ಮಂಡ್ಯ:ಕರ್ನಾಟಕದ ಮಾಜಿ ಮುಖ್ಯಮಂತ್ರಿ, ಮುತ್ಸದ್ದಿ ರಾಜಕಾರಣಿ ಎಸ್.ಎಂ. ಕೃಷ್ಣ ಪಂಚಭೂತಗಳಲ್ಲಿ ಲೀನವಾದರು. ಮಂಡ್ಯ ಜಿಲ್ಲೆ ಮದ್ದೂರು ತಾಲ್ಲೂಕಿನ ಸೋಮನಹಳ್ಳಿಯಲ್ಲಿ ಒಕ್ಕಲಿಗ ಸಂಪ್ರದಾಯದಂತೆ ಅವರ ಅಂತ್ಯಕ್ರಿಯೆ ನೆರವೇರಿಸಲಾಯಿತು. ರಾಜ್ಯಕ್ಕೆ, ದೇಶಕ್ಕೆ ತಮ್ಮದೇ ಆದ ಕೊಡುಗೆ ನೀಡಿದ ಎಸ್.ಎಂ. ಕೃಷ್ಣ ಅವರಿಗೆ ಸಕಲ ಸರ್ಕಾರಿ ಗೌರವದೊಂದಿಗೆ
ಅಂತಿಮ ವಿದಾಯ ಹೇಳಲಾಯಿತು. ಗಂಧದ ಕಟ್ಟಿಗೆಯ ಚಿತೆಯಲ್ಲಿದ್ದ ಪಾರ್ಥಿವ ಶರೀರಕ್ಕೆ, ಎಸ್.ಎಂ. ಕೃಷ್ಣ ಅವರ ಮೊಮ್ಮಗ ಅಮರ್ತ್ಯ ಹೆಗ್ಡೆ ಅಗ್ನಿ ಸ್ಪರ್ಶ ಮಾಡಿದರು. ಕುಶಾಲು ತೋಪು ಹಾರಿಸುವ ಮೂಲಕ ಪೊಲೀಸರು, ಎಸ್.ಎಂ.ಕೃಷ್ಣ ಅವರಿಗೆ ಗೌರವ ನಮನ ಸಲ್ಲಿಸಿದರು.
ಎಸ್.ಎಂ.ಕೃಷ್ಣ ಅವರ ಪಾರ್ಥಿವ ಶರೀರದ ಅಂತಿಮ ದರ್ಶನವನ್ನು ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ.ಶಿವಕುಮಾರ್, ಮಾಜಿ ಸಿಎಂ ಯಡಿಯೂರಪ್ಪ ಸೇರಿದಂತೆ ಹಲವು ಗಣ್ಯರು ಪಡೆದುಕೊಂಡರು. ಜನಪ್ರತಿನಿಧಿಗಳು, ವಿವಿಧ ರಾಜಕೀಯ ಪಕ್ಷಗಳ ಮುಖಂಡರು ಮತ್ತು ಸಾರ್ವಜನಿಕರು ಎಸ್.ಎಂ.ಕೃಷ್ಣ ಅವರ ಪಾರ್ಥಿವ ಶರೀರಕ್ಕೆ ಅಂತಿಮ ನಮನ ಸಲ್ಲಿಸಿದರು.ಮಾಜಿ ಮುಖ್ಯಮಂತ್ರಿ ಎಸ್.ಎಂ.ಕೃಷ್ಣ ಅವರು ಸದಾಶಿವನಗರದ ಸ್ವಗೃಹದಲ್ಲಿ ಮಂಗಳವಾರ ಬೆಳಗಿನ ಜಾವ 2.30ರ ಸುಮಾರಿಗೆ ನಿಧನರಾಗಿದ್ದರು.