ಶಬರಿಮಲೆ: ಶಬರಿಮಲೆ ಅಯ್ಯಪ್ಪ ಸ್ವಾಮಿ ಸನ್ನಿಧಿಯಲ್ಲಿ ಲಕ್ಷಾಂತರ ಮಂದಿ ಭಕ್ತರು ಮಕರಜ್ಯೋತಿ ದರ್ಶನ ಪಡೆದರು. ಶಬರಿಮಲೆ ಮತ್ತು ಇತರ ವೀಕ್ಷಣಾ ಸ್ಥಳಗಳು ಸೇರಿದಂತೆ ಲಕ್ಷಾಂತರ ಅಯ್ಯಪ್ಪ ಭಕ್ತರು ಮಕರಜ್ಯೋತಿಯನ್ನು ವೀಕ್ಷಿಸಿದರು. ಮಕರ ಜ್ಯೋತಿ ದರ್ಶನವಾಗುತ್ತಿದ್ದಂತೆ
ಭಕ್ತರು ಸ್ವಾಮಿಯೇ ಶರಣಂ ಅಯ್ಯಪ್ಪ ಎಂದು ಶರಣಂ ಕರೆದು ಜ್ಯೋತಿಯ ದರ್ಶನ ಪಡೆದರು. ಪಂದಳಂದಿಂದ ತರಲಾದ
ತಿರುವಾಭರಣಂ ಅಯ್ಯಪ್ಪ ವಿಗ್ರಹದಲ್ಲಿ ತೊಡಿಸಿ ಅಲಂಕಾರಗೊಂಡು ದೀಪಾರಾಧನೆಯ ನಂತರ ಗರ್ಭಗುಡಿ ಬಾಗಿಲು ತೆರೆಯಲಾಯಿತು. ಬಾನಲ್ಲಿ ಮಕರ ನಕ್ಷತ್ರ ಉದಯಿಸಿದ ಸಂದರ್ಭದಲ್ಲಿ ಪೊನ್ನಂಬಲಮೇಡಿನಲ್ಲಿ ಮಕರಜ್ಯೋತಿ ಬೆಳಗಿತು. ಪೊನ್ನಂಬಲ ಮೇಡಿನಲ್ಲಿ ಮಕರಜ್ಯೋತಿ ಮೂರು ಬಾರಿ ಬೆಳಗಿತು. ಬುಧವಾರ 3.08ಗಂಟೆಗೆ ಮಕರ ಸಂಕ್ರಮ ಪೂಜೆ ನಡೆಯಿತ. ಸಂಜೆ ದೇವಾಲಯದಲ್ಲಿ ವಿಶೇಷ ಪೂಜೆ ನಡೆಯಿತು. ಪಂದಳಂನಿಂದ
ಆರಂಭವಾದ ತಿರುವಾಭರಣ ಮೆರವಣಿಗೆಯನ್ನು ದೇವಸ್ವಂ ಅಧಿಕಾರಿಗಳು ಶರಂಕುತ್ತಿಯಲ್ಲಿ ಬರಮಾಡಿಕೊಂಡರು. ಅಯ್ಯಪ್ಪನಿಗೆ ತೊಡುವ ತಿರುವಾಭರಣವನ್ನು ದೇವಸ್ವಂ ಅಧಿಕಾರಿಗಳು ಸ್ವೀಕರಿಸಿದ ನಂತರ ಮೆರವಣಿಗೆಯು ಸನ್ನಿಧಾನಕ್ಕೆ ತೆರಳಿತು.18 ಮೆಟ್ಟಿಲು ಹತ್ತಿ ಸೋಪಾನಂ ತಲುಪಿದ ಬಳಿಕ ತಂತ್ರಿ ಕಂಠರ್ ಮಹೇಶ್ ಮೋಹನರ್ ಮತ್ತು ಮೇಲ್ಶಾಂತಿ ಪ್ರಸಾದ್ ನಂಬೂತಿರಿ
ಸೇರಿ ತಿರುವಾಭರಣವನ್ನು ಸ್ವೀಕರಿಸಿ ಅಯ್ಯಪ್ಪ ಮೂರ್ತಿಗೆ ತೊಡಿಸಿದರು. ನಂತರ ದೀಪಾರಾಧನೆ ನಡೆಯಿತು.ಶರಣ ಘೋಷಗಲೊಂದಿಗೆ ಎಲ್ಲೆಡೆ ಅಯ್ಯಪ್ಪ ಭಕ್ತರು ನೆರೆದಿದ್ದರು. ಎಲ್ಲೆಡೆ ಶರಣ ಘೋಷಗಳು ಮೊಳಗಿತು. ಶಬರಿಮಲೆ ಸನ್ನಿಧಾನ ಪರಸರವಿಡೀ ಶರಣಘೋಷಗಳು ಮೊಳಗಿ ಗುಡ್ಡ ಬೆಟ್ಟ ಗುಡ್ಡಗಳಲ್ಲಿ ಪ್ರತಿಧ್ವನಿಸಿದವು.












