ಸುಳ್ಯ:ಇಂದು ನಿಧನರಾದ ಮಾಜಿ ಮುಖ್ಯಮಂತ್ರಿ ಎಸ್.ಎಂ.ಕೃಷ್ಣ ಅವರು ಸುಳ್ಯ ಕ್ಷೇತ್ರದ ಜೊತೆ ವಿಶೇಷ ಮಮತೆ ಹಾಗು ಸುಳ್ಯದ ರಾಜಕೀಯ ಮುಖಂಡರ ಜೊತೆ ನಿಕಟ ಸಂಪರ್ಕ ಹೊಂದಿದವರಾಗಿದ್ದರು ಎಂದು ಸುಳ್ಯ ಬ್ಲಾಕ್ ಕಾಂಗ್ರೆಸ್ ಮಾಜಿ ಅಧ್ಯಕ್ಷರು ಹಾಗೂ ಹಿರಿಯ ರಾಜಕಾರಣಿ ನಿತ್ಯಾನಂದ ಮುಂಡೋಡಿ ಅವರು ನೆನಪಿಸಿಕೊಳ್ಳುತ್ತಾರೆ. ಮುಖ್ಯಮಂತ್ರಿಯಾಗಿದ್ದ ಸಂದರ್ಭದಲ್ಲಿ ಸುಳ್ಯದಲ್ಲಿ ಕಾರ್ಯಕ್ರಮಕ್ಕೆ ಬಂದಿದ್ದರು. ಅಲ್ಲದೆ
ಚುನಾವಣಾ ಪ್ರಚಾರಕ್ಕೂ ಸುಳ್ಯಕ್ಕೆ ಆಗಮಿಸಿದ್ದರು. ಸುಬ್ರಹ್ಮಣ್ಯ ದೇವಸ್ಥಾನಕ್ಕೆ ಹಲವು ಬಾರಿ ಆಗಮಿಸಿದ್ದರು. ಮುಖ್ಯಮಂತ್ರಿಯಾಗಿದ್ದ ಸಂದರ್ಭದಲ್ಲಿ ಹಾಗೂ ಇತರ ಯಾವುದೇ ಸಂದರ್ಭದಲ್ಲಿ ಅವರನ್ನು ಭೇಟಿಯಾದಾಗ ಬಹಳ ಚೆನ್ನಾಗಿ ಮಾತನಾಡಿಸಿ ನಾವು ಮುಂದಿರಿಸಿದ ಬೇಡಿಕೆಗಳನ್ನು ಆಲಿಸುತ್ತಿದ್ದರು. ಯಾವುದೇ ಅಭಿವೃದ್ಧಿ ಬೇಡಿಕೆಗಳಿಗೂ ಅವರು ಇಲ್ಲಾ ಎನ್ನುತ್ತಿರಲಿಲ್ಲ. ಮುಖ್ಯಮಂತ್ರಿಯಾಗಿದ್ದ ಸಂದರ್ಭದಲ್ಲಿ ಸುಳ್ಯ ಕ್ಷೇತ್ರದ
ಹಲವು ರಸ್ತೆ, ಸೇತುವೆಗಳ ಅಭಿವೃದ್ಧಿಗೆ ಅನುದಾನ ನೀಡಿದ್ದರು.ಸುಳ್ಯದ ಹಲವು ಮುಖಂಡರಿಗೆ ಉನ್ನತ ಹುದ್ದೆಗಳನ್ನು ನೀಡಿದ್ದರು. ಬೆಂಗಳೂರು ಸೇರಿದಂತೆ ರಾಜ್ಯದ ಅಭಿವೃದ್ಧಿಗೆ ಚುಕ್ಕಾಣಿ ಹಿಡಿದಿದ್ದ ಕೃಷ್ಣ ಅವರು ದೇಶ ಕಂಡ ಅಪರೂಪದ ರಾಜಕಾರಣಿ. ಕನ್ನಡ ಹಾಗೂ ಇಂಗ್ಲೀಷ್ ಭಾಷೆಯನ್ನು ಅತ್ಯಂತ ಸುಲಲಿತವಾಗಿ ಮಾತನಾಡುತ್ತಿದ್ದರು. ಮಂಡ್ಯದಲ್ಲಿ ನಾನು ಇಂಜಿನಿಯರಿಂಗ್ ಮಾಡುತ್ತಿದ್ದ ಸಂದರ್ಭದಲ್ಲಿ ಶಾಸಕರಾಗಿದ್ದ ಎಸ್.ಎಂ.ಕೃಷ್ಣ ಅವರು ನಮ್ಮ ಕಾಲೇಜಿಗೆ ಬರುತ್ತಿದ್ದರು. ಆವಾಗಲೇ ಅವರ ಭಾಷಣ ಕೇಳುವುದು ನಮಗೆ ಬಹಳ
ಖುಷಿ ಕೊಡುತ್ತಿತ್ತು. ಬಳಿಕ ರಾಜಕೀಯ ಕ್ಷೇತ್ರದಲ್ಲಿ ಅವರ ಜೊತೆ ಬೆರೆಯಲು ಸಾಧ್ಯವಾಗಿರುವುದು ನಮ್ಮ ಪುಣ್ಯ. ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷನಾಗಿದ್ದಾಗ ಹಾಗೂ ಇತರ ಸಂದರ್ಭದಲ್ಲಿ ಹಲವು ಬಾರಿ ಅವರ ಭೇಟಿ ಮಾಡಲು ಸಾಧ್ಯವಾಗಿದೆ. ರಾಜಕೀಯ ಕ್ಷೇತ್ರದಲ್ಲಿ ನಾನು ಕಂಡ ಅತ್ಯಂತ ಸಜ್ಜನ ರಾಜಕಾರಣಿಗಳಲ್ಲಿ ಎಸ್.ಎಂ.ಕೃಷ್ಣರು ಒಬ್ಬರು ಎಂದು ಮುಂಡೋಡಿಯವರು ಹೇಳುತ್ತಾರೆ.
ಚಿತ್ರಗಳು:ನಿತ್ಯಾನಂದ ಮುಂಡೋಡಿ ಅವರ ಕಡತದಿಂದ
.