ಸುಳ್ಯ: ಸುಳ್ಯ ತಾಲೂಕು 28ನೇ ಕನ್ನಡ ಸಾಹಿತ್ಯ ಸಮ್ಮೇಳನ ಡಿ.30ರಂದು ಕುಕ್ಕುಜಡ್ಕದ ಚೊಕ್ಕಾಡಿ ವಿದ್ಯಾಸಂಸ್ಥೆಯಲ್ಲಿ ನಡೆಯಲಿದೆ ಎಂದು ಕನ್ನಡ ಸಾಹಿತ್ಯ ಪರಿಷತ್ತು ಹಾಗೂ ಸಾಹಿತ್ಯ ಸಮ್ಮೇಳನ ಸ್ವಾಗತ ಸಮಿತಿ ಪದಾಧಿಕಾರಿಗಳು ತಿಳಿಸಿದ್ದಾರೆ. ಸುಳ್ಯ ಪ್ರೆಸ್ ಕ್ಲಬ್ನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸುಳ್ಯ ಕಸಾಪ ಅಧ್ಯಕ್ಷ ಚಂದ್ರಶೇಖರ ಪೇರಾಲು ಹಾಗೂ ಸಾಹಿತ್ಯ ಸಮ್ಮೇಳನ ಸ್ವಾಗತ ಸಮಿತಿಯ ಅಧ್ಯಕ್ಷ ರಾಧಾಕೃಷ್ಣ ಬೊಳ್ಳೂರು ಕಾರ್ಯಕ್ರಮದ ಕುರಿತು ಮಾಹಿತಿ ನೀಡಿದರು.ಉದ್ಘಾಟನಾ ಸಮಾರಂಭಕ್ಕಿಂತ
ಮುನ್ನ ಪೂ.9ಕ್ಕೆ ಕುಕ್ಕುಜಡ್ಕ ಪೇಟೆಯಿಂದ ಸಮ್ಮೇಳನದ ವೇದಿಕೆ ತನಕ ಕನ್ನಡ ಭುವನೇಶ್ವರಿಯ ಮೆರವಣಿಗೆ ನಡೆಯಲಿದೆ.ಮಾಜಿ ಸಚಿವ ಎಸ್.ಅಂಗಾರ ಮೆರವಣಿಗೆಗೆ ಚಾಲನೆ ನೀಡುವರು.
ಅಮರಮುಡ್ನೂರು ಗ್ರಾಮ ಪಂಚಾಯತ್ ಅಧ್ಯಕ್ಷೆ ಜಾನಕಿ ಕಂದಡ್ಕ ರಾಷ್ಟ್ರ ಧ್ವಜಾರೋಹಣ, ಕಸಾಪ ಜಿಲ್ಲಾಧ್ಯಕ್ಷ ಡಾ.ಶ್ರೀನಾಥ ಎಂ.ಪಿ. ಪರಿಷತ್ತಿನ ಧ್ವಜಾರೋಹಣ ನೆರವೇರಿಸುವರು.ಕಸಾಪ ಸುಳ್ಯ ತಾಲೂಕು ಅಧ್ಯಕ್ಷ ಚಂದ್ರಶೇಖರ ಪೇರಾಲು ಕನ್ನಡ ಧ್ವಜಾರೋಹಣ ನೆರವೇರಿಸುವರು.
ಹಿರಿಯ ಸಾಹಿತಿ ಕೆ.ಆರ್.ತೇಜಕುಮಾರ್ ಬಡ್ಡಡ್ಕ ಅಧ್ಯಕ್ಷತೆಯಲ್ಲಿ ನಡೆಯುವ ಸಮ್ಮೇಳನವನ್ನು ಸಾಹಿತಿ ಕೆ.ಪಿ.ಸುರೇಶ ಕಂಜರ್ಪಣೆ ಉದ್ಘಾಟಿಸಿವರು. ಶಾಸಕಿ ಭಾಗೀರಥಿ ಮುರುಳ್ಯ ಸ್ಮರಣ ಸಂಚಿಕೆಯನ್ನು ಹಾಗೂ ಅರೆಭಾಷೆ ಸಾಹಿತ್ಯ ಮತ್ತು ಸಂಸ್ಕೃತಿ ಅಕಾಡೆಮಿ ಅಧ್ಯಕ್ಷ ಸದಾನಂದ ಮಾವಜಿ ಹೊಸ ಕೃತಿಗಳ ಬಿಡುಗಡೆ ಮಾಡುವರು.ಕುಕ್ಕುಜಡ್ಕ ಚೊಕ್ಕಾಡಿ ಪ್ರೌಢಶಾಲೆಯ ಸಂಚಾಲಕ ರಾಧಾಕೃಷ್ಣ ಬೊಳ್ಳೂರು, ಸಮ್ಮೇಳನ ಸ್ವಾಗತ ಸಮಿತಿಯ ಕಾರ್ಯಾಧ್ಯಕ್ಷ ಕೃಷ್ಣ ಪ್ರಸಾದ್ ಮಾಡಬಾಕಿಲು ಉಪಸ್ಥಿತರಿರುವರು.

ಅಪರಾಹ್ನ 12ರಿಂದ ಸಮ್ಮೇಳನಾಧ್ಯಕ್ಷರ ಸಾಹಿತ್ಯ ಅವಲೋಕನ ನಡೆಯಲಿದ್ದು ಸಾಹಿತಿ ಸಂಜೀವ ಕುದ್ಪಾಜೆ ಸಾಹಿತ್ಯ ಪರಿಚಯ ಮಾಡುವರು. 12.20ರಿಂದ ಡಾ.ಶಾಲಿನಿ ಡಿ.ಎಲ್. ಅಧ್ಯಕ್ಷತೆಯಲ್ಲಿ ಕವಿಗೋಷ್ಠಿ ನಡೆಯಲಿದೆ.1.30ರಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿದೆ. ಅ.2ರಿಂದ ಖ್ಯಾತ ಅರ್ಥಧಾರಿ ಜಬ್ಬಾರ್ ಸಮೋ ಅಧ್ಯಕ್ಷತೆಯಲ್ಲಿ ವಿಚಾರಗೋಷ್ಠಿ ನಡೆಯಲಿದೆ. ರಾಧೇಶ್ ತೋಳ್ಪಾಡಿ, ಅರವಿಂದ ಚೊಕ್ಕಾಡಿ ವಿಚಾರ ಮಂಡಿಸುವರು. ಅ.3.15ರಿಂದ ಕಾವ್ಯ ಕುಂಚ ಗಾಯನ ನಡೆಯಲಿದೆ.
ಸಂಜೆ 4ರಿಂದ ಸಮಾರೋಪ ಸಮಾರಂಭ ಹಾಗೂ ಕನ್ನಡ ಕಸ್ತೂರಿ ಸನ್ಮಾನ ನಡೆಯಲಿದೆ. ಕಸಾಪ ಜಿಲ್ಲಾಧ್ಯಕ್ಷ ಡಾ.ಎಂ.ಪಿ.ಶ್ರೀನಾಥ ಅಧ್ಯಕ್ಷತೆ ವಹಿಸುವರು.ಖ್ಯಾತ ಸಾಹಿತಿ ಡಾ.ನಾ.ಸೋಮೇಶ್ವರ ಸಮಾರೋಪ ಭಾಷಣ ಮಾಡುವರು.ಅಕಾಡೆಮಿ ಆಪ್ ಲಿಬರಲ್ ಎಜ್ಯುಕೇಷನ್ನ ಅಧ್ಯಕ್ಷ ಡಾ.ಕೆ.ವಿ.ಚಿದಾನಂದ ಸಾಧಕರನ್ನು ಸನ್ಮಾನಿಸುವರು. ಮುಖ್ಯ ಅತಿಥಿಗಳಾಗಿ ಚೊಕ್ಕಾಡಿ ಸಹಕಾರ ಸಂಘದ ಅಧ್ಯಕ್ಷ ಕೇಶವ ಕರ್ಮಾಜೆ, ವ್ಯಂಗ್ಯಚಿತ್ರಕಾರ ದಿನೇಶ್ ಕುಕ್ಕುಜಡ್ಕ, ಸುಳ್ಯ ತಾ.ಪಂ.ಇಒ ರಾಜಣ್ಣ, ಕಸಾಪ ಮಾಜಿ ಅಧ್ಯಕ್ಷ ಡಾ.ಹರಪ್ರಸಾದ್ ತುದಿಯಡ್ಕ, ಕ್ಷೇತ್ರ ಶಿಕ್ಷಣಾಧಿಕಾರಿ ಶೀತಲ್.ಯು.ಕೆ. ಭಾಗವಹಿಸುವರು. ವಿವಿಧ ಕ್ಷೇತ್ರದಲ್ಲಿ

ಸಾಧನೆ ಮಾಡಿದ ಸಾಧಕರಿಗೆ ಕನ್ನಡ ಕಸ್ತೂರಿ ಪುರಸ್ಕಾರ ನೀಡಿ ಗೌರವಿಸಲಾಗುವುದು. ಬಳಿಕ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ನೃತ್ಯ ವೈಭವ, ಸಾಲು ಮರಗಳ ತಾಯಿ ತಿಮ್ಮಕ್ಕ ನಾಟಕ ಪ್ರದರ್ಶನಗೊಳ್ಳಲಿದೆ ಎಂದು ಚಂದ್ರಶೇಖರ ಪೇರಾಲು ಹಾಗೂ ರಾಧಾಕೃಷ್ಣ ಬೊಳ್ಳೂರು ವಿವರಿಸಿದರು.
ಸುದ್ದಿಗೋಷ್ಠಿಯಲ್ಲಿ ಸಮ್ಮೇಳನ ಸಮಿತಿಯ ಕಾರ್ಯಾಧ್ಯಕ್ಷ ಕೃಷ್ಣಪ್ರಸಾದ್ ಮಾಡಬಾಕಿಲು, ಕಸಾಪ ಸುಳ್ಯ ಹೋಬಳಿ ಘಟಕದ ಅಧ್ಯಕ್ಷೆ ಚಂದ್ರಾವತಿ ಬಡ್ಡಡ್ಕ, ಕಸಾಪ ಗೌರವ ಕಾರ್ಯದರ್ಶಿ ತೇಜಸ್ವಿ ಕಡಪಳ, ಕೋಶಾಧಿಕಾರಿ ದಯಾನಂದ ಆಳ್ವ, ಚೊಕ್ಕಾಡಿ ವಿದ್ಯಾಸಂಸ್ಥೆ ಕುಕ್ಕುಜಡ್ಕ ಇಲ್ಲಿಯ ಮುಖ್ಯ ಶಿಕ್ಷಕ ಸಂಕೀರ್ಣ ಚೊಕ್ಕಾಡಿ, ಕಸಾಪ ಕಾರ್ಯಕಾರಿ ಸಮಿತಿ ಸದಸ್ಯರಾದ ಲತಾಶ್ರೀ ಸುಪ್ರೀತ್ ಮೋಂಟಡ್ಕ, ಶಶ್ಮಿ ಭಟ್ ಅಜ್ಜಾವರ ಉಪಸ್ಥಿತರಿದ್ದರು.













