ಸಂಪಾಜೆ:ಸಂಪಾಜೆ ಗ್ರಾಮ ಪಂಚಾಯತ್ ಸದಸ್ಯರಾದ ಶೌವಾದ್ ಗೂನಡ್ಕ, ಲಿಸ್ಸಿ ಮೊನಾಲಿಸಾ ಹಾಗೂ ವಿಮಲಾ ಪ್ರಸಾದ್ ಅವರ ರಾಜೀನಾಮೆ ಅಂಗೀಕಾರವನ್ನು ರಾಜ್ಯ ಹೈಕೋರ್ಟ್ ರದ್ದುಪಡಿಸಿದೆ. ಮೂವರು ಸದಸ್ಯರು ತಾವು ನೀಡಿದ್ದ ರಾಜೀನಾಮೆಯನ್ನು ಕಾನೂನು ಪ್ರಕಾರ ಹಿಂಪಡೆದಿದ್ದಾರೆ,ಆದುದ್ದರಿಂದ ಮೂವರು ಕೂಡ ಸದಸ್ಯರಾಗಿ ತಮ್ಮ ಅವಧಿಯನ್ನು ಪೊರೈಸಬಹುದು ಎಂದು
ರಾಜೀನಾಮೆ ಅಂಗೀಕಾರವನ್ನು ರಾಜ್ಯ ಹೈಕೋರ್ಟ್ ರದ್ದುಗೊಳಿಸಿ ತೀರ್ಪು ನೀಡಿದೆ. ಸದಸ್ಯರು ತಾವು ನೀಡಿದ ರಾಜಿನಾಮೆ ಹಿಂಪಡೆದಿದ್ದರೂ
ಆಗಿನ ಗ್ರಾಮ ಪಂಚಾಯತ್ ಅಧ್ಯಕ್ಷ ಜಿ.ಕೆ.ಹಮೀದ್ ಅದನ್ನು ಅಂಗೀಕರಿಸಿರುವುದು ಸರಿಯಲ್ಲ ಇದನ್ನು ರದ್ದುಪಡಿಸಬೇಕೆಂದು ಮೂವರು ಸದಸ್ಯರು ಹೈಕೋರ್ಟ್ ಮೆಟ್ಟಿಲೇರಿದ್ದರು.
ಸಂಪಾಜೆಯಲ್ಲಿ ಉಂಟಾದ ರಾಜಕೀಯ ಕಾರಣಗಳಿಂದ 2022 ರ ನವೆಂಬರ್ನಲ್ಲಿ ಸಂಪಾಜೆ ಗ್ರಾಮ ಪಂಚಾಯತ್ ನ ನಾಲ್ವರು ಸದಸ್ಯರುಗಳಾದ ಸೋಮಶೇಖರ್ ಕೊಯಿಂಗಾಜೆ, ಶೌವಾದ್ ಗೂನಡ್ಕ, ಲಿಸ್ಸಿ ಮೊನಾಲಿಸಾ ಹಾಗೂ ವಿಮಲಾ ಪ್ರಸಾದ್ ಅವರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ತದನಂತರ ನಾಲ್ವರು ರಾಜೀನಾಮೆ ಹಿಂಪಡೆದಿದ್ದರು. ಸೋಮಶೇಖರ್ ಕೊಯಿಂಗಾಜೆಯವರನ್ನು ಹೊರತು ಪಡಿಸಿ ಉಳಿದ ಮೂವರ ರಾಜೀನಾಮೆಯನ್ನು ಆಗಿನ ಗ್ರಾಮ ಪಂಚಾಯತ್ ಅಧ್ಯಕ್ಷರಾಗಿದ್ದ ಜಿ.ಕೆ.ಹಮೀದ್ ಅವರು ಅಂಗೀಕರಿಸಿದ್ದರು. ಮೂರು ಸ್ಥಾನಗಳು ತೆರವಾಗಿರುವ ಬಗ್ಗೆ ಅಂದಿನ ಪುತ್ತೂರು ಸಹಾಯಕ ಆಯುಕ್ತರು ಜಿಲ್ಲಾಧಿಕಾರಿಗಳಿಗೆ ವರದಿಯನ್ನು ಸಲ್ಲಿಸಿದ್ದರು. ಇದರ ವಿರುದ್ಧ ಮೂವರು ಸದಸ್ಯರು ರಾಜ್ಯ ಹೈಕೋರ್ಟ್ ಮೆಟ್ಟಿಲೇರಿದ್ದರು.ಅಂಗೀಕಾರಕ್ಕೆ ತಡೆಯಾಜ್ಞೆಯನ್ನು ನೀಡಿದ್ದ ಹೈಕೋರ್ಟ್ ಇದೀಗ ಅಂಗೀಕಾರವನ್ನು ರದ್ದುಗೊಳಿಸಿ ಆದೇಶಿಸಿದೆ ಎಂದು ತಿಳಿದು ಬಂದಿದೆ.
ಖ್ಯಾತ ವಕೀಲರು, ಪ್ರಸ್ತುತ ಶಾಸಕರಾಗಿರುವ ಎ.ಎಸ್.ಪೊನ್ನಣ್ಣ ಹಾಗೂ ಅವರ ಸಹಾಯಕ ವಕೀಲರಾದ ಲೀಲಾ ಪಿ.ದೇವಾಡಿಗ ಅವರು ಮೂವರು ಸದಸ್ಯರುಗಳ ಪರ ವಾದ ಮಂಡಿಸಿದ್ದರು.
ಇದು ಸತ್ಯಕ್ಕೆ ಸಂದ ಜಯ ಎಂದು ಶೌವಾದ್ ಗೂನಡ್ಕ ಅವರು ತೀರ್ಪಿನ ಕುರಿತು ಪ್ರತಿಕ್ರಿಯಿಸಿದ್ದಾರೆ.