಗದಲ್ಲಿ
ನಿರಂತರ ವಿದ್ಯುತ್ ಸಮಸ್ಯೆ, ಲೋವೋಲ್ವೇಜ್ ಸಮಸ್ಯೆ ಇದೆ ಇದರಿಂದ
ಕೃಷಿಕರಿಗೆ, ಕುಡಿಯುವ ನೀರಿಗೆ, ವಿದ್ಯಾರ್ಥಿಗಳಿಗೆ ಪರೀಕ್ಷಾ ಸಮಯದಲ್ಲಿ ತೀವ್ರ ಸಮಸ್ಯೆಯಾಗುತ್ತಿದೆ. ಸಂಪಾಜೆಗೆ 33 ಕೆವಿ ಸಬ್ ಸ್ಟೇಷನ್ ಕಾಮಗಾರಿ ಆರಂಭಿಸಬೇಕು ಎಂದು 25 ವರ್ಷದಿಂದ ಬೇಡಿಕೆ ಸಲ್ಲಿಸುತ್ತಾ ಬಂದರೂ ಕೈಗೂಡಿಲ್ಲ. ಸಬ್ ಸ್ಟೇಷನ್ ನಿರ್ಮಾಣಕ್ಕೆ ಸ್ಥಳ ಮಂಜೂರಾತಿ ಆಗಿದೆ. ಆದರೆ ಸಬ್ ಸ್ಟೇಷನ್ ನಿರ್ಮಾಣ ಮಾಡಲು ಕ್ರಮ ಕೈಗೊಂಡಿಲ್ಲ. ಇದೀಗ ನಮ್ಮ ಜಿಲ್ಲೆಯ ಉಸ್ತುವಾರಿ ಸಚಿವರೇ ಇಂಧನ ಸಚಿವರಾಗಿರುವ ಕಾರಣ ಆದಷ್ಟು ಬೇಗ ಸಬ್ ಸ್ಟೇಷನ್ ಕಾಮಗಾರಿ ಆರಂಭಿಸಲು ಕ್ರಮ ಕೈಗೊಳ್ಳಬೇಕು ಎಂದು ಅವರು ಒತ್ತಾಯಿಸಿದರು. ಮಳೆ, ಗಾಳಿ, ಬೆಂಕಿ ಸಮಸ್ಯೆಗೆ ತಕ್ಷಣ ಸ್ಪಂದಿಸಲು ಮೆಸ್ಕಾಂ ಪವರ್ ಮನ್ಗಳನ್ನು ಕಲ್ಲುಗುಂಡಿ ಕೇಂದ್ರ ಸ್ಥಳದಲ್ಲಿ ತಕ್ಷಣ ದೊರಕುವಂತೆ ನೇಮಿಸಬೇಕು ಎಂದು ಅವರು ಆಗ್ರಹಿಸಿದರು.
ಗೋರಕ್ ಸಿಂಗ್ ವರದಿ ಜಾರಿ ಮಾಡಿ:
ಸಂಪಾಜೆ ಗ್ರಾಮದಲ್ಲಿ ಅಡಿಕೆ ಹಳದಿ ರೋಗ ವ್ಯಾಪಿಸಿದ್ದು ವ್ಯಾಪಕ ನಾಶ, ನಷ್ಟ ಸಂಭವಿಸಿದೆ. ಇದುರೆಗೆ ಅದಕ್ಕೆ ಔಷಧಿ ಕಂಡುಹಿಡಿಯಲಿಲ್ಲ. ಅಡಿಕೆ ಕೃಷಿಕರ ಸಮಸ್ಯೆ ಅಧ್ಯಯನ ನಡೆಸಲು ಸರಕಾರ ನೇಮಕ ಮಾಡಿದ ಗೊರಕ್ ಸಿಂಗ್ ಸಮಿತಿ ವರದಿಯನ್ನು ಕೂಡಲೇ ಜಾರಿ ಮಾಡಬೇಕು, ಅಡಿಕೆ ಬೆಳೆಗಾರರ ಸಂಪೂರ್ಣ ಸಾಲ ಮನ್ನಾ ಮಾಡಬೇಕು. ಮತ್ತು ಪರ್ಯಾಯ ಬೆಳೆ ಬೆಳೆಯಲು 10 ಲಕ್ಷ ಬಡ್ಡಿರಹಿತ ಸಾಲ ನೀಡಬೇಕು ಹಾಗೂ ಪ್ರಾಕೃತಿಕ ವಿಕೋಪ ಸಂದರ್ಭದಲ್ಲಿ ಕೃಷಿಗೆ ಹಾನಿಯಾದ ಕೃಷಿಕರಿಗೆ ಸರಿಯಾದ ಪರಿಹಾರ ಸಿಕ್ಕಿರುವುದಿಲ್ಲ. ಈ ಬಗ್ಗೆ ಮತ್ತೊಮ್ಮೆ ಪರಿಶೀಲನೆ ಮಾಡಿ ಪರಿಹಾರ ದೊರಕಿಸಬೇಕು ಎಂದು ಒತ್ತಾಯಿಸಿದರು.
ಸುದ್ದಿಗೋಷ್ಠಿಯಲ್ಲಿ ಕೆಪಿಸಿಸಿ ವಕ್ತಾರ ಟಿ.ಎಂ.ಶಹೀದ್ ತೆಕ್ಕಿಲ್, ರವಿಶಂಕರ ಭಟ್, ಪದ್ಮಯ್ಯ ಗೌಡ,ಗ್ರಾಮ ಪಂಚಾಯತ್ ಸದಸ್ಯರಾದ ಜಗದೀಶ್ ರೈ, ಅಬೂಸಾಲಿ ಗೂನಡ್ಕ, ಎಸ್.ಕೆ.ಹನೀಫ ಉಪಸ್ಥಿತರಿದ್ದರು