ಶಬರಿಮಲೆ: ಶಬರಿಮಲೆ ಅಯ್ಯಪ್ಪ ದೇವಾಲಯದ ವಾರ್ಷಿಕ ಮಕರವಿಳಕ್ಕು ಉತ್ಸವ ಬುಧವಾರ ನಡೆಯಲಿದೆ. ಸಂಜೆ 6.45ರ ವೇಳೆಗೆ ಪೊನ್ನಂಬಲ ಮೇಡಿನಲ್ಲಿ ಮಕರ ಜ್ಯೋತಿ ದರ್ಶನವಾಗಲಿದೆ. ಮಧ್ಯಾಹ್ನದ ಬಳಿಕ 3.08ಕ್ಕೆ ಮಕರ ಸಂಕ್ರಮಣ ಪೂಜೆ ನಡೆಯಲಿದೆ. ಸಂಜೆ 6.25ಕ್ಕೆ ತಿರುವಾಭರಣ
ಹೊತ್ತ ಯಾತ್ರೆ ಸನ್ನಿಧಾನ ತಲುಪಲಿದೆ. ತಂತ್ರಿ ಕಂಠರ್ ಮಹೇಶ್ ಮೋಹನರು, ಮುಖ್ಯ ಅರ್ಚಕರಾದ ಇ.ಡಿ.ಪ್ರಸಾದ್ ನಂಬೂತಿರಿ ಅವರು ಸೇರಿ ಸ್ವಾಗತಿಸುವರು. ಬಳಿಕ ಅಯ್ಯಪ್ಪ ವಿಗ್ರಹದಲ್ಲಿ ತಿರುವಾಭರಣಂ ಧರಿಸಿ ದೀಪಾರಾಧನೆ ನಡೆಯುಯುತ್ತಿದ್ದಂತೆ ಆಕಾಶದಲ್ಲಿ ಉತ್ರಂ ನಕ್ಷತ್ರ ಮತ್ತು ಪೊನ್ನಂಬಲಮೇಡಿನಲ್ಲಿ ಮಕರ ಜ್ಯೋತಿ ಕಾಣಿಸಿಕೊಳ್ಳಲಿದೆ. ಮಕರ ವಿಳಕ್ಕು ಪ್ರಯುಕ್ತ ವ್ಯಾಪಕ ಭದ್ರತೆ ಕೈಗೊಳ್ಳಲಾಗಿದೆ. ದೇವಾಲಯದಲ್ಲಿ ಸುಮಾರು 2000 ಪೊಲೀಸ್ ಸಿಬ್ಬಂದಿಯನ್ನು ನಿಯೋಜಿಸಲಾಗುವುದು ಎಂದು ದೇವಾಲಯವನ್ನು ನಿರ್ವಹಿಸುವ ತಿರುವಾಂಕೂರು ದೇವಸ್ವಂ ಮಂಡಳಿ ಮಂಗಳವಾರ ಹೇಳಿದೆ.
ಸನ್ನಿಧಾನಂ, ಪಂಪಾ ಮತ್ತು ಇತರ ಸೂಕ್ಷ್ಮ ಸ್ಥಳಗಳಲ್ಲಿ ಅಗ್ನಿಶಾಮಕ, ಆಂಬುಲೆನ್ಸ್ಗಳು ಮತ್ತು ಇತರ ರಕ್ಷಣಾ ಸೇವೆಗಳ ಘಟಕಗಳ ತಂಡಗಳನ್ನು ವಾಹನಗಳೊಂದಿಗೆ ನಿಯೋಜಿಸಲಾಗಿದೆ ಎಂದು ಟಿಡಿಬಿ ಹೇಳಿದೆ.












