ಸುಳ್ಯ:ಸಂಪೂರ್ಣ ಹದಗೆಟ್ಟಿರುವ ಸುಳ್ಯ-ಪೈಚಾರ್-ಬೆಳ್ಳಾರೆ- ನಿಂತಿಕಲ್ಲು ರಸ್ತೆ ಅಭಿವೃದ್ಧಿ ಕುರಿತು ಹಾಗೂ ಬಹುಗ್ರಾಮ ಕುಡಿಯುವ ನೀರಿನ ಯೋಜನೆಗಳ ಕುರಿತು ಶಾಸಕಿ ಭಾಗೀರಥಿ ಮುರುಳ್ಯ ನೇತೃತ್ವದಲ್ಲಿ ಲೋಕೋಪಯೋಗಿ ಹಾಗೂ ರಾಷ್ಟ್ರೀಯ ಹೆದ್ದಾರಿ ಇಂಜಿನಿಯರ್ಗಳ ಹಾಗೂ ಕುಡಿಯುವ ನೀರು ಮತ್ತು ನೈರ್ಮಲ್ಯ ವಿಭಾಗದ ಇಂಜಿನಿಯರ್ಗಳ ಸಭೆ ಸುಳ್ಯ ತಾಲೂಕು ಪಂಚಾಯತ್ನ ಶಾಸಕರ ಕಚೇರಿಯಲ್ಲಿ ನಡೆಯಿತು.ಸಂಪೂರ್ಣ ಹದಗೆಟ್ಟಿರುವ
ಸುಳ್ಯ-ಪೈಚಾರ್-ಬೆಳ್ಳಾರೆ- ನಿಂತಿಕಲ್ಲು ರಸ್ತೆ ಅಭಿವೃದ್ಧಿಗೆ ಕೇಂದ್ರ ರಸ್ತೆ ಅಭಿವೃದ್ಧಿ ನಿಧಿಯಿಂದ (ಸಿಆರ್ಐಎಫ್) 6 ಕೋಟಿ ಹಾಗೂ ರಾಜ್ಯ ಹೆದ್ದಾರಿ ಅಭಿವೃದ್ಧಿ ಯೋಜನೆಯಡಿ(ಎಸ್ಎಚ್ಡಿಪಿ) 10 ಕೋಟಿ ಅನುದಾನ ಮಂಜೂರಾಗಿದ್ದು ಟೆಂಡರ್ ಹಂತದಲ್ಲಿದೆ ಎಂದು ಲೋಕೋಪಯೋಗಿ ಹಾಗೂ ರಾಷ್ಟ್ರೀಯ ಹೆದ್ದಾರಿ ವಿಭಾಗದ ಇಂಜಿನಿಯರ್ಗಳು ಸಭೆಗೆ ಮಾಹಿತಿ ನೀಡಿದರು. ಟೆಂಡರ್ ಪೂರ್ತಿಯಾಗಿ ಡಿ.15ರ ವೇಳೆಗೆ ಕಾಮಗಾರಿ ಆರಂಭಿಸಲಾಗುವುದು ಎಂದು ಇಂಜಿನಿಯರ್ಗಳು ತಿಳಿಸಿದರು. ಅದಕ್ಕಿಂತಲೂ ಮುಂಚೆ ರಸ್ತೆಯ ಹೊಂಡ ಮುಚ್ಚುವ ಕೆಲಸ ನಡೆಸುವಂತೆ ಶಾಸಕರಯ ಲೋಕೋಪಯೋಗಿ ಇಂಜಿನಿಯರ್ಗೆ ತಿಳಿಸಿದರು. ಮಳೆ ಬಿಟ್ಟ ತಕ್ಷಣ ಹೊಂಡ ಮುಚ್ಚುವ ಕಾಮಗಾರಿ
ನಡೆಸುವುದಾಗಿ ಲೋಕೋಪಯೋಗಿ ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್ ಗೋಪಾಲ್ ತಿಳಿಸಿದರು.ಬಹುಗ್ರಾಮ ಕುಡಿಯುವ ನೀರಿನ ಯೋಜನೆಯಡಿ ಕೇಂದ್ರ ಸರಕಾರ ಅನುದಾನ ಬಿಡುಗಡೆ ಮಾಡಿದ್ದು ಕಾಮಗಾರಿ ಆರಂಭಗೊಂಡಿದ್ದು ಸುಳ್ಯ ತಾಲೂಕಿನ ಎಲ್ಲಾ ಗ್ರಾಮಗಳ ಕುಡಿಯುವ ನೀರಿನ ಸಮಸ್ಯೆ ಪರಿಹಾರವಾಗಲಿದೆ ಎಂದು ಶಾಸಕಿ ಭಾಗೀರಥಿ ಮುರುಳ್ಯ ಹೇಳಿದರು. ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ವಿಭಾಗದ ಸಹಾಯಕ ಇಂಜಿನಿಯರ್ ಮಣಿಕಂಠ ಯೋಜಬೆಯ ಕುರಿತು ಮಾಹಿತಿ ನೀಡಿದರು.
ಜಿಲ್ಲಾ ಪಂಚಾಯತ್ ಮಾಜಿ ಸದಸ್ಯರಾದ ಎಸ್.ಎನ್.ಮನ್ಮಥ, ಹರೀಶ್ ಕಂಜಿಪಿಲಿ, ರಾಷ್ಟ್ರೀಯ ಹೆದ್ದಾರಿ ವಿಭಾಗದ ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್ ಜಿತೇಂದ್ರ, ಸಹಾಯಕ ಇಂಜಿನಿಯರ್ ಗುರುಪ್ರಸಾದ್, ಲೋಕೋಪಯೋಗಿ ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್ ಗೋಪಾಲ್, ಗ್ರಾಮೀಣ ಕುಡಿಯುವ ನೀರು ಸರಬರಾಜು ಮತ್ತು ನೈರ್ಮಲ್ಯ ವಿಭಾಗದ ಸಹಾಯಕ ಇಂಜಿನಿಯರ್ಗಳಾದ ಮಣಿಕಂಠ, ಜನಾರ್ಧನ, ಬಹುಗ್ರಾಮ ಕುಡಿಯುವ ನೀರಿನ ಯೋಜನೆಯ ಗುತ್ತಿಗೆದಾರರಾದ ಶಂಖರನಾರಾಯಣ ಕಂಪೆನಿಯ ಯೋಜನಾ ವ್ಯವಸ್ಥಾಪಕರಾದ ಶ್ರೀನಿವಾಸ ಕುಲಕರ್ಣಿ, ಆಡಳಿತ ವ್ಯವಸ್ಥಾಪಕರಾದ ಯಶ್ವಿನ್ ಭಾಗವಹಿಸಿದ್ದರು. ಪ್ರಮುಖರಾದ ಸುಬೋದ್ ಶೆಟ್ಟಿ ಮೇನಾಲ, ಸಂತೋಷ್ ಜಾಕೆ, ಬಾಲಕೃಷ್ಣ ಕೀಲಾಡಿ, ಶ್ರೀನಾಥ್ ರೈ ಬಾಳಿಲ, ಸುನಿಲ್ ಕೇರ್ಪಳ, ಪ್ರಸಾದ್ ಕಾಟೂರು ಮತ್ತಿತರರು ಉಪಸ್ಥಿತರಿದ್ದರು.