ಸುಳ್ಯ: ಸುಳ್ಯ- ಜಟ್ಟಿಪಳ್ಳ- ಕೊಡಿಯಾಲಬೈಲ್ ರಸ್ತೆ ತೀರಾ ಹದಗೆಟ್ಡಿದ್ದು, ತಕ್ಷಣ ದುರಸ್ತಿ ಪಡಿಸಬೇಕೆಂದು ಆಗ್ರಹಿಸಿ ರಸ್ತೆಯ ಫಲಾನುಭವಿ, ಪತ್ರಕರ್ತ ಶರೀಫ್ ಜಟ್ಟಿಪಳ್ಳ ಇಂದು ಪ್ರತಿಭಟನೆ ಏಕಾಂಗಿಯಾಗಿ ಕುಳಿತು ರಸ್ತೆ ಬದಿ ಕುಳಿತು ಪ್ರತಿಭಟನೆ ನಡೆಸಿದರು.ಇಂದು ರಸ್ತೆ ಬದಿಯಲ್ಲಿ ಬ್ಯಾನರ್ ಹಾಕಿ ಪ್ರತಿಭಟನೆಗೆ ಕುಳಿತ ಶರೀಫ್ ಅವರಿಗೆ ಬೆಂಬಲ ಸೂಚಿಸಿ ಹಲವು ಮಂದಿ ಪ್ರಮುಖರು, ಸ್ಥಳೀಯರು ಆಗಮಿಸಿದರು. ಬಳಿಕ ರಸ್ತೆ
ದುರಸ್ತಿ ಮಾಡುವುದಾಗಿ ಅಲ್ಲಿಗೆ ಆಗಮಿಸಿದ ನಗರ ಪಂಚಾಯತ್ ಮುಖ್ಯಾಧಿಕಾರಿ ಭರವಸೆ ನೀಡಿದ ಮೇರೆಗೆ ಪ್ರತಿಭಟನೆಯನ್ನು ಶರೀಫ್ ಹಿಂಪಡೆದುಕೊಂಡರು.
ಈ ರಸ್ತೆಯನ್ನು ದುರಸ್ತಿ ಪಡಿಸಬೇಕೆಂದು ಹಲವು ಬಾರಿ ನಾಗರಿಕರು ಮನವಿ ಸಲ್ಲಿಸಿದ್ದರು. ರಿಕ್ಷಾ ಚಾಲಕರು ಕೂಡ ಕಳೆದ ವಾರ ನಗರ ಪಂಚಾಯತ್ ಎದುರು ಪ್ರತಿಭಟನೆ ನಡೆಸಿದ್ದರು. ಹಲವು ಬಾರಿ ಮನವಿ ಮಾಡಲಾಗಿತ್ತು. ಮಾಧ್ಯಮಗಳಲ್ಲಿ ವರದಿ ಪ್ರಕಟಿಸಲಾಗಿತ್ತು.

ಆದರೆ ದುರಸ್ತಿ ಮಾಡಿಲ್ಲ. ಕಳೆದ ಚುನಾವಣೆಯ ಸಂದರ್ಭದಲ್ಲಿ ಪ್ಯಾಚ್ ವರ್ಕ್ಗೆ ಜಲ್ಲಿ ಮತ್ತಿತರ ವಸ್ತುಗಳನ್ನು ತಂದು ಹಾಕಿದರೂ ದುರಸ್ತಿ ಮಾಡದೆ ಅದನ್ನು ಅಲ್ಲಿಂದ ತೆಗೆಯಲಾಗಿತ್ತು ಈ ಹಿನ್ನಲೆಯಲ್ಲಿ ಪ್ರತಿಭಟನೆ ನಡೆಸುವುದು ಅನಿವಾರ್ಯವಾಗಿದೆ ಎಂದು ಶರೀಪ್ ಹೇಳಿದರು.
ಜ.9 ರೊಳಗೆ ಈ ರಸ್ತೆಗೆ ಪ್ಯಾಚ್ ವರ್ಕ್ ಮಾಡಿಕೊಡುತ್ತೇವೆ. ಜನವರಿ ಅಂತ್ಯಕ್ಕೆ ಟೆಂಡರ್ ಮಾಡಿ ಪೂರ್ಣ ಡಾಮರೀಕರಣ ಮಾಡುತ್ತೇವೆ ಎಂದು ಮುಖ್ಯಾಧಿಕಾರಿ ಭರವಸೆ ನೀಡಿದ ಹಿನ್ನಲೆಯಲ್ಲಿ ಶರೀಫ್ ಜಟ್ಟಿಪಳ್ಳ ಪ್ರತಿಭಟನೆ ಹಿಂತೆಗೆದುಕೊಂಡರು.














