ಮಂಗಳೂರು: ದಕ್ಷಿಣ ಕನ್ನಡ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ವತಿಯಿಂದ ಗ್ರಾಮ ವಾಸ್ತವ್ಯ ಮಾಡಿದ ಕೊಲ್ಲಮೊಗ್ರ ಹಾಗೂ ಹರಿಹರ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿನ ಕಂದಾಯ ಸಮಸ್ಯೆಗಳನ್ನು ಆದ್ಯತೆಯ ಮೇರೆಗೆ ಪರಿಹರಿಸಬೇಕು ಎಂದು ದ.ಕ.ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ನಿಯೋಗ ಕಂದಾಯ ಸಚಿವ ಕೃಷ್ಣ ಭೈರೇ ಗೌಡ ಅವರನ್ನು ಭೇಟಿ ಮಾಡಿ ಮನವಿ ಸಲ್ಲಿಸಲಾಯಿತು. ದ.ಕ.ಜಿಲ್ಲಾ
ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಶ್ರೀನಿವಾಸ ನಾಯಕ್ ಇಂದಾಜೆ ನೇತೃತ್ವದ ನಿಯೋಗ ಸಚಿವರನ್ನು ಭೇಟಿ ಮಾಡಿ ಗ್ರಾಮ ವಾಸ್ತವ್ಯ ಕಾರ್ಯಕ್ರಮದ ಬಗ್ಗೆ ವಿವರಿಸಿದರು. ಅರಣ್ಯದಂಚಿನ ಈ ಅವಳಿ ಗ್ರಾಮ ಪಂಚಾಯತ್ಗಳಲ್ಲಿ ಜನರಿಗೆ ಕಂದಾಯ ಮತ್ತು ಅರಣ್ಯ ಇಲಾಖೆಯ ಸಮಸ್ಯೆಗಳು ತುಂಬಾ ಇದೆ. ಗ್ರಾಮ ವಾಸ್ತವ್ಯ ಕಾರ್ಯಕ್ರಮದಲ್ಲಿ ಕಂದಾಯ ಸಂಬಂಧಪಟ್ಟು ಜನರಿಂದ ಹಲವು ಸಮಸ್ಯೆಗಳು ಕೇಳಿ ಬಂದಿದೆ ಎಂದು ಸಚಿವರಿಗೆ ವಿವರಿಸಲಾಯಿತು.ಪತ್ರಕರ್ತರ ಗ್ರಾಮ ವಾಸ್ತವ್ಯ ಮಾದರಿ ಕಾರ್ಯಕ್ರಮ ಎಂದು ಶ್ಲಾಘಿಸಿದ ಸಚಿವರು ಇಲ್ಲಿನ ಜನರ ಕಂದಾಯ ಸಮಸ್ಯೆಗಳ ಪರಿಹಾರಕ್ಕೆ ಕ್ರಮ ಕೈಗೊಳ್ಳಲಾಗುವುದು. ಕಂದಾಯ-ಅರಣ್ಯ ಸಮಸ್ಯೆ ಪರಿಹಾರಕ್ಕೆ ಪೈಲಟ್ ಯೋಜನೆಯಾಗಿ ಕೈಗೆತ್ತಿಕೊಳ್ಳಲಾಗುವುದು ಎಂದು ಹೇಳಿದರು.
ದ.ಕ.ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಶ್ರೀನಿವಾಸ ನಾಯಕ್ ಇಂದಾಜೆ, ಉಪಾಧ್ಯಕ್ಷ ಭಾಸ್ಕರ ರೈ ಕಟ್ಟ, ಕೋಶಾಧಿಕಾರಿ ಬಿ.ಎನ್.ಪುಷ್ಪರಾಜ್ ನಿಯೋಗದಲ್ಲಿದ್ದರು.














