ಮುಂಬೈ: ಕೇವಲ ಒಂದು ರನ್ನಿಂದ ಶತಕ ತಪ್ಪಿಸಿಕೊಂಡ ಸೋಫಿ ಡಿವೈನ್ (99 ರನ್) ಅವರ ಅಬ್ಬರದ ಬ್ಯಾಟಿಂಗ್ ಬಲದಿಂದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಮಹಿಳಾ ಪ್ರೀಮಿಯರ್ ಲೀಗ್ ಕ್ರಿಕೆಟ್ ಟೂರ್ನಿಯ ಪಂದ್ಯದಲ್ಲಿ ಭರ್ಜರಿ ಜಯ ಗಳಿಸಿತು. ಆರ್ಸಿಬಿ 8 ವಿಕೆಟ್ಗಳಿಂದ ಗುಜರಾತ್ ಜೈಂಟ್ಸ್ ತಂಡವನ್ನು ಸೋಲಿಸಿ ಸತತ
ಎರಡನೇ ಜಯ ದಾಖಲಿಸಿತು.ಗುಜರಾತ್ ನೀಡಿದ 189 ರನ್ಗಳ ಗುರಿ ಬೆನ್ನತ್ತಿದ ಆರ್ಸಿಬಿ 15.3 ಓವರ್ಗಳಲ್ಲಿ 2 ವಿಕೆಟ್ ಕಳೆದುಕೊಂಡು ಗೆಲುವು ಸಾಧಿಸಿತು. ಸೋಫಿ ಹಾಗೂ ನಾಯಕಿ ಸ್ಮೃತಿ ಮಂದಾನ (37) ಮೊದಲ ವಿಕೆಟ್ ಜೊತೆಯಾಟದಲ್ಲಿ 125 ರನ್ ಗಳಿಸಿದರು. 36 ಎಸೆತಗಳನ್ನು ಎದುರಿಸಿದ ಸೋಫಿ ಅವರ ಇನಿಂಗ್ಸ್ನಲ್ಲಿ 9 ಬೌಂಡರಿ ಎಂಟು ಸಿಕ್ಸರ್ ಇದ್ದವು. ಇವರಿಬ್ಬರು ಔಟಾದ ಬಳಿಕ ಎಲಿಸ್ ಪೆರಿ (ಔಟಾಗದೆ 19) ಮತ್ತು ಹೀದರ್ ನೈಟ್ (ಔಟಾಗದೆ 22) ತಂಡವನ್ನು ಜಯದ ದಡ ಸೇರಿಸಿದರು.ಟಾಸ್ ಗೆದ್ದು ಬ್ಯಾಟಿಂಗ್ ಮಾಡಿದ ಗುಜರಾತ್ ಆರಂಭಿಕ ಬ್ಯಾಟರ್ ಲಾರಾ ವೊಲ್ವಾರ್ಡ್ ಅಬ್ಬರದ ಅರ್ಧಶತಕದ ಬಲದಿಂದ (68; 42ಎ, 4X9, 6X2) 20 ಓವರ್ಗಳಲ್ಲಿ 4 ವಿಕೆಟ್ಗಳಿಗೆ 188 ರನ್ ಗಳಿಸಿತ್ತು. ಮೇಘನಾ (31), ಆ್ಯಷ್ಲಿ ಗಾರ್ಡನರ್(41) ತಂಡವು ಬೃಹತ್ ಮೊತ್ತ ಪೇರಿಸಲು ಕಾರಣರಾದರು. ಆರ್ಸಿಬಿಯ ಶ್ರೇಯಾಂಕಾ ಪಾಟೀಲ 2 ವಿಕೆಟ್ ಗಳಿಸಿದರು.