ಸುಳ್ಯ:ಸ್ವಾತಂತ್ರ್ಯೋತ್ಸವದ ಪ್ರಯುಕ್ತ ಗುಜರಾತ್ ಸರಕಾರ ನೀಡುವ ಪರಿಸರ ರಾಜ್ಯ ಪ್ರಶಸ್ತಿಗೆ ಗ್ರೀನ್ ಹೀರೋ ಆಫ್ ಇಂಡಿಯಾ, ಫಾರೆಸ್ಟರ್ ಕ್ರಿಯೇಟರ್ಸ್ನ ಸಂಸ್ಥಾಪಕ ಪರಿಸರ ತಜ್ಞ ಡಾ.ಆರ್.ಕೆ.ನಾಯರ್ ಅವರು ಆಯ್ಕೆಯಾಗಿದ್ದಾರೆ. ಆಗಸ್ಟ್ 15ರಂದು ವಲ್ಸಾಡ್ ಜಿಲ್ಲೆಯಲ್ಲಿ ನಡೆಯುವ ಗುಜರಾತ್ ರಾಜ್ಯ ಸರಕಾರದ ಸ್ವಾತಂತ್ರ್ಯೋತ್ಸವ ಕಾರ್ಯಕ್ರಮದಲ್ಲಿ ಪ್ರಶಸ್ತಿ
ಪ್ರದಾನ ನಡೆಯಲಿದೆ. ಗುಜರಾತ್ ರಾಜ್ಯಪಾಲ, ಮುಖ್ಯಮಂತ್ರಿ ಮತ್ತಿತರ ಗಣ್ಯರು ಭಾಗವಹಿಸುವ ಸಮಾರಂಭದಲ್ಲಿ ಪ್ರಶಸ್ತಿ ಪ್ರದಾನ ನಡೆಯಲಿದೆ. ಸುಳ್ಯ ಜಾಲ್ಸೂರಿನವರಾದ ಡಾ. ಆರ್.ಕೆ.ನಾಯರ್(ರಾಧಾಕೃಷ್ಣನ್ ನಾಯರ್) ಮಿಯಾವಾಕಿ ಮಾದರಿಯಲ್ಲಿ ಅರಣ್ಯ ಬೆಳೆಸಿ ಲಕ್ಷಾಂತರ ಗಿಡಗಳನ್ನು ಬೆಳೆಸುವ ಮೂಲಕ ಪ್ರಸಿದ್ದಿ ಪಡೆದಿದ್ದಾರೆ. ಗುಜರಾತ್ನಲ್ಲಿ ಉದ್ಯಮಿಯಾಗಿರುವ ಡಾ.ನಾಯರ್ ಈಗ ಪರಿಸರ ಸಂರಕ್ಷಣೆ ಹಾಗೂ ಪರಿಸರ ಬೆಳೆಸುವುದರಲ್ಲಿ ಸಕ್ರೀಯರಾಗಿದ್ದಾರೆ. ನೂರಕ್ಕೂ ಹೆಚ್ಚು ಹೊಸ ಅರಣ್ಯಗಳನ್ನು ಸೃಷ್ಠಿಸಿರುವ ಅವರು ಸುಮಾರು 20 ಲಕ್ಷಕ್ಕೂ ಹೆಚ್ಚು ಗಿಡಗಳನ್ನು ಬೆಳೆಸಿದ್ದಾರೆ.ಒಂದು ಕೋಟಿ ಗಿಡ ಬೆಳೆಸುವ ಗುರಿ ಹೊಂದಿದ್ದಾರೆ.