ಗುವಾಹಟಿ:ಯುವ ಬ್ಯಾಟರ್ ವೈಭವ್ ಸೂರ್ಯವಂಶಿ ಸಿಡಿಸಿದ ಸ್ಪೋಟಕ ಅರ್ಧ ಶತಕ ಹಾಗೂ ಬೌಲರ್ಗಳ ಸಂಘಟಿತ ದಾಳಿಯ ನೆರವಿನಿಂದ ಇಂಡಿಯನ್ ಪ್ರೀಮಿಯರ್ ಲೀಗ್ ಟಿ20 ಕ್ರಿಕೆಟ್ ಟೂರ್ನಿಯ ಪಂದ್ಯದಲ್ಲಿ ರಾಜಸ್ಥಾನ ರಾಯಲ್ಸ್ ತಂಡ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ ಸುಲಭ ಜಯ ದಾಖಲಿಸಿತು. ಬ್ಯಾಟಿಂಗ್ ವೈಫಲ್ಯ ಅನುಭವಿಸಿದ ಚೆನ್ನೈ ಸೂಪರ್ ಕಿಂಗ್ಸ್ 19.4 ಓವರ್ಗಳಲ್ಲಿ
127 ರನ್ ಗಳಿಸಿ ಸರ್ವಪತನ ಕಂಡಿತು. ಗುರಿ ಬೆನ್ನಟ್ಟಿದ ರಾಜಸ್ಥಾನ 12.1 ಓವರ್ಗಳಲ್ಲಿ 2 ವಿಕೆಟ್ ನಷ್ಟಕ್ಕೆ 128 ರನ್ ಗಳಿಸಿ 8 ವಿಕೆಟ್ಗಳ ಜಯ ದಾಖಲಿಸಿತು. ಕೇವಲ 15 ಎಸೆತಗಳಲ್ಲಿ ಅರ್ಧ ಸಿಡಿಸಿದ ಸೂರ್ಯವಂಶಿ 17 ಎಸೆತಗಳಲ್ಲಿ 4 ಬೌಂಡರಿ ಹಾಗೂ5 ಸಿಕ್ಸರ್ ನೆರವಿನಿಂದ 52 ರನ್ ಗಳಿಸಿದರು. ಐಪಿಎಲ್ನ ಮೂರನೇ ಅತಿವೇಗದ ಅರ್ಧ ಶತಕ ಸಿಡಿಸಿದ 15ರ ಹರೆಯದ ವೈಭವ್ ಮತ್ತೊಮ್ಮೆ ಮಿಂಚಿನ ದಾಖಲೆ ಬರೆದರು. ಯಶಸ್ವಿ ಜೈಸ್ವಾಲ್(38), ಧ್ರುವ ಜುರೆಲ್(18), ರಿಯಾನ್ ಪರಾಗ್(14)ರನ್ ಗಳಿಸಿದರು.
ಇದಕ್ಕೂ ಮೊದಲು ರಾಜಸ್ಥಾನದ ಕರಾರುವಾಕ್ ದಾಳಿ ಎದುರು ಕಂಗೆಟ್ಟ ಋತುರಾಜ್ ಗಾಯಕವಾಡ್ ಬಳಗ ಅಲ್ಪ ಮೊತ್ತಕ್ಕೆ ಕುಸಿಯಿತು.
ದಕ್ಷಿಣ ಆಫ್ರಿಕಾದ ನಂದ್ರೆ ಬರ್ಜರ್ ಹಾಗೂ ಇಂಗ್ಲೆಂಡ್ನ ಜೋಫ್ರಾ ಆರ್ಚರ್, ಚೆನ್ನೈಗೆ ಆರಂಭಿಕ ಆಘಾತ ನೀಡಿದರು.
ಸಂಜು ಸ್ಯಾಮ್ಸನ್ (6 ರನ್) ಅವರನ್ನು ಬರ್ಜರ್ ಔಟ್ ಮಾಡಿದರೆ, ಕಿಂಗ್ಸ್ ನಾಯಕ ಋತುರಾಜ್ ಗಾಯಕವಾಡ್ಗೆ ಚೋಫ್ರಾ ಪೆವಿಲಿಯನ್ ಹಾದಿ ತೋರಿಸಿದರು. ಬಳಿಕ ಬಂದ ಉದಯೋನ್ಮುಖ ಆಟಗಾರ ಆಯುಷ್ ಮ್ಹಾತ್ರೆ ಖಾತೆಯನ್ನೇ ತೆರೆಯಲಿಲ್ಲ. ಮ್ಯಾಥ್ಯೂ ಶಾರ್ಟ್ (2) ಆಟ ನಡೆಯಲಿಲ್ಲ.ನಿರಂತರವಾಗಿ ವಿಕೆಟ್ ಕಳೆದುಕೊಳ್ಳುತ್ತಾ ಸಾಗಿದ್ದು ಚೆನ್ನೈಗೆ ಹಿನ್ನಡೆಯಾಯಿತು. ಆದಾಗ್ಯೂ, ಕೊನೆಯಲ್ಲಿ ಏಕಾಂಗಿ ಹೋರಾಟ ನಡೆಸಿದ ಜೆಮೀ ಓವರ್ಟನ್ 43 ರನ್ ಗಳಿಸಿ, ತಂಡದ ಮೊತ್ತ 120ರ ಗಡಿ ದಾಟಲು ನೆರವಾದರು. ಉಳಿದಂತೆ, ಸರ್ಫರಾಜ್ ಖಾನ್ (17 ರನ್), ಕಾರ್ತಿಕ್ ಶರ್ಮಾ (18 ರನ್) ಮಾತ್ರವೇ ಎರಡಂಕಿ ಗಳಿಸಿದ್ದು.
ರಾಯಲ್ಸ್ ಪರ ಬರ್ಜರ್, ಜೋಫ್ರಾ, ರವೀಂದ್ರ ಜಡೇಜ ತಲಾ ಎರಡು ವಿಕೆಟ್ ಕಿತ್ತರು. ಬ್ರಿಜೇಶ್ ಶರ್ಮಾ., ಸಂದೀಪ್ ಶರ್ಮಾ ಹಾಗೂ ರವಿ ಬಿಷ್ಣೋಯಿ ಒಂದೊಂದು ವಿಕೆಟ್ ಹಂಚಿಕೊಂಡರು.










