ಶಬರಿಮಲೆ: ಮಂಡಲ– ಮಕರವಿಳಕ್ಕು’ ತೀರ್ಥಯಾತ್ರೆಗೆ ತೆರೆದ ಶಬರಿಮಲೆ ಅಯ್ಯಪ್ಪ ಸ್ವಾಮಿ ದೇವಸ್ಥಾನದಲ್ಲಿ ಭಕ್ತರ ಭಾರೀ ರಶ್ ಕಂಡು ಬಂದಿದೆ. ದೇವಾಲಯ ಬಾಗಿಲು ತೆರೆದ 48 ಗಂಟೆಗಳಲ್ಲಿ ಎರಡು ಲಕ್ಷಕ್ಕೂ ಹೆಚ್ಚು ಭಕ್ತರು ಆಗಮಿಸಿದ್ದಾರೆ.ಪರಿಸ್ಥಿತಿಯನ್ನು ನಿಭಾಯಿಸಲು ಟಿಡಿಬಿ ಸಿಬ್ಬಂದಿ ಹಾಗೂ ಪೊಲೀಸರು ಹರಸಾಹಸಪಟ್ಟರು.ಯಾತ್ರೆಯ ಮೂರನೇ ದಿನವಾದ
ಮಂಗಳವಾರವೂ ಅಪಾರ ಸಂಖ್ಯೆಯಲ್ಲಿ ಭಕ್ತರು ಭೇಟಿ ನೀಡಿದ್ದು, ದೇವರ ದರ್ಶನಕ್ಕಾಗಿ ಹತ್ತು ಗಂಟೆಗೂ ಹೆಚ್ಚು ಕಾಲ ಸರತಿ ಸಾಲಿನಲ್ಲಿ ನಿಂತಿದ್ದರು. 18 ಮೆಟ್ಟಿಲುಗಳ ಮುಂಭಾಗದಲ್ಲಿ ಭಕ್ತರು ಕಿಕ್ಕಿರಿದು ತುಂಬಿದ್ದರು. ಪಂಬಾದಿಂದ ಸನ್ನಿಧಾನಕ್ಕೆ ಹೋಗುವ ಯಾತ್ರಾ ದಾರಿಯಲ್ಲಿಯೂ ಭಕ್ತರ ದೊಡ್ಡ ಗುಂಪು ತುಂಬಿತ್ತು. ಬೆಟ್ಟ ಹತ್ತಲು ಗಂಟೆಗಟ್ಟಲೆ ಕಾಯಬೇಕಾಗಿತ್ತು.ದೇವಾಲಯ ತೆರೆದ ದಿನವಾದ ನ.16ರಂದು 53,278 ಹಾಗೂ 17ರಂದು 98,915 ಭಕ್ತರು ದೇವಾಲಯಕ್ಕೆ ಭೇಟಿ ನೀಡಿದ್ದರು.
‘ಕಳೆದ ವರ್ಷ ನಾಲ್ಕು ದಿನಗಳಲ್ಲಿ ಒಂದು ಲಕ್ಷ ಭಕ್ತರು ಭೇಟಿ ನೀಡಿದ್ದರೆ, ಈ ಬಾರಿ ಎರಡು ದಿನಗಳಲ್ಲೇ ಸುಮಾರು ಎರಡು ಲಕ್ಷಕ್ಕೂ ಹೆಚ್ಚು ಯಾತ್ರಿಕರು ಆಗಮಿಸಿದ್ದಾರೆ. ಸ್ಥಳದಲ್ಲೇ ಬುಕ್ಕಿಂಗ್ ಅನ್ನು 20 ಸಾವಿರಕ್ಕೆ ಮಿತಿಗೊಳಿಸಿದ್ದರೂ ಹೆಚ್ಚಿನ ಜನರು ಬರುತ್ತಿದ್ದಾರೆ. ಅವರನ್ನು ಹಿಂದೆ ಕಳುಹಿಸಲು ಸಾಧ್ಯವಾಗದ ಕಾರಣ ಹೆಚ್ಚು ಜನರಿಗೆ ಸ್ಥಳದಲ್ಲೇ ಬುಕ್ಕಿಂಗ್ ಮೂಲಕ ಅವಕಾಶ ನೀಡಬೇಕಾಯಿತು ‘ವರ್ಚುವಲ್–ಕ್ಯೂ ಬುಕ್ಕಿಂಗ್ ಮಾಡಿದವರು ನಿಗದಿತ ದಿನದಂದು ಬಾರದೇ ಬೇಗನೇ ಆಗಮಿಸಿದ್ದು, ಸರತಿ ಸಾಲುಗಳಲ್ಲಿ ಬಾರದೇ ಇದ್ದದು ಕೂಡ ಜನದಟ್ಟಣೆ ಹೆಚ್ಚಲು ಕಾರಣವಾಗಿದೆ. ಹೆಚ್ಚಿನ ಸಂಖ್ಯೆಯಲ್ಲಿ ಪೊಲೀಸ್ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ. ಪರಿಸ್ಥಿತಿ ನಿಯಂತ್ರಣದಲ್ಲಿದೆ ಎಂದು ಅಧಿಕಾರಿಗಳು ಹೇಳುತ್ತಾರೆ.
ಸರತಿ ಸಾಲಿನಲ್ಲಿ ನಿಂತಿರುವ ಭಕ್ತರ ಬಳಿ ತೆರಳಿ ಕುಡಿಯುವ ನೀರು ಒದಗಿಸಲು 200 ಹೆಚ್ಚುವರಿ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ. ದರ್ಶನಕ್ಕಾಗಿ ಭಕ್ತರು 18 ಮೆಟ್ಟಿಲುಗಳನ್ನು ಸುಗಮವಾಗಿ ಹತ್ತಲು ಸಾಧ್ಯವಾಗುವಂತೆ ಮತ್ತು ಯಾರೂ ಸರದಿ ಸಾಲನ್ನು ಭೇದಿಸದಂತೆ ನೋಡಿಕೊಳ್ಳುವಂತೆ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ.ಸನ್ನಿಧಾನಕ್ಕೆ ಹೋಗುವ ಮಾರ್ಗದ ಅಲ್ಲಲ್ಲಿ ಭಕ್ತರು ವಿಶ್ರಾಂತಿ ಪಡೆಯಲು ವ್ಯವಸ್ಥೆ ಮಾಡಲಾಗಿದ್ದು ನೀರು ಮತ್ತು ಬಿಸ್ಕತ್ತು ಒದಗಿಸಲಾಗುತ್ತದೆ.ಎಂದು ತಿರುವಾಂಕೂರು ದೇವಸ್ವಂ ಮಂಡಳಿ (ಟಿಡಿಬಿ) ಅಧ್ಯಕ್ಷ ಕೆ. ಜಯಕುಮಾರ್ ಹೇಳಿದರು.













