ಅರಂತೋಡು: ಸಹಕಾರಿ ಸಂಸ್ಥೆಗಳು ಊರಿನ ಜನರ ನಾಡಿಮಿಡಿತವಾಗಬೇಕು ಅವರ ಕಷ್ಟ ಸುಖಗಳಲ್ಲಿ ಪಾಲ್ಗೊಂಡು ಜನರ ಅವಶ್ಯಕತೆಗಳನ್ನು ಪೂರೈಸುವ ಸಂಸ್ಥೆಯಾಗಬೇಕು. ಜನರು ಆರ್ಥಿಕವಾಗಿ ಸದೃಢವಾಗಲು ಸಹಕಾರಿ ಸಂಸ್ಥೆಗಳು ಪ್ರೇರಣೆಯಾಗಬೇಕೆಂದು ಅಕಾಡೆಮಿ ಆಫ್ ಲಿಬರಲ್ ಎಜ್ಯುಕೇಶನ್‌ನ ಪ್ರಧಾನ ಕಾರ್ಯದರ್ಶಿ, ರಾಜ್ಯ ಒಕ್ಕಲಿಗರ ಸಂಘದ ಉಪಾಧ್ಯಕ್ಷರಾದ ಡಾ. ರೇಣುಕಾ ಪ್ರಸಾದ್ ಕೆ.ವಿ ಅಭಿಪ್ರಾಯ ಪಟ್ಟರು. ಅವರು ಕರ್ನಾಟಕ ರಾಜ್ಯ ಸಹಕಾರ ಮಹಾ ಮಂಡಳಿ ಬೆಂಗಳೂರು, ದಕ್ಷಿಣ ಕನ್ನಡ ಜಿಲ್ಲಾ ಸಹಕಾರಿ ಯೂನಿಯನ್ ಮಂಗಳೂರು, ಸಹಕಾರಿ ಯೂನಿಯನ್ ಸುಳ್ಯ ತಾಲೂಕುಮತ್ತು ಸುಳ್ಯ ತಾಲೂಕಿನ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘಗಳ ಆಶ್ರಯದಲ್ಲಿ
ಅರಂತೋಡು ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಆತಿಥ್ಯದಲ್ಲಿ ನಡೆದ ಅಖಿಲ ಭಾರತ ಸಹಕಾರಿ ಸಪ್ತಾಹದಲ್ಲಿ ಇ – ಸ್ಟ್ಯಾಂಪಿಂಗ್ ವ್ಯವಸ್ಥೆಯನ್ನು ಉದ್ಘಾಟನೆ ಮಾಡಿ ಮಾತನಾಡುತ್ತಿದ್ದರು.
ಶತಮಾನಗಳನ್ನು ಕಂಡ ಈ ಸಂಸ್ಥೆ ಹಲವು ಜನರ ಆಡಳಿತದಲ್ಲಿ ಮುನ್ನಡೆದು ಈ ಭಾಗದ ಜನರ ನಾಡಿ ಮಿಡಿತವಾಗಿ ರೂಪುಗೊಂಡಿದೆ. ಈ ಭಾಗದ ಜನರ ಕಷ್ಟ ಸುಖದಲ್ಲಿ ಪಾಲ್ಗೊಂಡ ಸಂಸ್ಥೆಯೆಂಬ ಹೆಗ್ಗಳಿಕೆ ಪಡೆದುಕೊಂಡಿದೆ. ಕೊರೋನಾದಂತಹ ಸಂಕಷ್ಟ ಕಾಲದಲ್ಲಿ ಸಮೃದ್ಧಿ ಮಾರ್ಟ್ ತೆರೆದು ಜನರ ಮನೆ ಮನೆಗೆ ದಿನ ನಿತ್ಯದ ಸಾಮಾಗ್ರಿಗಳನ್ನು ರವಾನೆ ಮಾಡಿ ಜನರ ಮನಸ್ಸನ್ನು ಗೆದ್ದಿದೆ. ಅಲ್ಲದೇ ಕಡು ಬಡವರಿಗೆ ಉಚಿತವಾಗಿ ಪಡಿತರ ಹಂಚಿದ ಕೀರ್ತಿ ಈ ಸಂಸ್ಥೆಗಿದೆ. ಈ ಸಂಸ್ಥೆಯಲ್ಲಿ ಇ – ಸ್ಟ್ಯಾಂಪಿಂಗ್ ಸೇವೆಯನ್ನು ಪ್ರಾರಂಭಿಸಿರುವುದು ಅಭಿನಂದನೀಯ. ನಿಮ್ಮಿಂದ ಇನ್ನಷ್ಟು ಒಳ್ಳೆಯ ಕೆಲಸಗಳನ್ನು ಮೂಲಕ ಈ ಸಂಸ್ಥೆ ಇಡೀ ರಾಜ್ಯಕ್ಕೆ, ರಾಷ್ಟçಕ್ಕೆ ಮಾದರಿಯಾಗಲಿ ಎಂದು ಶುಭ ಹಾರೈಸಿದರು.
ವೇದಿಕೆಯಲ್ಲಿ ಸಂಘದ ಅಧ್ಯಕ್ಷ ಸಂತೋಷ್ ಕುತ್ತಮೊಟ್ಟೆ, ಪುತ್ತೂರು ವಿಧ್ಯಾವರ್ಧಕ ಸಂಘದ ಅಧ್ಯಕ್ಷ ಡಾ. ಪ್ರಭಾಕರ್ ಭಟ್ ಕಲ್ಲಡ್ಕ, ಭೂ ಬ್ಯಾಂಕಿನ ಮಾಜಿ ಅಧ್ಯಕ್ಷ ಹರೀಶ್ ಕಂಜಿಪಿಲಿ, ಭಾರತೀಯ ರಬ್ಬರ್ ಮಂಡಳಿಯ ನಿರ್ದೇಶಕ ಮುಳಿಯ ಕೇಶವ ಭಟ್, ಜಿಲ್ಲಾ ಸಹಕಾರಿ ಯೂನಿಯನ್‌ನ ಮಾಜಿ ಅಧ್ಯಕ್ಷ ದಿವಾಕರ್ ರೈ, ಸುಬ್ರಹ್ಮಣ್ಯ ದೇವಸ್ಥಾನದ ಆಡಳಿತ ಮಂಡಳಿ ಮಾಜಿ ಅಧ್ಯಕ್ಷ ನಿತ್ಯಾನಂದ ಮುಂಡೋಡಿ, ಅರಂತೋಡು ಗ್ರಾಮ ಪಂಚಾಯತ್ ಅಧ್ಯಕ್ಷೆ ಹರಿಣಿ, ಜಿಲ್ಲಾ ಸಹಕಾರಿ ಯೂನಿಯನ್ ನಿರ್ದೇಶಕಿ ಸಾವಿತ್ರಿ ರೈ ಮತ್ತಿತರರು ಉಪಸ್ಥಿತರಿದ್ದರು