ಪುಣೆ: ಚೆನ್ನೈ ಸೂಪರ್ ಕಿಂಗ್ಸ್ ತಂಡದ ಬ್ಯಾಟರ್ ಋತುರಾಜ್ ಗಾಯಕ್ವಾಡ್ ಅವರು ಮಹಾರಾಷ್ಟ್ರ ಮಹಿಳಾ ತಂಡದ ಆಲ್ರೌಂಡರ್ ಉತ್ಕರ್ಷ ಪವಾರ್ ಅವರನ್ನು ವಿವಾಹವಾಗಿದ್ದಾರೆ. ಸಿಎಸ್ಕೆ ಆಟಗಾರ ತಮ್ಮ ಜೀವನದ ಈ ಸಂಭ್ರಮದ ದಿನಗಳನ್ನು ಇನ್ಸ್ಟಾಗ್ರಾಮ್ನಲ್ಲಿ ಹಂಚಿಕೊಂಡಿದ್ದಾರೆ. ಋತುರಾಜ್ ಬಹಳ ಸಮಯದಿಂದ
ಉತ್ಕರ್ಷನೊಂದಿಗೆ ಪ್ರೀತಿಯಲ್ಲಿದ್ದರು. ಇದೀಗ ಅವರಿಬ್ಬರು ಮದುವೆಯಾಗಿದ್ದಾರೆ.ಉತ್ಕರ್ಷ ಅವರು ಆಲ್ರೌಂಡರ್ ಆಗಿದ್ದು, ಬಲಗೈ ಬ್ಯಾಟರ್ ಮತ್ತು ವೇಗದ ಬೌಲರ್ ಕೂಡ ಆಗಿದ್ದಾರೆ. ಮದುವೆಯ ಕಾರಣಕ್ಕೆ ಋತುರಾಜ್ ಅವರು ವಿಶ್ವ ಟೆಸ್ಟ್ ಚಾಂಪಿಯನ್ಷಿಪ್ ತಂಡದ ಮೀಸಲು ಆಟಗಾರರಾಗಿ ಅವಕಾಶ ಸಿಕ್ಕರೂ ಅಲ್ಲಿಗೆ ಹೋಗಲು ನಿರಾಕರಿಸಿದ್ದರು.
ಉತ್ಕರ್ಷ ಪವಾರ್ ಅವರು 18 ತಿಂಗಳ ಹಿಂದೆ ಕೊನೆಯ ಬಾರಿಗೆ ಕ್ರಿಕೆಟ್ ಪಂದ್ಯ ಆಡಿದ್ದರು. ಅವರು ಪುಣೆಯ ಇನ್ಸ್ಟಿಟ್ಯೂಟ್ ಆಫ್ ನ್ಯೂಟ್ರಿಷನ್ ಅಂಡ್ ಫಿಟ್ನೆಸ್ ಸೈನ್ಸಸ್ (ಐಎನ್ಎಫ್ಎಸ್) ನಲ್ಲಿ ಅಧ್ಯಯನ ಮಾಡುತ್ತಿದ್ದಾರೆ. ಋತುರಾಜ್ ಅವರ ಕೈ ಹಿಡಿದಿರುವ ಉತ್ಕರ್ಷ ಅವರು ಐಪಿಎಲ್ ಫೈನಲ್ ಸಮಯದಲ್ಲಿ ಅಹಮದಾಬಾದ್ನಲ್ಲಿ ಕಾಣಿಸಿಕೊಂಡಿದ್ದರು. ಗಾಯಕ್ವಾಡ್ ಮತ್ತು ಸಿಎಸ್ಕೆ ತಂಡವನ್ನು ಪ್ರೇಕ್ಷಕರ ಗ್ಯಾಲರಿಯಲ್ಲಿ ಹುರಿದುಂಬಿಸಿದ್ದರು. ಅವರಿಬ್ಬರು ಪಂದ್ಯದ ಬಳಿಕ ಜತೆಯಾಗಿ ಟ್ರೋಫಿಯೊಂದಿಗೆ ಕಾಣಿಸಿಕೊಂಡಿದ್ದರು.