*ಡಾ.ಸುಂದರ ಕೇನಾಜೆ.
ವಿಭಿನ್ನ ಕಾದಂಬರಿಗಳ ಮೂಲಕ ಕನ್ನಡ ಸಾಹಿತ್ಯ ಕ್ಷೇತ್ರದಲ್ಲಿ ತನ್ನದೇ ಛಾಪು ಮೂಡಿಸಿದ ಹಾಗೂ ಕನ್ನಡ ಮನಸ್ಸುಗಳು ಭಿನ್ನ ರೀತಿಯಲ್ಲಿ ಯೋಚಿಸುವಂತೆ ಮಾಡಿದೆ ಡಾ.ಎಸ್.ಎಲ್ ಬೈರಪ್ಪನವರ ನಿಧನ ಕನ್ನಡ ಸಾಹಿತ್ಯ ಪರಂಪರೆಯ ಹಿರಿಯ ಕೊಂಡಿಯೊಂದರ ಕಳಚುವಿಕೆ. ಕಾದಂಬರಿಯ ಮೂಲಕ ತನ್ನದೇ ಆದ ವೈಚಾರಿಕ ಹಾಗೂ
ವೈಯಕ್ತಿಕ ನಿಲುವುಗಳನ್ನು ಪ್ರಕಟಿಸುತ್ತಾ ಬಂದ ಬೈರಪ್ಪನವರು ಅದನ್ನು ಬಲವಾಗಿ ಸಮರ್ಥಿಸುತ್ತಲೂ ಬಂದವರು. ಆದರೆ ತಾನು ಏನು ಹೇಳಬೇಕು ಎನ್ನುವುದನ್ನು ಕಾದಬಂರಿ ಎಂಬ ಮಾಧ್ಯಮದ ಮೂಲಕ ಹೇಳುತ್ತಾ ಆ ಮಾಧ್ಯಮದ ಪ್ರಸ್ತುತಿಗೆ ಅಪೂರ್ವ ತಯಾರಿ, ಅಧ್ಯಯನಶೀಲತೆ ಮತ್ತು ಬದ್ಧತೆಯನ್ನು ತೋರಿಸುತ್ತಾ ಇನ್ನೊಬ್ಬ ಬರಹಗಾರನಲ್ಲಿ ಕಾಣಸಲಾಧ್ಯವಾದ ಅನೇಕ ಗುಣಗಳನ್ನು ಕಾಣಿಸುತ್ತಾ ಬಂದವರು.
ಅವರ ಕಾದಂಬರಿಗಳ ವಸ್ತು ಮತ್ತು ಚರ್ಚಿಸುವ ಚೌಕಟ್ಟು ಎಷ್ಟೇ ವಿಶಿಷ್ಟವಾದುದಾದರೂ ಅದನ್ನು ವರ್ತಮಾನದಲ್ಲಿ ನೋಡುವ ಸಂದರ್ಭದಲ್ಲಿ ನೋಡುಗನ ಕಣ್ಣಿಗೆ ಸರಿ ಎನಿಸುವಂತೆ ರಚಿಸುವ ಜಾಣ್ಮೆಯೊಂದನ್ನು ಸಿದ್ಧಸಿಕೊಂಡಿದ್ದವರು. ಹಾಗಾಗಿ ಈ ಕಾದಂಬರಿಗಳು ಕೇವಲ ಓದಿಸುವ ಗುಣವನ್ನು ಮಾತ್ರ ಹೊಂದಿದ್ದವುಗಳಲ್ಲದೇ ಯೋಚಿಸುವ ಗುಣವನ್ನೂ ಬೆಳೆಸಿದ್ದವು. ಆ ಕಾರಣದಿಂದಲೇ ಅವರ ಕಾದಂಬರಿಗಳು ಕನ್ನಡ ಭಾಷೆಯಲ್ಲಿ ಪಡೆದಷ್ಟು ಜನಪ್ರಿಯತೆಯನ್ನು ಕನ್ನಡದ ಹೊರತಾದ ಭಾಷೆಗಳಲ್ಲೂ ಪಡೆದುಕೊಂಡಿದ್ದವು. ಕನ್ನಡದ ಜತೆಗೆ ಇತರ ಭಾಷೆಗಳಿಗೂ ಅತೀ ಹೆಚ್ಚು ಭಾಷಾಂತರಗೊಂಡಿದ್ದ ಇವರ ಕಾದಂಬರಿಗಳು ಭಾರತೀಯ ಸಾಹಿತ್ಯ ಕ್ಷೇತ್ರ ಕೊಡುಗೆಗಳಾಗಿ ಕಾಣುತ್ತವೆ.
ಅನೇಕ ಕಾದಂಬರಿಗಳಲ್ಲಿ ಬೈರಪ್ಪನವರು ಹೇಳಬೇಕೆಂದಿದ್ದ ಸಂಗತಿ ಎಡಪಂಥೀಯವಾದದ್ದಾರೂ ಹೇಳಿದ ದಾಟಿ ಅಥವಾ ಅಂತರ್ಯ ಬಲಪಂಥೀಯ ಎನ್ನುವಂತೆ, ಕೆಲವು ಬಾರಿ ಇದು ತದ್ವಿರುದ್ಧವಾಗಿದೆಯೋ ಎನ್ನುವಂತೆ ಕಾಣುತ್ತವೆ. ಹಾಗಾಗಿ ಕನ್ನಡದಲ್ಲಿ ಬೈರಪ್ಪನವರ ಕಾದಂಬರಿಗಳು ಮಾಡಿಸಿದಷ್ಟು ಚರ್ಚೆ, ವಿಮರ್ಶೆಯನ್ನು ಇನ್ನೊಂದು ಕಾದಂಬರಿ ಮಾಡಿಸಿಲ್ಲ ಎಂದರೆ ತಪ್ಪಾಗಲಾರದು. ಅನೇಕ ಸಂದರ್ಭದಲ್ಲಿ ಎರಡೂ ಪಂಥಗಳ ಮಧ್ಯೆ ಒಪ್ಪಿತವಾಗದ ಬೈರಪ್ಪ ಜನರ ಮಧ್ಯೆ ಮಾತ್ರ ಬಹಳ ಜನಪ್ರಿಯರಾದರು. ಅಲ್ಲದೇ ಕನ್ನಡದ ಬಹುತೇಕ ಎಲ್ಲ ಕಾಲಘಟ್ಟಗಳ ಕಾಲದಲ್ಲೂ ಕಾದಂಬರಿ ರಚಿಸುತ್ತಾ ಯಾವ ಪಂಥದಲ್ಲೂ ಸ್ಥಿರವಾಗಿ ಕಾಣಿಸಿಕೊಳ್ಳದೇ ತನ್ನದೇ ದಾರಿಯನ್ನು ತುಳಿಯುತ್ತಾ ಸಾಗಿ ಬಂದರು.
ಒಟ್ಟಿನಲ್ಲಿ ಬೈರಪ್ಪನವರ ಒಲವು ನಿಲುವುಗಳು ಏನೇ ಆದ್ದರೂ ಅವರೋರ್ವ ಕಾಲ್ಪನಿಕ ಎನ್ನಲಸಾಧ್ಯವಾದ ಅಧ್ಯಯನಶೀಲ ಕಾದಂಬರಿಗಾರ, ಜತೆಗೆ ಮಹತ್ವಾಕಾಂಕ್ಷಿ ಬರಹಗಾರ, ತನ್ನ ಕಾದಂಬರಿಗಳು ಕನ್ನಡದಲ್ಲಿ ಮನೆ ಮಾತಾಗುತ್ತಾ ಹತ್ತಾರು ಅನ್ಯಭಾಷೆಗಳಲ್ಲೂ ಮನೆ ಬಾಗಿಲಿಗೆ ತಲುಪುತ್ತಾ ಇದ್ದಾಗಲೂ ಅವರು ಇನ್ನೊಂದು ಕಾದಂಬರಿಯ ತಯಾರಿಗೆ ತೊಡಗಿಕೊಳ್ಳುತ್ತಿದ್ದ ಆ ಮನಸ್ಥಿತಿ ಅಸಾಧಾರಣವಾದುದು. ಜನಪ್ರಿಯತೆಯನ್ನು ಒಳಗೊಳಗೆ ಇಷ್ಟ ಪಡುತ್ತಾ ಅದರ ಟೀಕೆಗಳಲ್ಲೂ ಅದೇ ಸುಖವನ್ನು ಕಾಣುತ್ತಾ ತನ್ನ ತುಂಬು ಜೀವನ (94) ನಡೆಸಿದ ಬೈರಪ್ಪರು ಸಾಹಿತ್ಯಕ್ಕಾಗಿ ಸಿಗುವ ಅತ್ಯುನ್ನತ ಪ್ರಶಸ್ತಿಯಾದ ಜ್ಞಾನಪೀಠಕ್ಕಾಗಿ ಕಾದಿದ್ದರು ಎನ್ನುವುದು ಎಷ್ಟು ಸತ್ಯವೋ…. ಅದನ್ನು ಕನ್ನಡದ ಮಟ್ಟಿಗೆ ಕೊಡಬಹುದಿತ್ತು ಎನ್ನುವುದೂ ಅಷ್ಟೇ ಸತ್ಯ.
(ಡಾ.ಸುಂದರ ಕೇನಾಜೆ ಬರಹಗಾರರು, ಅಂಕಣಕಾರರು, ಜಾನಪದ ಸಂಶೋಧಕರು)





