ಮುಂಬೈ: ಐಪಿಎಲ್ನ ರಣರೋಚಕ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಮುಂಬೈ ಇಂಡಿಯನ್ಸ್ ವಿರುದ್ಧ 12 ರನ್ಗಳ ರೋಚಕ ಗೆಲುವು ದಾಖಲಿಸಿದೆ. ಮೊದಲು ಬ್ಯಾಟ್ ಮಾಡಿದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು 20 ಓವರ್ಗಳಲ್ಲಿ 5 ವಿಕೆಟ್ ನಷ್ಟಕ್ಕೆ 221 ರನ್ಗಳ ಬೃಹತ್ ಮೊತ್ತ ಕಲೆ ಹಾಕಿತು. ದಿಟ್ಟ ಹೋರಾಟ ನೀಡಿದ ಮುಂಬೈ ಇಂಡಿಯನ್ಸ್ 20 ಓವರ್ಗಳಲ್ಲಿ 9 ವಿಕೆಟ್ ನಷ್ಟಕ್ಕೆ
209 ರನ್ ಗಳಿಸಿ, ಗೆಲುವಿನ ಸನಿಹದಲ್ಲಿ ಎಡವಿತು.ಸ್ಪೋಟಕ ಬ್ಯಾಟಿಂಗ್ ಪ್ರದರ್ಶಿಸಿದ ನಾಯಕ ಹಾರ್ದಿಕ್ ಪಾಂಡ್ಯ ಹಾಗೂ ತಿಲಕ್ ವರ್ಮ ಭರ್ಜರಿ ಹೋರಾಟ ನಡೆಸಿ ಮುಂಬೈಗೆ ಗೆಲುವಿನ ಆಸೆ ಚಿಗುರಿಸಿದರು. ಆದರೆ ಉತ್ತಮ ಬೌಲಿಂಗ್ ನಡೆಸಿದ ಆರ್ಸಿಬಿ ಬೌಲರ್ಗಳು ನಿರ್ಣಾಯಕ ಹಂತದಲ್ಲಿ ವಿಕೆಟ್ ಉರುಳಿಸಿ ಜಯ ತಂದು ಕೊಟ್ಟರು.
ಹಾರ್ದಿಕ್ ಪಾಂಡ್ಯ ಕೇವಲ 15 ಎಸೆತಗಳಲ್ಲಿ 3 ಬೌಂಡರಿ ಹಾಗೂ 4 ಸಿಕ್ಸರ್ ನೆರವಿನಿಂದ 42 ರನ್ ಗಳಿಸಿದರೆ, ಅರ್ಧ ಶತಕ ಸಿಡಿಸಿದ ತಿಲಕ್ ವರ್ಮ 29 ಎಸೆತಗಳಲ್ಲಿ ತಲಾ 4 ಬೌಂಡರಿ ಹಾಗೂ ಸಿಕ್ಸರ್ ನೆರವಿನಿಂದ 56 ರನ್ ಸಿಡಿಸಿದರು.ಸೂರ್ಯಕುಮಾರ್ ಯಾದವ್ 28, ರೋಹಿತ್ ಶರ್ಮ 17, ರಿಕೆಲ್ಟನ್ 17, ವಿಲ್ ಜಾಕ್ಸ್ 22 ರನ್ ಗಳಿಸಿದರು. ಆರ್ಸಿಬಿ ಪರ ಕ್ರುನಾಲ್ ಪಾಂಡ್ಯ 4, ಜೋಷ್ ಹೆಝಲ್ವುಡ್ , ಹಾಗೂ ಯಶ್ ದಯಾಳ್ ತಲಾ 2 ವಿಕೆಟ್, ಭುವನೇಶ್ವರ್ ಕುಮಾರ್ 1 ವಿಕೆಟ್ ಪಡೆದರು.

ಮೊದಲು ಬ್ಯಾಟ್ ಮಾಡಿದ ಆರ್ಸಿಬಿ ಬ್ಯಾಟರ್ಗಳು ಅಬ್ಬರದ ಬ್ಯಾಟಿಂಗ್ ಪ್ರದರ್ಶಿಸಿದರು.ಮೊದಲ ಒವರ್ನ ಎರಡನೇ ಬೌಲ್ನಲ್ಲೆ ಸಾಲ್ಟ್ ಅವರ ವಿಕೆಟ್ ಉರುಳಿ ಮುಂಬೈ ಬೌಲರ್ಗಳು ಆರ್ಸಿಬಿಗೆ ಆಘಾತ ನೀಡಿದರೂ ಕೊಹ್ಲಿ ಹಾಗೂ ದೇವದತ್ ಪಡಿಕಲ್ ಅವರ ಸಮರ್ಥ ಬ್ಯಾಟಿಂಗ್ ನೆರವಿನಿಂದ ರನ್ ಹೊಳೆಯೇ ಹರಿದು ಬಂದಿತು. ಸಾಲ್ಟ್ ನಾಲ್ಕು ರನ್ ಬಾರಿಸಿ ಫೆವಿಲಿಯನ್ಗೆ ಮರಳಿದರು. ರಜತ್ ಪಾಟಿದಾರ್ 32 ಎಸೆತಗಳಲ್ಲಿ 5 ಬೌಂಡರಿ ಹಾಗೂ 4 ಸಿಕ್ಸರ್ ನೆರವಿನಿಂದ 64 ರನ್ ಬಾರಿಸಿದರೆ, ಜವಾಬ್ದಾರಿಯುತ ಆಟ ಆಡಿದ ವಿರಾಟ್ ಕೊಹ್ಲಿ 42 ಎಸೆತಗಳಲ್ಲಿ 8 ಬೌಂಡರಿ ಹಾಗೂ 2 ಸಿಕ್ಸರ್ ಸಹೀತ 67 ರನ್ಗಳ ಸ್ಪೋಟಕ ಬ್ಯಾಟಿಂಗ್ ನೆರವಿನಿಂದ ಆರ್ಸಿಬಿ ಸವಾಲಿನ ಮೊತ್ತ ಕಾಣುವಲ್ಲಿ ಸಫಲವಾಯಿತು. ಇದರಿಂದ ಮುಂಬೈ ಮೈದಾನದಲ್ಲಿ ನೆರದಿದ್ದ ಆರ್ಸಿಬಿ ಅಭಿಮಾನಿಗಳಿಗೆ ನಿರಾಸೆಯಾಗಲಿಲ್ಲ.ದೇವದತ್ತ ಪಡಿಕಲ್ 22 ಎಸೆತಗಳಲ್ಲಿ 2 ಬೌಂಡರಿ ಹಾಗೂ 3 ಸಿಕ್ಸರ್ ನೆರವಿನಿಂದ 37 ರನ್ ಬಾರಿಸಿದರೆ,ಜಿತೇಶ್ ಶರ್ಮಾ 19 ಎಸೆತಗಳಲ್ಲಿ 2 ಬೌಂಡರಿ ಹಾಗೂ 4 ಸಿಕ್ಸರ್ ನೆರವಿನಿಂದ 40ರನ್ ಬಾರಿಸಿ ಅತ್ಯುತ್ತಮ ಕೊಡುಗೆಯನ್ನು ತಂಡಕ್ಕೆ ನೀಡಿದರು. ಲಿವಿಂಗ್ಸ್ಟೋನ್ ಶೂನ್ಯಕ್ಕೆ ಔಟಾಗಿ ನಿರಾಸೆ ಮೂಡಿಸಿದರು.ಮುಂಬೈ ಪರ ಟ್ರೆಂಟ್ ಬೊಲ್ಟ್ ಹಾಗೂ ಹಾರ್ದಿಕ್ ಪಾಂಡ್ಯ ತಲಾ ಎರಡು ವಿಕೆಟ್ ತೆಗೆದು ಗಮನ ಸೆಳೆದರು. ಆದರೂ ಯಾರೊಬ್ಬರು ಆರ್ಸಿಬಿ ಆಟಗಾರರನ್ನು ಕಟ್ಟಿ ಹಾಕುವಲ್ಲಿ ಯಶಸ್ಸು ಕಾಣಲಿಲ್ಲ.