ಬೆಂಗಳೂರು: ಸನ್ರೈಸರ್ಸ್ ಹೈದರಾಬಾದ್ ತಂಡವನ್ನು 6 ವಿಕಟ್ಗಳಿಂದ ಮಣಿಸಿದ ರಾಯಲ್ ಚಾಲೆಂಜರ್ಸ್ ಬೆಂಗಳೂರು ಐಪಿಎಲ್ನಲ್ಲಿ ಶುಭಾರಂಭ ಮಾಡಿದೆ. ಐಪಿಎಲ್ ಉದ್ಘಾಟನಾ ಪಂದ್ಯದಲ್ಲಿ ಬೃಹತ್ ಮೊತ್ತ ಬೆನ್ನಟ್ಟಿದ ಹಾಲಿ ಚಾಂಪಿಯನ್ ಆರ್ಸಿಬಿ ಇನ್ನೂ 26 ಎಸೆತಗಳು ಬಾಕಿ ಇರುವಂತೆ ಭರ್ಜರಿ ಜಯ ದಾಖಲಿಸಿತು.202 ರನ್ಗಳ ಗುರಿ ಬೆನ್ನಟ್ಟಿದ
ಆರ್ಸಿಬಿ ತಂಡದ ಪರ ವಿರಾಟ್ ಕೊಹ್ಲಿ (ಅಜೇಯ 69.38 ಎಸೆತ, 5 ಬೌಂಡರಿ,5 ಸಿಕ್ಸರ್ ) ಹಾಗೂ ದೇವದತ್ತ ಪಡಿಕ್ಕಲ್ (61 ರನ್ 26 ಎಸೆತ
7 ಬೌಂಡರಿ,4 ಸಿಕ್ಸರ್) ಹಾಗೂ ರಜತ್ ಪಾಟಿದಾರ್ (31 ರನ್
12 ಎಸೆತ 2 ಬೌಂಡರಿ,3 ಸಿಕ್ಸರ್) ಅವರು ಸ್ಫೋಟಕ ಬ್ಯಾಟಿಂಗ್ ಮೂಲಕ ಕೇವಲ 15.4 ಓವರ್ಗಳಲ್ಲಿ 4 ವಿಕೆಟ್ ನಷ್ಟಕ್ಕೆ 203 ರನ್ ಗಳಿಸಿ ಪಂದ್ಯವನ್ನು ಮುಕ್ತಾಯಗೊಳಿಸಿದರು.
ಇದಕ್ಕೂ ಮೊದಲು ಟಾಸ್ ಸೋತು ಬ್ಯಾಟಿಂಗ್ ಆರಂಭಿಸಿದ ಎಸ್ಆರ್ಹೆಚ್ ತಂಡಕ್ಕೆ ಉತ್ತಮ ಆರಂಭ ಸಿಗಲಿಲ್ಲ. ತಂಡದ ಮೊತ್ತ 29 ಆಗುವಷ್ಟರಲ್ಲಿ ಎಸ್ಆರ್ಹೆಚ್ನ ಪ್ರಮುಖ ಬ್ಯಾಟರ್ಗಳಾದ ಅಭಿಷೇಕ್ ಶರ್ಮಾ, ಟ್ರಾವಿಸ್ ಹೆಡ್ ಹಾಗೂ ನಿತೀಶ್ ಕುಮಾರ್ ರೆಡ್ಡಿ ಪೆವಿಲಿಯನ್ ಸೇರಿಕೊಂಡರು. ಆದರೆ, ನಂತರ ಜೊತೆಯಾದ ಇಶಾನ್ ಕಿಶನ್ ಹಾಗೂ ಹೆನ್ರಿಕ್ ಕ್ಲಾಸನ್ 97 ರನ್ಗಳ ಜೊತೆಯಾಟ ಆಡಿದರು.
ಈ ವೇಳೆ ನಾಯಕ ಇಶಾನ್ ಕಿಶನ್ (80 ರನ್, 38ಎ, 6X5, 4X8) ಕಲೆಹಾಕಿ ಔಟ್ ಆದರೆ, ಹೆನ್ರಿಕ್ ಕ್ಲಾಸನ್ ಕೂಡ 31 ರನ್ ಗಳಿಸಿ ದೊಡ್ಡ ಹೊಡೆತಕ್ಕೆ ಕೈಹಾಕಿ ಔಟ್ ಆದರು. ಕೆಳ ಕ್ರಮಾಂಕದಲ್ಲಿ ಉತ್ತಮ ಬ್ಯಾಟಿಂಗ್ ನಡೆಸಿದ ಅನಿಕೇತ್ ವರ್ಮಾ (43 ರನ್, 18ಎ, 6X4, 4X3 ) ಸ್ಫೋಟಕ ಬ್ಯಾಟಿಂಗ್ ಮಾಡುವ ಮೂಲಕ ತಂಡದ ಮೊತ್ತ 20 ಓವರ್ಗಳಲ್ಲಿ 9 ವಿಕೆಟ್ ನಷ್ಟಕ್ಕೆ 201ರನ್ ಗಳಿಸಿತು.










