ಸುಳ್ಯ:ಎಸ್.ಅಂಗಾರರು ಸಚಿವರಾಗಿದ್ದ 2022-23ನೇ ಸಾಲಿನಲ್ಲಿ ಅವರು ಶಿಫಾರಸ್ಸು ಮಾಡಿ ಅನುದಾನ ಮಂಜೂರಾಗಿದ್ದ ರಸ್ತೆಗಳ ಅಭಿವೃದ್ಧಿಗೆ ಈಗ ಅನುದಾನ ಬಿಡುಗಡೆಯಾಗಿದೆ ಎಂದು ತಿಳಿದು ಬಂದಿದೆ. ಬಾರಿ ಮಳೆ ಮತ್ತು ಪ್ರವಾಹದಿಂದ ಹಾನಿಗೊಳಗಾದ ಗ್ರಾಮೀಣ ರಸ್ತೆ, ಸೇತುವೆ, ಸರ್ಕಾರಿ ಕಟ್ಟಡಗಳ ದುರಸ್ತಿಗಾಗಿ ಮಳೆ ಪರಿಹಾರ ಕಾರ್ಯಕ್ರಮದಡಿ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳುವಂತೆ ಸರಕಾರಕ್ಕೆ ಅಂಗಾರರು ಶಿಫಾರಸ್ಸು ಮಾಡಿಕೊಂಡಿದ್ದ ಕಾಮಗಾರಿಗಳ ಪಟ್ಟಿಗೆ
ಆಗಿನ ಸರಕಾರ ಮಂಜೂರಾತಿ ನೀಡಿತ್ತು. ಆದರೆ ಚುನಾವಣೆ ಘೋಷಣೆ ಆದ ಕಾರಣ ಅನುದಾನ ಬಿಡುಗಡೆ ಆಗಿರಲಿಲ್ಲ.ಅಂದು ಶಿಪಾರಸ್ಸು ಮಾಡಿ ಮಂಜೂರಾದ ಪಟ್ಟಿಯಲ್ಲಿದ್ದ ರಸ್ತೆಗಳ ಅಭಿವೃದ್ಧಿಗೆ ಈಗಿನ ಸರಕಾರ ಅನುದಾನ ಬಿಡುಗಡೆಗೊಳಿಸಿ ಆದೇಶ ಮಾಡಿರುವುದಾಗಿ ತಿಳಿದುಬಂದಿದೆ.ಎಸ್.ಅಂಗಾರರು ಸುಮಾರು 3 ಕೋಟಿ ಅನುದಾನಕ್ಕಾಗಿ ಈ ಮೇಲಿನ ರಸ್ತೆಗಳ ಜತೆಗೆ ಇನ್ನೂ ಕೆಲವು ರಸ್ತೆಗಳ ಹೆಸರು ಪಟ್ಟಿಯಲ್ಲಿತ್ತು. ಇದೀಗ ರೂ.1. ಕೋಟಿ 44 ಲಕ್ಷದ 85 ಸಾವಿರ ಬಿಡುಗಡೆಗೊಂಡಿದೆ.
ಸುಳ್ಯ ತಾಲೂಕು ಐವರ್ನಾಡು ಗ್ರಾಮದ ಕಲ್ಲೋಣಿ- ಕುಳ್ಳಂಪಾಡಿ ರಸ್ತೆ ಅಭಿವೃದ್ಧಿಗೆ ರೂ. 25.00 ಲಕ್ಷ, ಸುಳ್ಯ ತಾಲೂಕು ಐವರ್ನಾಡು ಗ್ರಾಮದ ಐವರ್ನಾಡು- ದೇರಾಜೆ ರಸ್ತೆ ಅಭಿವೃದ್ಧಿಗೆ ರೂ. 25 ಲಕ್ಷ, ಸುಳ್ಯ ತಾಲೂಕು ಕೊಡಿಯಾಲಬೈಲು-ಕಮಿಲ ರಸ್ತೆ ಅಭಿವೃದ್ಧಿಗೆ ರೂ. 25 ಲಕ್ಷ, ಕಡಬ ತಾಲೂಕು ಕಾಯಿಮಣ ಗ್ರಾಮದ ಕೆಲೆಂಬೀರಿ-ತುಂಬ ರಸ್ತೆ ಅಭಿವೃದ್ಧಿಗೆ ರೂ. 20 ಲಕ್ಷ, ಕಡಬ ತಾಲೂಕು ಆಲಂಕಾರು ಗ್ರಾಮದ ಕಕ್ಕೆ-ಶರವೂರು ರಸ್ತೆ ಅಭಿವೃದ್ಧಿಗೆ ರೂ.29.85 ಲಕ್ಷ, ಕಡಬ ತಾಲೂಕು ನೆಲ್ಯಾಡಿ ಗ್ರಾಮದ ಹೊಸೊಳಿಕೆ ರಸ್ತೆ ರೂ. 20 ಲಕ್ಷ ರೂ ಮಂಜೂರುಗೊಂಡಿರುವುದಾಗಿ ತಿಳಿದುಬಂದಿದೆ.
ಹಿಂದೆ ಮಂಜೂರಾಗಿ ಚುನಾವಣೆ ಘೋಷಣೆ ಆದ ಕಾರಣ ಅನುದಾನ ಬಿಡುಗಡೆ ಆಗಿರಲಿಲ್ಲ. ಇದೀಗ ಅನುದಾನ ಬಿಡುಗಡೆ ಆಗಿದೆ ಎಂದು ಮಾಜಿ ಸಚಿವ ಎಸ್. ಅಂಗಾರ ತಿಳಿಸಿದ್ದಾರೆ.
ಸರಕಾರದ ಹಣ ಬಿಡುಗಡೆ ಮಾಡುತ್ತಿಲ್ಲ ಎಂಬುದಕ್ಕೆ ತಕ್ಕ ಉತ್ತರ: ಟಿ.ಎಂ.ಶಹೀದ್ ತೆಕ್ಕಿಲ್:
ಸುಳ್ಯದ ಮಾಜಿ ಶಾಸಕ ಹಾಗೂ ಸಚಿವ ಎಸ್ ಅಂಗಾರರು ಶಿಫಾರಸ್ಸು ಮಾಡಿದ್ದ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಕರ್ನಾಟಕದ ಕಾಂಗ್ರೆಸ್ ಸರಕಾರ ಹಣ ಬಿಡುಗಡೆ ಮಾಡಿರುವುದು ಸರಕಾರದಲ್ಲಿ ಹಣ ಇಲ್ಲ ಅಭಿವೃದ್ಧಿಯಾಗುತ್ತಿಲ್ಲ ಎಂದು ಪದೆ ಪದೆ ಹೇಳಿಕೆ ನೀಡುತ್ತಿರುವ ಬಿಜೆಪಿಗರಿಗೆ ಸಿದ್ದರಾಮಯ್ಯ ಸರಕಾರ ನೀಡಿದ ತಕ್ಕ ಉತ್ತರವಾಗಿದೆ ಎಂದು ಕೆ.ಪಿ.ಸಿ.ಸಿ ಪ್ರಧಾನ ಕಾರ್ಯದರ್ಶಿ ಟಿ.ಎಂ ಶಹೀದ್ ತೆಕ್ಕಿಲ್ ಹೇಳಿದ್ದಾರೆ. ಸರಕಾರದಲ್ಲಿ ಹಣ ಇಲ್ಲ ಖಜಾನೆ ಖಾಲಿ ಎಂದು ಸರಕಾರವನ್ನು ಟೀಕಿಸಿದ ಪಕ್ಷದ ನಾಯಕರು ಇದಕ್ಕೆ ಉತ್ತರ ಕೊಡಬೇಕು ಎಂದು ಅವರು ಹೇಳಿದರು.