ಸುಳ್ಯ:ಸುಳ್ಯ ಶ್ರೀ ಗುರು ರಾಘವೇಂದ್ರ ಮಠದ
6ನೇ ವರ್ಷದ ಪ್ರತಿಷ್ಠಾ ವಾರ್ಷಿಕ ಮಹೋತ್ಸವ ಕಾರ್ಯಕ್ರಮಗಳು ಏ.21ರಂದು ಆರಂಭಗೊಂಡಿದೆ. ಶ್ರೀ ಗುರುರಾಯರ ಮಠದ
ಪ್ರಧಾನ ಆರ್ಚಕರಾದ ವೇದ ಮೂರ್ತಿ ಶ್ರೀಹರಿ ಎಳಚಿತ್ತಾಯರ ಮಾರ್ಗದರ್ಶನದಲ್ಲಿ ಪ್ರತಿಷ್ಠಾ ವಾರ್ಷಿಕ ಮಹೋತ್ಸವ ನಡೆಯುತಿದೆ. ಇದರ ಅಂಗವಾಗಿ
ಏ.21 ರಂದು ಸಂಜೆ ಭಕ್ತಿ ಸಂಭ್ರಮದಲ್ಲಿ ಪಲ್ಲಕ್ಕಿಯಲ್ಲಿ ರಾಯರ ವೈಭವದ ಪಟ್ಟಣ ಸವಾರಿ ನಡೆಯಿತು.ಚೆಂಡೆ, ಡೋಲು, ವಾದ್ಯ, ಮೇಳ, ಆಕರ್ಷಕ ಭಜನೆ, ದೀಪಗಳ ಸಾಲು, ಕುಣಿತ ಭಜನೆಯೊಂದಿಗೆ ಭಕ್ತ ಸಮೂಹದೊಂದಿಗೆ ರಾಯರು ಪಲ್ಲಕಿಯಲ್ಲಿ ಸುಳ್ಯ ನಗರದಲ್ಲಿ ಸಾಗಿ ಬಂದರು. ಭಜನೆ, ಜಯ ಘೋಷದೊಂದಿಗೆ, ಚೆಂಡೆ ವಾದ್ಯ ಮೇಳದೊಂದಿಗೆ ಪಲ್ಲಕ್ಕಿಯಲ್ಲಿ ರಾಯರ ಪಟ್ಟಣ ಸವಾರಿ ಸಾಗಿ ಬಂತು.
ಯುವಜನ ಸಂಯುಕ್ತ ಮಂಡಳಿ, ಶ್ರೀಹರಿ ಕಾಂಪ್ಲೆಕ್ಸ್, ಬಸ್ ನಿಲ್ದಾಣದ ಬಳಿಯಲ್ಲಿ ಹಾಗು ಚೆನ್ನಕೇಶವ ದೇವಸ್ಥಾನದ ಬಳಿಯಲ್ಲಿ ನೃತ್ಯ ಭಜನೆ ನಡೆಯಿತು. ಕಾಂತಮಂಗಲದಿಂದ ಆರಂಭಗೊಂಡ ಪಟ್ಟಣ ಸವಾರಿ ನಗರದಲ್ಲಿ ಸಂಚರಿಸಿ ರಥಬೀದಿಯಾಗಿ ಸಾಗಿ ಬಂದು ರಾಘವೇಂದ್ರ ಮಠಕ್ಕೆ ಹಿಂತಿರುಗಿತು. ಬೃಂದಾವನ ಸೇವಾ ಚಾರಿಟೇಬಲ್ ಟ್ರಸ್ಟ್ನ ಅಧ್ಯಕ್ಷರಾದ ಎಂ.ಎನ್.ಶ್ರೀಕೃಷ್ಣ ಸೋಮಯಾಗಿ, ಪ್ರಕಾಶ್ ಮೂಡಿತ್ತಾಯ, ಗಿರೀಶ್ ಕೆರೆಮೂಲೆ, ಮುರಳೀಕೃಷ್ಣ, ನವೀನ ಸೋಮಯಾಗಿ, ರಾಮ್ ಕುಮಾರ್ ಹೆಬ್ಬಾರ್ ಮತ್ತಿತರರು ನೇತೃತ್ವ ವಹಿಸಿದ್ದರು.ಪ್ರತಿಷ್ಠಾ ವಾರ್ಷಿಕೋತ್ಸವದ ಅಂಗವಾಗಿ ಏ.21 ರಂದು
ಬೆಳಿಗ್ಗೆ 7 ರಿಂದ ಮಹಾಗಣಪತಿ ಹೋಮ ಸಂಜೆ 4ರಿಂದ ಭಜನೆ ನಡೆಯಿತು.