ಬೆಂಗಳೂರು:ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಡೆಲ್ಲಿ ಕ್ಯಾಪಿಟಲ್ಸ್ ತಂಡವನ್ನು 47 ರನ್ಗಳಿಂದ ಸೋಲಿಸಿದೆ. ಸತತ ಐದನೇ ಜಯ ದಾಖಲಿಸಿರುವ ಆರ್ಸಿಬಿ ಪ್ಲೇ ಆಫ್ ಆಸೆಯನ್ನು ಜೀವಂತವಾಗಿರಿಸಿದೆ. 13 ಪಂದ್ಯದಲ್ಲಿ 6 ಜಯ ದಾಖಲಿಸಿದ ಆರ್ಸಿಬಿ 12 ಅಂಕ ಪಡೆದು 5ನೇ ಸ್ಥಾನಕ್ಕೇರಿದೆ.ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ
ಆರ್ಸಿಬಿ 20 ಓವರ್ಗಳಲ್ಲಿ 8 ವಿಕೆಟ್ ನಷ್ಟಕ್ಕೆ 187 ರನ್ ಕಲೆ ಹಾಕಿತು.188 ರನ್ ಗುರಿ ಬೆನ್ನಟ್ಟಿದ ಡೆಲ್ಲಿ ಕ್ಯಾಪಿಟಲ್ಸ್
19.1 ಓವರ್ಗಳಲ್ಲಿ 140 ರನ್ಗೆ ಆಲ್ ಔಟ್ ಆಯಿತು. ಗುರಿ ಬೆನ್ನಟ್ಟಿದ ಕ್ಯಾಪಿಟಲ್ಸ್ಗೆ ಆರ್ಸಿಬಿ ಬೌಲರ್ಗಳು ಆರಂಭದಲ್ಲೇ ಆಘಾತ ನೀಡಿದರು. 30 ರನ್ ಆಗುವಷ್ಟರಲ್ಲಿ 4 ವಿಕೆಟ್ ಕಳೆದುಕೊಂಡಿತು. ಬಳಿಕ ನಾಯಕ ಅಕ್ಸರ್ ಪಟೇಲ್ ಹಾಗೂ ಶಾಯ್ ಹೋಪ್ ಚೇತರಿಕೆ ನೀಡಿದರು. ಆರ್ಸಿಬಿ ಬೌಲಿಂಗ್ ದಾಳಿ ಮುಂದೆ ಏಕಾಂಗಿಯಾಗಿ ಹೋರಾಟ ನಡೆಸಿದ ಅಕ್ಸರ್ ಪಟೇಲ್ 39 ಎಸೆತಗಳಲ್ಲಿ 5 ಬೌಂಡರಿ ಹಾಗೂ 3 ಸಿಕ್ಸರ್ ನೆರವಿನಿಂದ 57 ರನ್ ಬಾರಿಸಿದರು. ಶಾಯ್ ಹೋಪ್ 29 ರನ್ ಬಾರಿಸಿದರು.
ಆರ್ಸಿಬಿ ಪರ ಯಶ್ ದಯಾಳ್ 3, ಲಾಕಿ ಫರ್ಗ್ಯುಸನ್ ಎರಡು ವಿಕೆಟ್ ಪಡೆದರು. ಮಹಮ್ಮದ್ ಸಿರಾಜ್, ಕ್ಯಾಮರೂನ್ ಗ್ರೀನ್, ಸ್ವಪ್ನಲ್ ಸಿಂಗ್ ತಲಾ ಒಂದು ವಿಕೆಟ್ ಪಡೆದರು.
ಮೊದಲು ಬ್ಯಾಟಿಂಗ್ ಮಾಡಿದ ಆರ್ಸಿಬಿ ಆರಂಭ ಉತ್ತಮವಾಗಿರಲಿಲ್ಲ. ನಾಯಕ ಫಫ್ ಡು ಪ್ಲೆಸಿಸ್ 6 ರನ್ಗೆ ಔಟ್ ಆದರು. 13 ಎಸೆತಗಳಲ್ಲಿ 27 ರನ್ ಸಿಡಿಸಿದ್ದ ವಿರಾಟ್ ಕೊಹ್ಲಿ ಇಶಾಂತ್ಗೆ ವಿಕೆಟ್ ಒಪ್ಪಿಸಿದರು. ಈ ಸಂದರ್ಭ ಸೇರಿಕೊಂಡ ವಿಲ್ ಜ್ಯಾಕ್ಸ್ ಮತ್ತು ರಜತ್ ಪಾಟಿದಾರ್ ಅಕರ್ಷಕ ಬ್ಯಾಟಿಂಗ್ ನಡೆಸಿದರು. ಪಾಟಿದಾರ್ 52 ಮತ್ತು ವಿಲ್ ಜ್ಯಾಕ್ಸ್ 41 ರನ್ ಸಿಡಿಸಿದರು. ಈ ಜೋಡಿ ಕ್ರೀಸ್ನಲ್ಲಿದ್ದಾಗ 10 ಓವರ್ ಒಳಗೆ 100ರ ಗಡಿ ದಾಟಿದ್ದ ಆರ್ಸಿಬಿ ಒಂದು ಹಂತದಲ್ಲಿ 200ರ ಗಡಿ ದಾಟುವ ಸೂಚನೆ ಕೊಟ್ಟಿತ್ತು. ರಜತ್ ಪಾಟಿದಾರ್ 32 ಎಸೆತಗಳಲ್ಲಿ ತಲಾ 3 ಸಿಕ್ಸರ್ ಹಾಗೂ ಬೌಂಡರಿ ನೆರವಿನಿಂದ 52 ರನ್ ಬಾರಿಸಿದರೆ, ವಿಲ್ ಜಾಕ್ಸ್ 29 ಎಸೆತಗಳಲ್ಲಿ 3 ಬೌಂಡರಿ ಹಾಗೂ 2 ಸಿಕ್ಸರ್ ನೆರವಿನಿಂದ 41 ರನ್ ಬಾರಿಸಿದರು. ಇವರು ಔಟ್ ಆದ ಬಳಿಕ ಡೆಲ್ಲಿ ಬೌಲಿಂಗ್ ದಾಳಿಗೆ ಸಿಲುಕಿ ಪಟಪಟನೆ ವಿಕೆಟ್ ಉರುಳಿದವು. ಅಂತಿಮವಾಗಿ, 20 ಓವರ್ ಅಂತ್ಯಕ್ಕೆ 187 ರನ್ ಗಳಿಸಲಷ್ಟೇ ಶಕ್ತವಾಯಿತು.
ಕ್ಯಾಮರೂನ್ ಗ್ರೀನ್ 32, ಲೊಮ್ರೊರ್ 13 ರನ್ ಗಳಿಸಿದರು. ಡೆಲ್ಲಿ ಪರ ಖಲೀಲ್ ಅಹಮ್ಮದ್ ಮತ್ತು ರಸಿಖ್ ಸಲಾಮ್ ತಲಾ 2 ವಿಕೆಟ್ ಪಡೆದರು.