ಬೆಂಗಳೂರು: ಬೆಲೆ ಕುಸಿತದಿಂದ ನಷ್ಟ ಎದುರಿಸುತ್ತಿರುವ ರಬ್ಬರ್ ಬೆಳೆಗಾರರಿಗೆ ಸಹಾಯ ಹಸ್ತ ಚಾಚುವ ನಿಟ್ಟಿನಲ್ಲಿ ರಾಜ್ಯ ಸರ್ಕಾರ ಬೆಂಬಲ ಬೆಲೆಯನ್ನು ಘೋಷಿಸಬೇಕು ಎಂದು ಸುಳ್ಯ ಶಾಸಕಿ ಭಾಗೀರಥಿ ಮುರುಳ್ಯ ರಾಜ್ಯ ಸರ್ಕಾರವನ್ನು ಒತ್ತಾಯಿಸಿದರು.ವಿಧಾನಸಭೆ ಅಧಿವೇಶನದಲ್ಲಿ ಮಾತನಾಡಿದ ಅವರು, ಪ್ರಸ್ತುತ ರಬ್ಬರ್ ಬೆಳೆ ಬೆಳೆಯಲು ಸಾಧ್ಯವಾಗದ
ಪರಿಸ್ಥಿತಿಯಲ್ಲಿ ರೈತರಿದ್ದಾರೆ. ಹೀಗಾಗಿ ಕೇರಳ ಮಾದರಿಯಲ್ಲಿ ಕರ್ನಾಟಕ ಸರ್ಕಾರವೂ ರಬ್ಬರ್ ಬೆಳೆಗೆ ಬೆಂಬಲ ಬೆಲೆಯನ್ನು ಘೋಷಿಸಬೇಕು ಎಂದರು.ಸದ್ಯ ರಬ್ಬರ್ ಬೆಲೆ ಕುಸಿದಿರುವುದರಿಂದ ರೈತರು ರಬ್ಬರ್ ತೆಗೆಯುವಲ್ಲಿ ಹಿಂದೇಟು ಹಾಕುತ್ತಿದ್ದಾರೆ. ಇದರ ಸಮಸ್ಯೆಯಿಂದಾಗಿ ರೈತರು ರೀ ಪ್ಲಾಂಟೇಶನ್ ಮಾಡಲು ಮುಂದಾಗುತ್ತಿಲ್ಲ. ಹೀಗಾಗಿ ರೀ ಪ್ಲಾಂಟೇಶನ್ಗೂ ಸಹಾಯ ಘೋಷಣೆ ಮಾಡಬೇಕು ಎಂದ ಅವರು, ರಬ್ಬರ್ ಬೆಳೆಯನ್ನು ಕೃಷಿಯೆಂದು ಪರಿಗಣಿಸಿ ಬೆಂಬಲ ಬೆಲೆ ನೀಡಬೇಕು ಎಂದು ಒತ್ತಾಯಿಸಿದರು.
ಇದಕ್ಕೆ ಪ್ರತಿಕ್ರಿಯಿಸಿದ ಗಣಿ ಮತ್ತು ಭೂ ವಿಜ್ಞಾನ ಹಾಗೂ ತೋಟಗಾರಿಕಾ ಇಲಾಖೆ ಸಚಿವ ಎಸ್.ಎಸ್.ಮಲ್ಲಿಕಾರ್ಜುನ, ರಬ್ಬರ್ ಬೆಳೆ ನಮ್ಮ ಇಲಾಖೆ ವ್ಯಾಪ್ತಿಗೆ ಒಳಪಡುವುದಿಲ್ಲ. ರಬ್ಬರ್ ನಂತಹ ಬೆಳೆಗಳಿಗೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಬೆಲೆ ನಿಗದಿಯಾಗುತ್ತದೆ. ಕೇಂದ್ರ ಸರ್ಕಾರದ ಅಡಿಯಲ್ಲಿ ರಬ್ಬರ್ ಬೋರ್ಡ್ ಇದೆ. ಕೇಂದ್ರದ ಗಮನ ಸೆಳೆಯಲು ಪ್ರಯತ್ನಿಸಿ. ನಾವು ಕೂಡ ಈ ನಿಟ್ಟಿನಲ್ಲಿ ಪ್ರಯತ್ನಿಸಲಾಗುವುದು ಎಂದರು.
ಈಗಾಗಲೇ ಕರಾವಳಿ ಭಾಗದ ಪ್ರಮುಖ ಬೆಳೆ ಅಡಿಕೆಗೆ ಹಳದಿ ರೋಗ, ಎಲೆ ಚುಕ್ಕಿ ರೋಗಗಳಿಂದ ಕೃಷಿ ನಾಶವಾಗಿದೆ ಎಂದು ಭಾಗೀರಥಿ ಮುರುಳ್ಯ ಅವರು ಸದನದಲ್ಲಿ ಪ್ರಸ್ತಾಪಿಸಿದರು.





