ರಾಮನಗರ: ವೃಕ್ಷಮಾತೆ ಶತಾಯುಷಿ ಸಾಲುಮರದ ತಿಮ್ಮಕ್ಕ (114) ಅವರು ವಯೋಸಹಜ ಕಾಯಿಲೆಯಿಂದಾಗಿ ಶುಕ್ರವಾರ ಬೆಂಗಳೂರಿನ ಜಯನಗರದಲ್ಲಿರುವ ಅಪೋಲೊ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ. ಬೆಂಗಳೂರು ದಕ್ಷಿಣ ಜಿಲ್ಲೆಯ ಮಾಗಡಿ ತಾಲ್ಲೂಕಿನ ಹುಲಿಕಲ್ ಗ್ರಾಮದವರಾಗಿರುವ ತಿಮ್ಮಕ್ಕ ಅವರ ಆರೋಗ್ಯದಲ್ಲಿ
ಏರುಪೇರಾಗಿ ಎರಡು ದಿನಗಳ ಹಿಂದೆ ಅಪೋಲೊ ಆಸ್ಪತ್ರೆಗೆ ಸೇರಿಸಲಾಗಿತ್ತು.ಆದರೆ, ಚಿಕಿತ್ಸೆಗೆ ಸ್ಪಂದಿಸದೆ ಕೊನೆಯುಸಿರೆಳೆದರು ಎಂದು ಕುಟುಂಬದ ಮೂಲಗಳು ತಿಳಿಸಿವೆ. ತಿಮ್ಮಕ್ಕ ಮತ್ತು ಚಿಕ್ಕಯ್ಯ ದಂಪತಿಗೆ ಮಕ್ಕಳಿರಲಿಲ್ಲ. ಆ ಕೊರಗು ಮರೆಯಲು ತಿಮ್ಮಕ್ಕ ಅವರು ತಮ್ಮೂರಿನ ರಸ್ತೆ ಬದಿ ಗಿಡಗಳನ್ನು ನೆಟ್ಟರು. ಅವುಗಳನ್ನೇ ತಮ್ಮ ಮಕ್ಕಳೆಂದು ನಿತ್ಯ ನೀರು ಹಾಕಿ, ದನಕರುಗಳು ತಿನ್ನದಂತೆ ನೋಡಿಕೊಂಡು ಪೋಷಿಸಿದರು. ಆ ಗಿಡಗಳೀಗ ದೊಡ್ಡ ಮರಗಳಾಗಿ ಬೆಳೆದು ನಿಂತಿವೆ.
ಗಿಡಗಳನ್ನು ಮಕ್ಕಳಂತೆ ಕಂಡು ಪೋಷಿಸಿ ಸಾವಿರಾರು ಮರಗಳನ್ನು ಬೆಳೆಸಿದ್ದ ತಿಮ್ಮಕ್ಕ ಅವರ ಸಾಧನೆಗೆ 2019ರಲ್ಲಿ ಭಾರತ ಸರ್ಕಾರದ ಅತ್ಯುನ್ನತ ಪ್ರಶಸ್ತಿಗಳಲ್ಲಿ ಒಂದಾದ ‘ಪದ್ಮಶ್ರೀ’ ಪ್ರಶಸ್ತಿ ಸೇರಿದಂತೆ ಅಂತರರಾಷ್ಟ್ರೀಯ, ರಾಷ್ಟ್ರೀಯ ಹಾಗೂ ರಾಜ್ಯಮಟ್ಟದ ಹಲವು ಪ್ರಶಸ್ತಿಗಳು, ಪುರಸ್ಕಾರಗಳು ಹಾಗೂ ಬಿರುದುಗಳು ಸಂದಿವೆ.





