ಬೆಂಗಳೂರು: 86 ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನವನ್ನು ಜನವರಿ 6,7,8 ರಂದು ಮೂರು ದಿನಗಳ ಕಾಲ ಹಾವೇರಿಯಲ್ಲಿ ನಡೆಸುವುದಕ್ಕೆ ರಾಜ್ಯ ಸರಕಾರ ಬುಧವಾರ ನಿರ್ಧರಿಸಿದೆ. ಕನ್ನಡ ಮತ್ತು ಸಂಸ್ಕ್ರತಿ, ಇಂಧನ ಸಚಿವ ವಿ ಸುನಿಲ್ ಕುಮಾರ್, ಕಾರ್ಮಿಕ ಸಚಿವ ಶಿವರಾಂ ಹೆಬ್ಬಾರ್, ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಡಾ.ಮಹೇಶ್ ಜೋಷಿ ನೇತೃತ್ವದಲ್ಲಿ ಪೂರ್ವಭಾವಿ ಸಭೆ ನಡೆದಿದೆ. ಬಳಿಕ ದಿನಾಂಕ
ನಿಗದಿ ಮಾಡಿ ಸಿಎಂ ಬಸವರಾಜ್ ಬೊಮ್ಮಾಯಿ ಅವರ ಜೊತೆ ಚರ್ಚೆ ನಡೆಸಿದ ಸಚಿವ ಸುನೀಲ್ ಕುಮಾರ್ ದಿನಾಂಕ ಘೋಷಣೆ ಮಾಡಿದ್ದಾರೆ.ಸಮ್ಮೇಳನದಲ್ಲಿ 8 ರಿಂದ 10 ಲಕ್ಷ ಜನರು ಭಾಗವಹಿಸುವ ನಿರೀಕ್ಷೆ ಇದ್ದು, ಅದ್ದೂರಿಯಾಗಿ 86ನೇ ಸಾಹಿತ್ಯ ಸಮ್ಮೇಳನವನ್ನು ನಡೆಸಲು ತೀರ್ಮಾನ ತೆಗೆದುಕೊಳ್ಳಲಾಗಿದೆ.ಯಾವುದೇ ನ್ಯೂನ್ಯತೆ ಇಲ್ಲದಂತೆ ಸಾಹಿತ್ಯ ಸಮ್ಮೇಳನ ನಡೆಸಲಾಗುವುದು ಎಂದು ಸುನೀಲ್ ಕುಮಾರ್ ತಿಳಿಸಿದ್ದಾರೆ. ಸಮ್ಮೇಳನ ಹಿನ್ನೆಲೆಯಲ್ಲಿ 45 ದಿನಗಳ ಕಾಲ ಕನ್ನಡ ರಥ ಇಡಿ ರಾಜ್ಯಾದ್ಯಂತ ಮೆರವಣಿಗೆ ನಡೆಸುತ್ತದೆ. 30 ರಿಂದ 40 ಸಾವಿರ ಜನರಿಗೆ ವಸತಿ ವ್ಯವಸ್ಥೆ ಮಾಡಲಾಗುತ್ತದೆ.ಪ್ರತಿ ದಿನ 2.50 ಲಕ್ಷ ಜನರಿಗೆ ಊಟದ ವ್ಯವಸ್ಥೆ ಮಾಡಲಾಗುತ್ತದೆ. 86ನೇ ಕನ್ನಡ ಸಾಹಿತ್ಯ ಸಮ್ಮೇಳನವಾಗಿರುವುದರಿಂದ 86 ಸಾಧಕರಿಗೆ ಈ ಬಾರಿ ಸನ್ಮಾನಿಸಲಾಗುತ್ತದೆ ಎಂದು ಹೇಳಿದರು. ಉದ್ಘಾಟನಾ ಕಾರ್ಯಕ್ರಮ ಸುಮಾರು 50 ಸಾವಿರ ಜನರು ಕುಳಿತುಕೊಳ್ಳುವ ಸಾಮರ್ಥ್ಯ ಇರುವ ಬೃಹತ್ ಸಭಾಂಗಣ ನಿರ್ಮಿಸಲಾಗಿವುದು. ಹಿಂದೆಂದೂ ಕಾಣದಷ್ಟು ಅಚ್ಚುಕಟ್ಟಾಗಿ ಸಮ್ಮೇಳನ ಯಶಸ್ವಿಗೊಳಿಸುವುದಕ್ಕೆ ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದು ವಿವರಿಸಿದರು.