ಶಬರಿಮಲೆ: ಶಬರಿಮಲೆ ಶ್ರೀ ಅಯ್ಯಪ್ಪ ಕ್ಷೇತ್ರದಲ್ಲಿ ಮಂಡಲ ವಿಳಕ್ಕು ಮಹೋತ್ಸವಕ್ಕಾಗಿ ಕ್ಷೇತ್ರದ ಬಾಗಿಲು ಭಾನುವಾರ ಸಂಜೆ ತೆರೆಯಲಾಯಿತು.ಶ್ರೀ ಕ್ಷೇತ್ರದ ತಂತ್ರಿ ಕಂಠರ್ ಮಹೇಶ್ ಮೋಹನರ ಅವರ ನೇತೃತ್ವದಲ್ಲಿ ಪ್ರಧಾನ ಅರ್ಚಕ ಅರುಣ್ ಕುಮಾರ್ ನಂಬೂದಿರಿ ಅವರು ಗರ್ಭಗುಡಿಯ ಬಾಗಿಲು ತೆರೆದು ಪೂಜಾ ವಿಧಿ ವಿಧಾನಗಳನ್ನು ನೆರವೇರಿಸಿದರು. ಬಳಿಕ ಶಬರಿಮಲೆಯ
ನೂತನ ಪ್ರಧಾನ ಅರ್ಚಕರಾಗಿ ಇ.ಡಿ.ಪ್ರಸಾದ್ ಹಾಗೂ ಮಾಳಿಗಪುರಂ ಕ್ಷೇತ್ರದ ನೂತನ ಪ್ರಧಾನ ಅರ್ಚಕರಾಗಿ ಎಂ.ಜಿ.ಮನು ನಂಬೂದಿರಿ ಜವಾಬ್ದಾರಿ ವಹಿಸಿಕೊಂಡರು.
ನಿಯೋಜಿತ ಅರ್ಚಕರು ಪ್ರಥಮವಾಗಿ 18 ಮೆಟ್ಟಿಲು ಏರಿ ದರ್ಶನ ಪಡೆದರು.ಸೋಮವಾರದಿಂದ ನೂತನ ಅರ್ಚಕರು ಗರ್ಭಗುಡಿಯ ಭಾಗಿಲು ತೆರೆದು ಪೂಜಾ ಕೈಂಕರ್ಯ ನೆರವೇರಿಸಲಿದ್ದಾರೆ.
ಶಬರಿಮಲೆ ದೇವಸ್ಥಾನವು ಮಂಡಲ ಪೂಜೆ, ಮಕರ ಜ್ಯೋತಿ ಉತ್ಸವಕ್ಕಾಗಿ
ತೆರೆದುಕೊಂಡಿದೆ. ಎರಡು ತಿಂಗಳಿಗೂ ಹೆಚ್ಚು ಕಾಲ ವಾರ್ಷಿಕ ತೀರ್ಥಯಾತ್ರೆ ನಡೆಯಲಿದೆ. ಇನ್ನು ಎರಡು ತಿಂಗಳ ಕಾಲ ಭಕ್ತರು ದರ್ಶನಕ್ಕಾಗಿ ಶಬರಿಮಲೆಯ ಅಯ್ಯಪ್ಪ ದೇವಾಲಯಕ್ಕೆ ತಲೆಯಲ್ಲಿ ಇರುಮುಡಿ ಕಟ್ಟು, ಕಂಠದಲ್ಲಿ ಶರಣ ಘೋಷಗಳೊಂದಿಗೆ ಹರಿದು ಬರಲಿದ್ದಾರೆ.





