ಸುಳ್ಯ:ರೋಟರಿ ಕ್ಲಬ್ ಸುಳ್ಯ ಸಿಟಿಗೆ ರೋಟರಿ ಜಿಲ್ಲಾ ಗವರ್ನರ್ ಅಧಿಕೃತ ಭೇಟಿ ಕಾರ್ಯಕ್ರಮ ಹಾಗೂ 2023-24ನೇ ಸಾಲಿನ ಸಮುದಾಯ ಸೇವೆ ಯೋಜನೆಯಡಿ ಸರಕಾರಿ ಆಲೆಟ್ಟಿ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ನಾರ್ಕೋಡು ಇಲ್ಲಿ ನಿರ್ಮಾಣಗೊಂಡ ಶೌಚಾಲಯದ ಹಸ್ತಾಂತರ ಕಾರ್ಯಕ್ರಮ ಮಾ.14ರಂದು ನಡೆಯಲಿದೆ ಎಂದು ರೋಟರಿ ಕ್ಲಬ್ ಸುಳ್ಯ ಸಿಟಿಯ ಅಧ್ಯಕ್ಷ ಗಿರೀಶ್ ನಾರ್ಕೊಡು ತಿಳಿಸಿದ್ದಾರೆ. ಸುಳ್ಯ ಪ್ರೆಸ್ ಕ್ಲಬ್ನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ನಾರ್ಕೋಡು ಶಾಲೆಯಲ್ಲಿ
ಸುಮಾರು 3.50 ಲಕ್ಷ ವೆಚ್ಚದಲ್ಲಿ ನಿರ್ಮಾಣಗೊಂಡಿರುವ ಶೌಚಾಲಯದ ಹಸ್ತಾಂತರ ಕಾರ್ಯಕ್ರಮ ಪೂ.10.30ಕ್ಕೆ ನಡೆಯಲಿದೆ ಮತ್ತು ವಿದ್ಯಾರ್ಥಿಗಳಿಗಾಗಿ ರಕ್ತ ವರ್ಗಿಕರಣ ಶಿಬಿರ ಏರ್ಪಡಿಸಲಾಗಿದೆ. ಸಂಜೆ 6:30ರಿಂದ ಸುಳ್ಯದ ರೋಟರಿ ಸಮುದಾಯ ಭವನದಲ್ಲಿ ರೊಟರಿ ಕ್ಲಬ್ ಸುಳ್ಯ ಸಿಟಿ ಅಧ್ಯಕ್ಷ ಗಿರೀಶ್ ನಾರ್ಕೊಡು ಅವರ ಅಧ್ಯಕ್ಷತೆಯಲ್ಲಿ ನಡೆಯುವ ಸಾರ್ವಜನಿಕ ಕಾರ್ಯಕ್ರಮದಲ್ಲಿ ‘ರೊಟರಿ ಕ್ಲಬ್ ಸುಳ್ಯ ಸಿಟಿ’ ಯ ವತಿಯಿಂದ ಕೊಡ ಮಾಡುವ ‘ರೋಟರಿ ಕ್ಲಬ್ ಸುಳ್ಯ ಸಿಟಿ ಜೀವನ ಶ್ರೇಷ್ಠ ಸಾಧಕ ಪ್ರಶಸ್ತಿ 2024’ನ್ನು ಶಿಕ್ಷಣ ತಜ್ಞ, ಸಾಹಿತಿ, ಸಂಶೋಧಕ, ನಿವೃತ್ತ ಉಪನ್ಯಾಸಕ ಹಾಗೂ ಸ್ನೇಹ ಶಿಕ್ಷಣ ಸಂಸ್ಥೆಯ ಸ್ಥಾಪಕಾಧ್ಯಕ್ಷರಾದ ಡಾ. ಚಂದ್ರಶೇಖರ ದಾಮ್ಲಯವರಿಗೆ ನೀಡಲಾಗುವುದು. ಉಳಿದಂತೆ ಮೂರು ಜನರನ್ನು ಗೌರವಿಸಲಾಗುವುದು ಹಾಗೂ ರೋಟರಿ ಜಿಲ್ಲಾ ಯೋಜನೆಯಡಿ ಆಲೆಟ್ಟಿ ಗ್ರಾಮದ ಮೂರು ಅಂಗನವಾಡಿಗಳಿಗೆ ಮೂಲಭೂತ ಸೌಕರ್ಯಗಳನ್ನು ಒದಗಿಸುವ ಕಾರ್ಯಕ್ರಮ ನಡೆಯಲಿದೆ ಎಂದು ವಿವರಿಸಿದರು. ಬಾರ್ಪಣೆ ಶಾಲೆಗೆ ನೀರಿನ ಟ್ಯಾಂಕ್, ನಾಗಪಟ್ಟಣ ಶಾಲೆಗೆ ಚೆಯರ್ಗಳು ಹಾಗೂ ಆಲೆಟ್ಟಿ ಅಂಗನವಾಡಿಗೆ ಗೋಡೆ ಬರಹಕ್ಕೆ ಸಹಾಯಧನ ನೀಡಲಾಗುವುದು ಎಂದು ಗಿರಿಶ್ ನಾರ್ಕೋಡು ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ರೋಟರಿ ಕ್ಲಬ್ ಸುಳ್ಯ ಸಿಟಿಯ ಮಾಜಿ ಅಧ್ಯಕ್ಷರಾದ ಮುರಳೀಧರ ರೈ, ಪ್ರಮೋದ್ ಕೆ, ನಿಯೋಜಿತ ಅಧ್ಯಕ್ಷ ಶಿವಪ್ರಸಾದ್ ಕೆ.ವಿ ಉಪಸ್ಥಿತರಿದ್ದರು.














