ಸುಳ್ಯ:ಮುಂದಿನ ಫೆಬ್ರವರಿ ತಿಂಗಳಲ್ಲಿ ಸುಳ್ಯದಲ್ಲಿ ರಾಷ್ಟ್ರೀಯ ಮಟ್ಟದ ಲಗೋರಿ ಪಂದ್ಯಾಟ ನಡೆಯಲಿದೆ. ವಿವಿಧ ರಾಜ್ಯಗಳ 10 ತಂಡಗಳು ಭಾಗವಹಿಸುವ ನಿರೀಕ್ಷೆ ಇದೆ.ಈ ಬಗ್ಗೆ ಪೂರ್ವಬಾವಿ ಸಭೆ ನ.30 ರಂದು ಪೂ.2 ಗಂಟೆಗೆ ಸುಳ್ಯ ತಾಲೂಕು ಪಂಚಾಯತ್ ಸಭಾಂಗಣದಲ್ಲಿ ಶಾಸಕಿ ಭಾಗೀರಥಿ ಮುರುಳ್ಯ ಅವರ ಅಧ್ಯಕ್ಷತೆಯಲ್ಲಿ ಸಭೆ ಕರೆಯಲಾಗಿದೆ ಎಂದು ಕರ್ನಾಟಕ ರಾಜ್ಯ ಲಗೋರಿ ಅಸೋಸಿಯೇಶನ್ನ ಅಧ್ಯಕ್ಷ
ದೊಡ್ಡಣ್ಣ ಬರೆಮೇಲು ತಿಳಿಸಿದ್ದಾರೆ. ರಾಷ್ಟ್ರ ಮಟ್ಟದ ಪಂದ್ಯಾಟಕ್ಕೆ ಪೂರ್ವಭಾವಿಯಾಗಿ ಡಿಸೆಂಬರ್ ತಿಂಗಳಿನಲ್ಲಿ ಕರ್ನಾಟಕ ರಾಜ್ಯ ಮಟ್ಟದ

ಪಂದ್ಯಾವಳಿ ಮಂಡ್ಯ ಜಿಲ್ಲೆಯಲ್ಲಿ ನಡೆಯಲಿದೆ.
ಲಗೋರಿಯನ್ನು ಸ್ಕೂಲ್ ಗೇಮ್ಗೆ ಸೇರ್ಪಡೆಗೆ ಪ್ರಯತ್ನ:
ಕಳೆದ 23 ವರ್ಷಗಳಿಂದ ಜಾನಪದ ಕ್ರೀಡೆಯಾದ ಲಗೋರಿ ಆಟದ ಬೆಳವಣಿಗೆ ಕಂಡಿದೆ. 2001ರಲ್ಲಿ ಲಗೊರಿ ಆಟದ ನಿಯಮಗಳನ್ನು ಪುಸ್ತಕ ರೂಪದಲ್ಲಿ ರಚಿಸಿ ರಾಜ್ಯಾಧ್ಯಂತ ಪ್ರಚಾರ ಪಡಿಸಿ, ಹಲವು ಜಿಲ್ಲೆಗಳಲ್ಲೂ ಜಿಲ್ಲಾ ಅಸೋಸಿಯೇಶನ್ ಅಸ್ತಿತ್ವಕ್ಕೆ ಬಂದಿರುತ್ತದೆ. ಕಳೆದ ವರ್ಷ ಕರ್ನಾಟಕ ರಾಜ್ಯ ಲಗೋರಿ ಅಸೋಸಿಯೇಶನ್ನ್ನು ಸ್ಥಾಪಿಸಿ ಲಗೋರಿ ಆಟವನ್ನು ಮತ್ತಷ್ಟು ವಿಸ್ತಾರಗೊಳಿಸಲಾಗಿದೆ. ಈಗ ಸ್ಕೂಲ್ ಗೇಮ್ ಫೆಡೆರೇಶನ್ಗೆ ಸೇರ್ಪಡೆಗೊಳಿಸಿದರೆ ಮಾತ್ರ ಅದನ್ನು ಶಾಲಾ ಕಾಲೇಜುಗಳ ಪಂದ್ಯಾಟದಲ್ಲಿ ನಡೆಸಲು ಸಾಧ್ಯ. ಈಗಾಗಲೇ ನಾನ್ ಒಲಂಪಿಕ್ ಅಸೋಸಿಯೇಶನ್ನವರು ಬೇರೆ ರಾಜ್ಯದಿಂದ ಬಂದು ಆಟದ ವೀಕ್ಷಣೆ ಮಾಡಿ ಆಟದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿರುತ್ತಾರೆ. ಮೈಸೂರಿನಲ್ಲಿ ಆಲ್ ಇಂಡಿಯಾ ಲಗೋರಿ ಅಡಾಕ್ ಕಮಿಟಿ ರಚನೆ ಮಾಡಿ ಆಟವನ್ನು ಸ್ಕೂಲ್ ಗೇಮ್ ಗೆ ಸೇರ್ಪಡೆಗೊಳಿಸುವ ಪ್ರಯತ್ನ. ನಡೆಸಲಾಗುತಿದೆ. ಅದಕ್ಕೆ ಈಗಾಗಲೇ ನಡೆದ ಪಂದ್ಯಾಟ ಹಾಗೂ ಕಾರ್ಯಾಗಾರದ ದಾಖಲೆಗಳನ್ನು ನೀಡಲಾಗಿದೆ. ಆದರೆ ಅಂತಾರಾಜ್ಯ ಪಂದ್ಯಾಟದ
ದಾಖಲೆಗಳು ಇಲ್ಲದೆ ಇರುವ ಕಾರಣ ರಾಷ್ಟ್ರೀಯ ಪಂದ್ಯಾವಳಿ ನಡೆಸಬೇಕಾಗಿದೆ. ಆಂದ್ರಪ್ರದೇಶ, ತಮಿಳುನಾಡು, ಕೇರಳ, ತೆಲಂಗಾಣ, ಹರಿಯಾಣ, ಮದ್ಯಪ್ರದೇಶ ಮತ್ತು ಉತ್ತರದ ರಾಜ್ಯಗಳಲ್ಲಿ ಈ ಬಗ್ಗೆ ಪಂದ್ಯಾಟ ನಡೆಸಲು ಆಡಾಕ್ ಕಮಿಟಿಯ ಸದಸ್ಯರಿಗೆ ಜವಾಬ್ದಾರಿ ನೀಡಲಾಗಿದೆ.ಈ ಎಲ್ಲಾ ಉದ್ದೇಶದಿಂದ ರಾಷ್ಟ್ರೀಯ ಪಂದ್ಯಾವಳಿ ಸುಳ್ಯದಲ್ಲಿ ನಡೆಸಲು ಉದ್ದೇಶಿಸಲಾಗಿದೆ ಎಂದು ದೊಡ್ಡಣ್ಣ ಬರೆಮೇಲು ತಿಳಿಸಿದ್ದಾರೆ.







