ಅರಂತೋಡು: ಅರಂತೋಡು- ತೊಡಿಕಾನ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದಲ್ಲಿ ನ. 17ರಂದು ಸಹಕಾರಿ ಸಪ್ತಾಹ ಕಾರ್ಯಕ್ರಮ ನಡೆಯಲಿದ್ದು, ಇದರ ಪೂರ್ವಭಾವಿ ಸಭೆಯು ಅ. 29 ರಂದು ಸೊಸೈಟಿಯ ಸಿರಿಸೌಧ ಸಭಾಭವನದಲ್ಲಿ ನಡೆಯಿತು. ಅಧ್ಯಕ್ಷತೆಯನ್ನು ಸುಳ್ಯ ತಾಲೂಕು ಸಹಕಾರಿ ಯೂನಿಯನ್ ಅಧ್ಯಕ್ಷ ರಮೇಶ್ ದೇಲಂಪಾಡಿ ವಹಿಸಿದ್ದರು. ನ. 17ರಂದು ನಡೆಯುವ ಸಹಕಾರಿ ಸಪ್ತಾಹದ ಬಗ್ಗೆ
ಅರಂತೋಡು- ತೊಡಿಕಾನ ಸಹಕಾರ ಸಂಘದ ಅಧ್ಯಕ್ಷ ಸಂತೋಷ್ ಕುತ್ತಮೊಟ್ಟೆ ಸಭೆಗೆ ವಿವರಿಸಿದರು. ನ 13ರಂದು ಎಲ್ಲಾ ಸಹಕಾರಿ ಸಂಘದ ಸಿಬ್ಬಂದಿಗಳಿಗೆ ಕ್ರಿಕೆಟ್ ಪಂದ್ಯಾಟ ನಡೆಸಲಾಗುವುದು. ಅಲ್ಲದೆ ಮಹಿಳಾ ಸಿಬ್ಬಂದಿಗಳಿಗೆ ವಿಶೇಷ ಆಟೋಟ ಸ್ಪರ್ಧೆಯನ್ನು ನಡೆಸಲಾಗುವುದೆಂದು ತೀರ್ಮಾನಿಸಲಾಯಿತು. ವಸಂತ ಭಟ್ ತೊಡಿಕಾನ ಅವರ ಸ್ಮರಣಾರ್ಥ ಸಹಕಾರ ಸಾಂತ್ವಾನ ನಿಧಿ ಲೋಕಾರ್ಪಣ ಕಾರ್ಯಕ್ರಮ ಹಮ್ಮಿಕೊಳ್ಳುವುದೆಂದು ತೀರ್ಮಾನಿಸಲಾಯಿತು.
2021-22 ನೇ ಸಾಲಿನ ನಿವೃತ್ತ ಸಹಕಾರಿ ಸಂಘದ ಸಿಬ್ಬಂದಿಗಳನ್ನು ಅಭಿನಂದಿಸುವ ಕಾರ್ಯಕ್ರಮ, ಯಶಸ್ವಿನಿ ವಿಮೆಯ ಬಗ್ಗೆ, ಸರಕಾರಿ ಮತ್ತು ಸಹಕಾರ ಸಂಘದ ವೇತನ ಪಡೆಯುವ ಸಿಬ್ಬಂದಿಗಳಿಗೆ ಯಶಸ್ವಿನಿ ಅನ್ವಯವಾಗುವುದಿಲ್ಲ ಎಂಬುದರ ಬಗ್ಗೆ, ಇದನ್ನು ಸರಿಪಡಿಸುವ ಬಗ್ಗೆ, ರೇಷನ್ ವಿತರಣೆಯ ಸಮಸ್ಯೆಯ ಬಗ್ಗೆ ಚರ್ಚಿಸಲಾಯಿತು.
ವೇದಿಕೆಯಲ್ಲಿ ನೆಲ್ಲೂರು ಕೆಮ್ರಾಜೆ ಸಹಕಾರಿ ಸಂಘದ ಅಧ್ಯಕ್ಷ ವಿಷ್ಣು ಭಟ್,
ಚೊಕ್ಕಾಡಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಕೇಶವ ಕರ್ಮಾಜೆ, ಅರಂತೋಡು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಉಪಾಧ್ಯಕ್ಷ ದಯಾನಂದ ಕುರುಂಜಿ ಉಪಸ್ಥಿತರಿದ್ದರು.