ಸುಳ್ಯ:ಬೆಲೆ ಕಡಿತದಿಂದಾಗಿ ಸದಾ ನಷ್ಟದ ಲೆಕ್ಕಾಚಾರ ಮಾಡುತ್ತಿದ್ದ ರಬ್ಬರ್ ಕೃಷಿಕರಿಗೆ ಸಂತಸದ ಸುದ್ದಿ. ಕಳೆದ ಒಂದು ತಿಂಗಳಿನಿಂದ ರಬ್ಬರ್ ದರ ಏರಿಕೆಯ ಹಾದಿಯಲ್ಲಿದೆ. ಸದಾ 130 ರ ಸುತ್ತ ಗಿರಕಿ ಹೊಡೆಯುತ್ತಿದ್ದ ಲಾಟ್ ರಬ್ಬರ್ ದರ 160ಕ್ಕೆ ಏರಿದೆ. ಅಂದರೆ ಕಳೆದ ಒಂದು ತಿಂಗಳಲ್ಲಿ ಸರಿ ಸುಮಾರು 30 ರೂ ಏರಿಕೆ ಕಂಡಿದೆ. ಕಳೆದ 10 ದಿನಗಳಲ್ಲಿ ಉತ್ತಮ
ಏರಿಕೆಯಾಗಿದ್ದ ದರ ಕಳೆದ 3 ದಿನಗಳಿಂದ ಕೊಂಚ ಇಳಿಕೆಯಲ್ಲಿದೆ ಎಂದು ವ್ಯಾಪಾರಿಗಳು ಹೇಳುತ್ತಾರೆ. ಆರ್ಎಸ್ಎಸ್ 4 ದರ 186ರ ವರೆಗೆ ಏರಿತ್ತು. ಇದೀಗ ಆರ್ಎಸ್ಎಸ್ 4 ದರ ಕೆಜಿಗೆ 180 ಇದೆ. ಸುಳ್ಯದ ರಬ್ಬರ್ ಮಾರುಕಟ್ಟೆಯಲ್ಲಿ ಮಾ 23ರಂದು ಆರ್ಎಸ್ಎಸ್ 4 ದರ ಕೆಜಿಗೆ 180, ಆರ್ಎಸ್ಎಸ್ 5 ದರ ಕೆಜಿಗೆ 175, ಗುಡ್ ಲಾಟ್ ದರ ಕೆಜಿಗೆ 170 ಇದೆ. ಲಾಟ್ ದರ 160 ಇದೆ. ರಬ್ಬರ್ ಸ್ಕ್ರಾಪ್ ದರ ಕೆಜಿಗೆ 113 ಇದೆ. ಇದೀಗ ರಬ್ಬರ್ ಉತ್ಪಾದನೆ ಕಡಿಮೆಯಾಗಿರುವುದರಿಂದ ಸಾಕಷ್ಟು ರಬ್ಬರ್ ಮಾರುಕಟ್ಟೆಗೆ ಬರುತ್ತಿಲ್ಲ.ದರ ಹೆಚ್ಚಾಗಿದ್ದರೂ ರಬ್ಬರ್ ಮಾರುಕಟ್ಟೆಗೆ ಬರುತ್ತಿಲ್ಲಾ ಎನ್ನುತ್ತಾರೆ ಸುಳ್ಯದ ಪ್ರಮುಖ ರಬ್ಬರ್ ವ್ಯಾಪಾರಿಗಳಾದ ಸುಳ್ಯಕ್ಕಾರ್ಸ್ ಟ್ರೇಡರ್ಸ್ನ ಅಬ್ದುಲ್ಲಾ ಅವರು.

ದರ ಏರಲು ಏನು ಕಾರಣ..?
ಇದೀಗ ಹೆಚ್ಚಿನ ಉಷ್ಣಾಂಶದಿಂದಾಗಿ ಬಹುತೇಕ ಕಡೆ ರಬ್ಬರ್ ಹಾಲು ಉತ್ಪಾದನೆ ನಡೆಯುತ್ತಿಲ್ಲ.ಇದರಿಂದ ರಬ್ಬರ್ ಉತ್ಪಾದನೆ ಕಡಿಮೆ ಆಗಿದೆ. ಇದು ರಬ್ಬರ್ ಬೇಡಿಕೆ ಹೆಚ್ಚಾಗಿ ದರ ಹೆಚ್ಚಲು ಕಾರಣವಾಗಿರಬಹುದು ಎಂದು ವಿಶ್ಲೇಷಿಸಲಾಗುತ್ತದೆ. ಅಲ್ಲದೆ ಕೇರಳ ಸರಕಾರ ತನ್ನ ಬಜೆಟ್ನಲ್ಲಿ ರಬ್ಬರ್ಗೆ ಬೆಂಬಲ ಬೆಲೆ ಘೋಷಿಸಿ ಕನಿಷ್ಠ ದರ ಕೆಜಿಗೆ 180 ರೂ ಎಂದು ನಿಗದಿಪಡಿಸಿದೆ. ಇದರಿಂದಲೂ ಎಲ್ಲೆಡೆ ರಬ್ಬರ್ ದರ 180ರ ಹತ್ತಿರ ಬರಲು ಕಾರಣವಾಯಿತು ಎನ್ನುತ್ತಾರೆ ವ್ಯಾಪಾರಿಗಳು. ಲೋಕಸಭಾ ಚುನಾಚಣೆ ಘೋಷಣೆಯಾಗಿರುವುದು ಕೂಡ ರಬ್ಬರ್ ಮಾರುಕಟ್ಟೆಯಲ್ಲಿ ಅಲ್ಪ ಚಲನೆ ಉಂಟಾಗಲು ಕಾರಣವಾಗಿದೆ ಎಂದು ಹೇಳಲಾಗುತಿದೆ.
ಒಟ್ಟಿನಲ್ಲಿ ರಬ್ಬರ್ ದರ ಸ್ವಲ್ಪ ಏರಿಕೆಯಾಗಿರುವುದು ರಬ್ಬರ್ ಮಾರುಕಟ್ಟೆಯಲ್ಲಿ ಸಂಚಲ ಮೂಡಿಸಿದೆ.
ದಶಕದಿಂದ ಕುಸಿತವಾಗಿರುವ ರಬ್ಬರ್ ದರ:
ಒಂದು ಕಾಲದಲ್ಲಿ ಭರ್ಜರಿ ದರ ಉಂಟಾಗಿ ಚಿನ್ನದ ಬೆಳೆಯಾಗಿದ್ದ ರಬ್ಬರ್ ಕ್ರಮೇಣ ದರ ಕುಸಿತದಿಂದ ನಷ್ಟದ ಹಾದಿ ಹಿಡಿಯಿತು.2010-11-12ರ ಕಾಲ ಘಟ್ಟದಲ್ಲಿ ರಬ್ಬರ್ಗೆ ಕೆಜಿಗೆ 250-260 ರೂವರೆಗೆ ಏರಿತ್ತು. ಇದರಿಂದ ಬೆಳೆಗಾರನಿಗೆ ಬಂಪರ್ ಆದಾಯ ಬಂದಿತ್ತು. ಆದರೆ 2012-13 ವರ್ಷದಿಂದ ರಬ್ಬರ್ ಬೆಲೆ ಕುಸಿಯುತ್ತಾ ಬಂತು. ಅಂದರೆ ಕಳೆದ ಒಂದು ದಶಕಗಳಿಂದ ರಬ್ಬರ್ಗೆ ಉತ್ತಮ ದರ ದೊರೆಯಲೇ ಇಲ್ಲ. ಒಂದೊಮ್ನೆ ದರ ಇಳಿದು 100ರೂ ತನಕ್ಕೆ ಮುಟ್ಟಿತ್ತು. ಬಳಿಕವೂ ಕೆಜಿಗೆ 110, 120, 130 ರೂಗಳಷ್ಟೇ ಸಿಗುತ್ತಿತ್ತು. ಇದರಿಂದ ಕೃಷಿಕರೇ ರಬ್ಬರ್ ಕೃಷಿಯ ಬಗ್ಗೆ ಆಸಕ್ತಿ ಕಳೆದುಕೊಂಡಿತ್ತು. ಉತ್ಪಾದನೆ ಹೆಚ್ಚಳ, ವಿದೇಶದಿಂದ ರಬ್ಬರ್ ಆಮದು, ಸಿಂಥಟಿಕ್ ರಬ್ಬರ್ ಬಳಕೆ ಹೀಗೆ ಹಲವು ಕಾರಣಗಳಿಂದ ನೈಸರ್ಗಿಕ ರಬ್ಬರ್ ದರ ಕುಸಿಯಿತು. ಇದೀಗ ಮತ್ತೆ ರಬ್ಬರ್ ದರ ಏರಿಕೆ ಕಾಣುತ್ತಿರುವುದು ನಿರೀಕ್ಷೆ ಹುಟ್ಟಿಸಿದೆ.





