ಸುಳ್ಯ:ಪರಿಸರ ಸಂರಕ್ಚಣೆಯ ಜಾಗೃತಿ ಮೂಡಿಸಲು ಕಳೆದ ಒಂದು ವರ್ಷದಿಂದ ದೇಶ ಪರ್ಯಟನೆಯಲ್ಲಿ ತೊಡಗಿದ್ದಾರೆ ಉತ್ತರ ಪ್ರದೇಶದ ಇಟ್ಟಾವ ನಗರದ ರಾಬಿನ್ ಸಿಂಗ್. ಸೈಕಲ್ ತುಳಿಯುವುದರ ಮೂಲಕ ರಾಜ್ಯ ರಾಜ್ಯಗಳನ್ನು ಸುತ್ತುತ್ತಿರುವ ರಾಬಿನ್ ಸಿಂಗ್ ತನ್ನ ಪರಿಸರ ಪ್ರೇಮವನ್ನು ಮನ ಮನಗಳಿಗೆ ಬಿತ್ತುತ್ತಿದ್ದಾರೆ. ಈಗಾಗಲೇ 26 ಸಾವಿರ ಕಿಲೋ ಮೀಟರ್ ಯಾತ್ರೆ ಕೈಗೊಂಡಿರುವ ರಾಬಿನ್ ತನ್ನ ಜೈತ್ರ ಯಾತ್ರೆಯನ್ನು ದೇಶದಾದ್ಯಂತ
ಮುಂದುವರಿಸುತ್ತಿದ್ದಾರೆ. ತಮ್ಮ ಪರಿಸರ ಸಂರಕ್ಷಣಾ ಯಾತ್ರೆಯ ಮಧ್ಯೆ ರಾಬಿನ್ ಸಿಂಗ್ ಸುಳ್ಯಕ್ಕೂ ಆಗಮಿಸಿದ್ದಾರೆ. ದಕ್ಷಿಣ ಕನ್ನಡ ಜಿಲ್ಲೆಯ ಪರ್ಯಟನೆ ಸಂದರ್ಭ ಸುಳ್ಯಕ್ಕೆ ಆಗಮಿಸಿದ ಅವರನ್ನು ಶಿವಶಕ್ತಿ ಇಲೆಕ್ಟ್ರಿಕಲ್ಸ್ನ ವಿಕ್ರಂ ಸಿಂಗ್ ಮತ್ತಿತರರು ಸ್ವಾಗತಿಸಿ ಆತಿಥ್ಯ ನೀಡಿದ್ದಾರೆ. 2022 ಅಕ್ಟೋಬರ್ ತಿಂಗಳಲ್ಲಿ ಕನ್ಯಾಕುಮಾರಿಯಿಂದ ಯಾತ್ರೆ ಆರಂಭಿಸಿರುವ ಅವರು ಬಹುತೇಕ ರಾಜ್ಯಗಳನ್ನು ಸುತ್ತಿದ್ದಾರೆ. ಇನ್ನು 3 ರಾಜ್ಯಗಳು ಮಾತ್ರ ಉಳಿದಿದೆ. ಇವರ ದೇಶ ಪರ್ಯಟನೆ ಮುಂದಿನ 2024ರ ಮಾರ್ಚ್ನಲ್ಲಿ ಮಧ್ಯಪ್ರದೇಶದ ಭೂಪಾಲ್ನಲ್ಲಿ ಸಮಾಪ್ತಿಗೊಳ್ಳಲಿದೆ. ಪರಿಸರ ಕಾಳಜಿ, ಪ್ಲಾಸ್ಟಿಕ್ನಿಂದ ಜೀವಜಲದ ಮೇಲಾಗುವ ದುಷ್ಪರಿಣಾಮಗಳ ಕುರಿತು ಪ್ರತೀ ರಾಜ್ಯಗಳ ಪ್ರತೀ

ಜಿಲ್ಲೆಗಳಿಗೆ ತೆರಳಿ ಜಾಗೃತಿ ಮೂಡಿಸುವುದು ಈ ಸೈಕಲ್ ಸವಾರಿ ಮುಖ್ಯ ಉದ್ದೇಶವಾಗಿದೆ. ಉತ್ತರ ಮತ್ತು ದಕ್ಷಿಣ ಭಾರತದ ಬಹುತೇಕ ರಾಜ್ಯ ಕ್ರಮಿಸಿದ್ದಾರೆ. ದಕ್ಷಿಣ ಕನ್ನಡದಿಂದ ಕೊಡಗು ಮೂಲಕ ಯಾತ್ರೆ ಮುಂದುವರಿಸಿ ತೆಲಂಗಾಣ ರಾಜ್ಯಕ್ಕೆ ಪ್ರಯಾಣ ಬೆಳೆಸಿ ಅಲ್ಲಿಂದ 2024 ಮಾರ್ಚ್ನಲ್ಲಿ ಮಧ್ಯ ಪ್ರದೇಶದ ಭೂಪಾಲ್ಗೆ ತಲುಪಿ ತನ್ನ ಪರಿಸರ ಜಾಗೃತಿಯನ್ನು ಸಮಾಪ್ತಿಗೊಳಿಸಲಾಗುವುದು ಎಂದು ರಾಬಿನ್ ಸಿಂಗ್ ತಿಳಿಸಿದ್ದಾರೆ. ತನ್ನ ‘ಗ್ರೀನ್ ಇಂಡಿಯಾ ಅಭಿಯಾನ’ದ ಭಾಗವಾಗಿ ಎಲ್ಲಾ ರಾಜ್ಯಗಳ ಪ್ರತಿ ಜಿಲ್ಲೆಗಳ ಮೂಲಕ ಪ್ರಯಾಣ ಬೆಳೆಸಿ ಶಾಲಾ, ಕಾಲೇಜುಗಳು ಮತ್ತಿತರ ಕಡೆಗಳಲ್ಲಿ ವಿದ್ಯಾರ್ಥಿಗಳಿಗೆ ಮತ್ತು ಯುವಜನತೆಗೆ ಪರಿಸರದ ಕುರಿತ ಕಾಳಜಿ ಮತ್ತು ಪ್ಲಾಸ್ಟಿಕ್ನಿಂದ ಆಗುತ್ತಿರುವ ಸಮಸ್ಯೆಗಳ ಬಗ್ಗೆ ಮಾಹಿತಿ ನೀಡಿ ಜಾಗೃತಿ ಮೂಡಿಸುತ್ತಾರೆ.
ಪೂರ್ತಿಯಾಗಿ ಸೈಕಲ್ ಮೂಲಕವೇ ತೆರಳುವ ಅವರು ವಿವಿಧ ಕಡೆಗಳಲ್ಲಿ ವಾಸ್ತವ್ಯ ಹೂಡಿ, ವಿಶ್ರಾಂತಿ ಪಡೆದು ಮುಂದುವರಿಯುತ್ತಾರೆ. ಯಾತ್ರೆಗೆ ಬಳಸುವ ಎರಡನೇ ಸೈಕಲ್ ಇದು. ಮೊದಲ ಸೈಕಲ್ 17 ಸಾವಿರ ಕಿ.ಮಿ.ಕ್ರಮಿಸಿದರೆ ಎರಡನೇ ಸೈಕಲ್ 9 ಸಾವಿರ ಕಿ.ಮಿ. ತುಳಿದಿದ್ದಾರೆ.
37 ವರ್ಷ ವಯಸ್ಸಿನ ರಾಬಿನ್ ಸಿಂಗ್ ಮೂಲತಃ ಕೃಷಿಕರು. ಪರಿಸರ ಪ್ರೇಮಿ. ತನ್ನ ಪರಿಸರ ಪ್ರೀತಿಗಾಗಿ ದಣಿವರಿಯದೆ ಸೈಕಲ್ ತುಳಿಯುತ್ತಿದ್ದಾರೆ..





