ಸುಳ್ಯ:ಪ್ರಜಾಧ್ವನಿ ಕರ್ನಾಟಕ ವತಿಯಿಂದ 1949 ನವೆಂಬರ್ 26 ಡಾ.ಬಿ.ಆರ್. ಅಂಬೇಡ್ಕರ್ ರಚಿತ ಸಂವಿಧಾನದ ಸಮರ್ಪಣಾ ದಿನದ ಸ್ಮರಣೆಗಾಗಿ ನ.27 ಬುಧವಾರ ರಾಷ್ಟ್ರಧ್ವಜ ಗೌರವ ಯಾತ್ರೆ ಸುಳ್ಯ ತಾಲೂಕಿನಾದ್ಯಂತ ನಡೆಯಲಿದೆ ಎಂದು ಪ್ರಜಾಧ್ವನಿ ಕರ್ನಾಟಕದ ಸಂಚಾಲಕರಾದ ಗೋಪಾಲ್ ಪೆರಾಜೆ ಹಾಗೂ ಸಂಘಟಕ ಸದಸ್ಯರಾದ ಅಶೋಕ್ ಎಡಮಲೆ ತಿಳಿಸಿದ್ದಾರೆ. ಸುಳ್ಯ ಪ್ರೆಸ್ ಕ್ಲಬ್ನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು 27ರಂದು ಬೆಳಿಗ್ಗೆ 8.30ಕ್ಕೆ ಯಾತ್ರೆಯ
ಉದ್ಘಾಟನಾ ಕಾರ್ಯಕ್ರಮ ಸಂಪಾಜೆ ಗೇಟಿನ ಬಳಿ ನಡೆಯಲಿದೆ. ಸುಳ್ಯ ತಹಶೀಲ್ದಾರ್ ಮಂಜುಳಾ ಎಂ ಯಾತ್ರೆಗೆ ಚಾಲನೆ ನೀಡುವರು.
ಜನರು ರಾಷ್ಟ್ರಧ್ವಜಕ್ಕೆ ಪುಷ್ಪಾರ್ಚನೆ ಮಾಡಲಿದ್ದಾರೆ. ಬಳಿಕ ರಾಷ್ಟ್ರಧ್ವಜ ಯಾತ್ರೆಯು ಕಲ್ಲುಗುಂಡಿ, ಅರಂತೋಡು, ಮರ್ಕಂಜ, ಎಲಿಮಲೆ, ಗುತ್ತಿಗಾರು, ಸುಬ್ರಹ್ಮಣ್ಯ, ಪಂಜ, ನಿಂತಿಕಲ್ಲು, ಬೆಳ್ಳಾರೆ, ಐವರ್ನಾಡು, ಸೋಣಂಗೇರಿ, ಪೈಚಾರು ಮಾರ್ಗವಾಗಿ ಸಂಜೆ 5ಗಂಟೆಗೆ ಸುಳ್ಯದಲ್ಲಿ ಸಮಾವೇಶಗೊಳ್ಳಲಿದೆ. ಸಭಾ ಕಾರ್ಯಕ್ರಮಕ್ಕೆ ಮೊದಲು ಸುಳ್ಯ ಗಾಂಧಿನಗರದಲ್ಲಿರುವ ಮಹಾತ್ಮಗಾಂಧಿ ಪ್ರತಿಮೆಗೆ ಹಾರಾರ್ಪಣೆ ನಡೆಯಲಿದೆ. ಯಾತ್ರೆಯುದ್ದಕ್ಕೂ ಸ್ಥಳಗಳಲ್ಲಿ ಸಾರ್ವಜನಿಕರಿಂದ,
ಸಾಮಾಜಿಕ ಧುರೀಣರಿಂದ, ರಾಜಕೀಯ ಪಕ್ಷಗಳ ಮುಖಂಡರಿಂದ ರಾಷ್ಟ್ರಧ್ವಜಕ್ಕೆ ಪುಷ್ಪಾರ್ಚನೆ ನಡೆಯಲಿದೆ. ಮಾತ್ರವಲ್ಲದೆ ಸಂವಿಧಾನದ ಕುರಿತಾದ ಮಾಹಿತಿಯನ್ನು ಸಂಘಟನೆಯ ನೆಲೆಯಿಂದ ಸದಸ್ಯರ ಭಾಷಣಗಳು ಇರುತ್ತವೆ. ಜಾಥಾ ಕಾರ್ಯಕ್ರಮದಲ್ಲಿ ಬಾಯಾರಿಕೆ, ಊಟ ಉಪಹಾರಗಳ ವ್ಯವಸ್ಥೆಯನ್ನು ಒದಗಿಸಲು ಈಗಾಗಲೇ ಸಾರ್ವಜನಿಕರು ಮುಂದೆ ಬಂದಿದ್ದಾರೆ. ಯಾತ್ರೆ ಸಾಗಿ ಬರುವ ಸ್ಥಳಗಳಲ್ಲಿ ಅತೀ ಹೆಚ್ಚಿನ ಸಂಖ್ಯೆ ಸಾರ್ವಜನಿಕರು ಭಾಗವಹಿಸಿ ರಾಷ್ಟ್ರಧ್ವಜ ಗೌರವದ ಮಹಾಯಜ್ಞದಲ್ಲಿ ಪಾಲ್ಗೊಳ್ಳಬೇಕಾಗಿ ಅವರು ವಿನಂತಿಸಿದರು. ಸಂಘಟನೆಯು ಯಾವುದೇ ರಾಜಕೀಯ ಪಕ್ಷಗಳ, ಧಾರ್ಮಿಕ ಸಂಘಟನೆಗಳಿಂದ ಹೊರತಾಗಿದ್ದು, ಜನರ ಮಧ್ಯೆ ರಾಷ್ಟ್ರೀಯತೆ ಮತ್ತು ಭಾವೈಕ್ಯತೆಯ ಕೊಂಡಿಯಾಗಲು ಬಯಸುತ್ತೇವೆ. ಈ ನೆಲೆಯಲ್ಲಿ 27ರಂದು ನಡೆಯುವ ಯಾತ್ರೆಗೆ ಪೂರ್ಣ ಪ್ರಮಾಣದ ಬೆಂಬಲವನ್ನು ನೀಡಿ ಕೈಜೋಡಿಸಬೇಕೆಂದು ವಿನಂತಿಸಿದ್ದಾರೆ.
ಸಂಜೆ ಸುಳ್ಯದಲ್ಲಿ ನಡೆಯುವ ಸಮಾವೇಶದ ಕೊನೆಯ ಸಭಾ ಕಾರ್ಯಕ್ರಮದಲ್ಲಿ ಪುತ್ತೂರು ಸಹಾಯಕ ಕಮೀಷನರ್ ಜುಬಿನ್ ಮಹಾಪಾತ್ರ ಅಧ್ಯಕ್ಷತೆ ವಹಿಸಲಿದ್ದಾರೆ. ಖ್ಯಾತ ವಾಗ್ಮಿ ನಿಕೇತ್ ರಾಜ್ ಮೌರ್ಯ ಮುಖ್ಯ ಭಾಷಣ ಮಾಡಲಿದ್ದಾರೆ. ಸಾಮಾಜಿಕ ಮುಖಂಡರಾದ ಇನಾಯತ್ ಅಲಿ, ಚೆನ್ನಕೇಶವ ದೇವಸ್ಥಾನದ ಅನುವಂಶಿಕ ಆಡಳಿತ ಮೊಕ್ತೇಸರ ಡಾ.ಹರಪ್ರಸಾದ್ ತುದಿಯಡ್ಕ,ಸಯ್ಯಿದ್ ತಾಹ್ವಿರ್ ಸಅದಿ ಖಾ ಅಲವಿ ತಂಙಳ್, ಸೈಂಟ್ ಬ್ರಿಜಿಡ್ಸ್ ಚರ್ಚ್ನ ಧರ್ಮ ಗುರುಗಳಾದ ಫಾ.ವಿಕ್ಟರ್ ಡಿಸೋಜಾ, ಪ್ರಜಾಧ್ವನಿ ಸಂಚಾಲಕರಾದ ಗೋಪಾಲ್ ಪೆರಾಜೆ ಭಾಗವಹಿಸಲಿದ್ದಾರೆ ಎಂದು ಗೋಪಾಲ್ ಪೆರಾಜೆ ಹಾಗೂ ಅಶೋಕ್ಎಡಮಲೆ ತಿಳಿಸಿದ್ದಾರೆ.
ಸುದ್ದಿ ಗೋಷ್ಠಿಯಲ್ಲಿ ಪ್ರಜಾಧ್ವನಿ ಕರ್ನಾಟಕ ಇದರ ಸದಸ್ಯರಾದ ಆಶ್ರಫ್ ಎಲಿಮಲೆ, ಭವಾನಿಶಂಕರ ಕಲ್ಮಡ್ಕ, ಭರತ್ ಕುಕ್ಕುಜಡ್ಕ, ದಿವಾಕರ ಪೈ ಉಪಸ್ಥಿತರಿದ್ದರು.