ಸಂಪಾಜೆ:ಕಳೆದ ವರ್ಷ ಉಂಟಾದ ಜಲಪ್ರಳಯದ ಕಾರಣದಿಂದ ಸಂಪಾಜೆ ಭಾಗದಲ್ಲಿ ನದಿಗಳಲ್ಲಿ ಮತ್ತು ಹೊಳೆಯಲ್ಲಿ ತುಂಬಿದ ಮರಳು ಮತ್ತು ಹೂಳನ್ನು ತೆಗೆಯುವ ಕಾರ್ಯಾಚರಣೆ ಬಿರುಸಿನಿಂದ ಮುಂದುವರಿದಿದೆ. ಜೂ.7ರಿಂದ ಹೂಳೆತ್ತುವ ಕಾರ್ಯ ಆರಂಭಗೊಂಡಿದೆ. ಕಲ್ಲುಗುಂಡಿ ಕೂಲಿಶೆಡ್ ಬಳಿಯಿಂದ ಹಿಟಾಚಿ ಬಳಸಿ ಹೂಳು ತೆಗೆಯುವ ಕಾರ್ಯ ಆರಂಭಗೊಂಡಿತ್ತು. ಇದೀಗ 4 ಹಿಟಾಚಿ ಬಳಸಿ ವಿವಿಧ ಕಡೆಗಳಲ್ಲಿ
ಕಾರ್ಯಾಚರಣೆ ಮುಂದುವರಿದಿದೆ. ಇಂದಿನಿಂದ ಮತ್ತೆ 2 ಹಿಟಾಚಿ ಯಂತ್ರಗಳು ಹೆಚ್ಚುವರಿಯಾಗಿ ಆಗಮಿಸಿದೆ. ಕೂಲಿಶೆಡ್, ವಿಷ್ಣುಮೂರ್ತಿ ಒತ್ತೆಕೋಲ ಮೈದಾನ ಬಳಿ ಹಾಗೂ ಸುಳ್ಯಕೊಡಿ ಹನುಮಂತ ಗುಡಿ ಬಳಿ ಸೇರಿ ಒಟ್ಟು 4 ಹಿಟಾಚಿ ಯಂತ್ರದ ಮೂಲಕ ಹೂಳೆತ್ತುವ ಕಾರ್ಯ ಭರದಿಂದ ಸಾಗುತ್ತಿದೆ.
ಕಳೆದ ವರ್ಷ ಉಂಟಾದ ಪ್ರಳಯದಲ್ಲಿ ನದಿಗಳಲ್ಲಿ, ಹೊಳೆಗಳಲ್ಲಿ
ತುಂಬಿರುವ ಹೂಳು ಮತ್ತು ಮರಳು ತೆರವು ಮಾಡಬೇಕು ಎಂಬುದು ಗ್ರಾಮದ ಜನರ ಬಹುಮುಖ್ಯ ಬೇಡಿಕೆಯಾಗಿತ್ತು. ಮತ್ತೆ ಪ್ರಳಯ ಉಂಟಾಗುವ ಭೀತಿಯಿಂದ ಕಳೆದ ಒಂದು ವರ್ಷದಿಂದ ಗ್ರಾಮಸ್ಥರು ನಡೆಸಿದ ಹೋರಾಟದಿಂದ ಹೂಳೆತ್ತುವ ಕಾರ್ಯ ಆರಂಭಗೊಂಡಿತ್ತು.
ಸಣ್ಣ ನೀರಾವರಿ ಇಲಾಖೆಯ ನೇತೃತ್ವದಲ್ಲಿ ಹೂಳೆತ್ತುವ ಕಾರ್ಯ ಮುಂದುವರಿದಿದೆ. ‘ಇದೀಗ ಹೆಚ್ಚುವರಿ 2 ಹಿಟಾಚಿ ಯಂತ್ರಗಳು ಬಂದಿದ್ದು, ಹೂಳು ತೆಗೆಯುವ ಕಾರ್ಯಕ್ಕೆ ವೇಗ ಸಿಕ್ಕಿದೆ. ಮಳೆಗಾಲ ಬಿರುಸುಗೊಳ್ಳುವ ಮುನ್ನ ಆದಷ್ಟು ನದಿಯಲ್ಲಿ ತುಂಬಿದ ಹೂಳು, ಮರಳು ತೆರವು ಮಾಡಲು ಪ್ರಯತ್ನ ನಡೆಸಲಾಗುತಿದೆ ಎನ್ನುತ್ತಾರೆ ಸಂಪಾಜೆ ಗ್ರಾಮ ಪಂಚಾಯತ್ ಅಧ್ಯಕ್ಷ ಜಿ.ಕೆ.ಹಮೀದ್ ಗೂನಡ್ಕ.