ಹಾವೇರಿ: ನಗರದಲ್ಲಿ 2023ರ ಜನವರಿ 6,7 ಮತ್ತು 8ರಂದು ನಡೆಯಲಿರುವ 86ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಲಾಂಛನವನ್ನು ಶನಿವಾರ ಬಿಡುಗಡೆ ಮಾಡಲಾಯಿತು.ಇಲ್ಲಿಯ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಶಿವರಾಮ ಹೆಬ್ಬಾರ್ ಮತ್ತು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ವಿ.ಸುನಿಲ್‌ಕುಮಾರ್ ನೇತೃತ್ವದಲ್ಲಿ ಸಾಹಿತ್ಯ ಸಮ್ಮೇಳನದ ಪೂರ್ವಭಾವಿ ಸಭೆ ನಡೆಯಿತು. ಸಚಿವ ವಿ.ಸುನಿಲ್‌ಕುಮಾರ್ ಮಾತನಾಡಿ, ಸಾಹಿತ್ಯ
ಸಮ್ಮೇಳನಕ್ಕೆ ಸುಮಾರು 3 ಲಕ್ಷ ಜನರು ಬರುವ ನಿರೀಕ್ಷೆಯಿದೆ. ನಗರದಲ್ಲಿ ಕನಿಷ್ಠ 25 ಸಾವಿರ ಮಂದಿಗೆ ವಸತಿ ವ್ಯವಸ್ಥೆ ಕಲ್ಪಿಸಬೇಕು.‘ಕನಕ–ಷರೀಫ–ಸರ್ವಜ್ಞ’ ಹೆಸರಿನ ಪ್ರಧಾನ ವೇದಿಕೆ ಹಾಗೂ ‘ಪಾಪು–ಚಂಪಾ’ ಮತ್ತು ‘ಹೊಸಮನಿ ಸಿದ್ದಪ್ಪ–ಮಹದೇವ ಬಣಕಾರ’ ಹೆಸರಿನ 2 ಉಪ ವೇದಿಕೆಗಳನ್ನು ನಿರ್ಮಾಣ ಮಾಡಬೇಕು ಎಂದು ಸೂಚಿಸಿದರು. ಕಸಾಪ ಅಧ್ಯಕ್ಷ ಮಹೇಶ ಜೋಶಿ ಮಾತನಾಡಿದರು.
ರಾಣೆಬೆನ್ನೂರಿನ ಕೃಷ್ಣಮೃಗ, ಯಾಲಕ್ಕಿ ಹಾರ, ಬ್ಯಾಡಗಿ ಮೆಣಸಿನಕಾಯಿ, ಬಂಕಾಪುರದ ನವಿಲುಧಾಮ, ಭುವನೇಶ್ವರಿ ದೇವಿ, ಮದಗ ಮಾಸೂರು ಕೆರೆ, ಗಳಗನಾಥೇಶ್ವರ ದೇವಾಲಯ, ಹಾವೇರಿಯ ಪುರಸಿದ್ಧೇಶ್ವರ ದೇವಾಲಯ, ಹಾನಗಲ್ ಕುಮಾರ ಶಿವಯೋಗಿ, ವಿ.ಕೃ. ಗೋಕಾಕ್, ಅಂಬಿಗರ ಚೌಡಯ್ಯ, ಸರ್ವಜ್ಞ, ಕನಕದಾಸರು, ಶಿಶುನಾಳ ಷರೀಫ, ಪಂಚಾಕ್ಷರಿ ಗವಾಯಿ, ಶರಣೆ ಹೆಳವನಕಟ್ಟೆ ಗಿರಿಯಮ್ಮ, ಸ್ವಾತಂತ್ರ್ಯ ಹೋರಾಟಗಾರ ಹುತಾತ್ಮ ಮೈಲಾರ ಮಹದೇವಪ್ಪ, ಕಾದಂಬರಿ ಪಿತಾಮಹ ಗಳಗನಾಥ, ಜಾನಪದ ವಿವಿ ಧ್ಯೇಯ ವಾಕ್ಯ, ಕಸಾಪ ಕೇಂದ್ರ ಕಚೇರಿಯ ಚಿತ್ರಗಳನ್ನು ಲಾಂಛನ ಒಳಗೊಂಡಿದೆ.