ಸುಳ್ಯ:ಮನುಷ್ಯನ ಬದುಕಿಗೆ ಗಾಳಿ, ನೀರು, ಆಹಾರ ಅತೀ ಅಗತ್ಯ.ಆಧುನಿಕ ಬದುಕಿನಲ್ಲಿ ಆಹಾರ ಸೇವೆನೆಗೆ ಉಪಹಾರ ಗೃಹ, ಹೋಟೆಲ್ಗಳನ್ನು ಅವಲಂಬಿಸಬೇಕಾಗಿ ಬರುವುದು ಸಹಜ. ಆದುದರಿಂದ ಮನುಷ್ಯನ ಆರೋಗ್ಯ ಕಾಪಾಡುವ ರುಚಿ, ಶುಚಿಯಾದ ಗುಣಮಟ್ಟದ ಆಹಾರವನ್ನು ನೀಡುವ ಉಪಾಹಾರ ಗೃಹಗಳು ಅನಿವಾರ್ಯ ಎಂದು ಕಾಸರಗೋಡು ಎಡನೀರು ಮಠಾಧೀಶರಾದ ಶ್ರೀ ಸಚ್ಚಿದಾನಂದ ಭಾರತಿ ಸ್ವಾಮೀಜಿ ಹೇಳಿದ್ದಾರೆ.ಮಾಣಿ-ಮೈಸೂರು ರಾಷ್ಟ್ರೀಯ ಹೆದ್ದಾರಿ ಬದಿಯಲ್ಲಿ ಸುಳ್ಯ ಸಮೀಪ ಅರಂಬೂರಿನಲ್ಲಿ
ಉದ್ಯಮಿಗಳಾದ ನಾರಾಯಣ ಕೇಕಡ್ಕ ಹಾಗೂ ಕೃಷ್ಣ ಕಾಮತ್ ಅವರ ಪಾಲುದಾರಿಕೆ ರಸಪಾಕ ಗ್ರೂಪ್ಸ್ನ ವತಿಯಿಂದ ಆರಂಭಗೊಂಡ ನೂತನ ಹೋಟೆಲ್ ‘ಶ್ರೀಕೃಷ್ಣ ರಸಪಾಕ ಗ್ರ್ಯಾಂಡ್’ ದೀಪ ಬೆಳಗಿಸಿ ಉದ್ಘಾಟಿಸಿ ಅವರು ಆಶೀರ್ವಚನ ನೀಡಿದರು.ಶುಚಿ,ರುಚಿಯಾದ ಆಹಾರವನ್ನು ನೀಡುವ ಮೂಲಕ ಗ್ರಾಹಕರ ಆರೋಗ್ಯವನ್ನು ಕಾಪಾಡಿಕೊಂಡು ಜನರ ಪ್ರೀತಿ ವಿಶ್ವಾಸವನ್ನು ಗಳಿಸಬೇಕು ಆ ಮೂಲಕ ಯಶಸ್ಸಿನ ಮೆಟ್ಟಿಲೇರಬೇಕು ಎಂದ ಅವರು

ಮುಂಬೈ ಸೇರಿದಂತೆ ದೇಶದ ವಿವಿಧ ನಗರಗಳಲ್ಲಿ ಹೋಟೆಲ್ ಉದ್ಯಮವನ್ನು ಬೆಳೆಸಿದ ಕೀರ್ತಿ ದಕ್ಷಿಣ ಕನ್ನಡ ಜಿಲ್ಲೆಯವರಿಗೆ ಇದೆ. ಅದೇ ರೀತಿ ಬೆಳೆಯುತ್ತಿರುವ ಸುಳ್ಯಕ್ಕೆ ಈ ರೀತಿಯ ಅತ್ಯುತ್ತಮ ಉಪಾಹಾರ ಗೃಹ ಅತೀ ಅಗತ್ಯವಿತ್ತು ಎಂದು ಅವರು ಹೇಳಿದರು.
ಮಾಜಿ ಸಂಸದ ನಳಿನ್ ಕುಮಾರ್ ಕಟೀಲ್ ರಿಬ್ಬನ್ ಕತ್ತರಿಸಿ ಹೋಟೆಲ್ ಲೋಕಾರ್ಪಣೆ ಮಾಡಿದರು.ಹವಾನಿಯಂತ್ರಿತ ಕೊಠಡಿಯನ್ನು ಶಾಸಕಿ ಭಾಗೀರಥಿ ಮುರುಳ್ಯ ಉದ್ಘಾಟಿಸಿದರು.ಕುಂಟಾರು ರವೀಶ ತಂತ್ರಿ ಹಾಗೂ ದೇಲಂಪಾಡಿ ಗಣೇಶ್ ತಂತ್ರಿಯವರು ಆಶೀರ್ವಚನ ನೀಡಿದರು. ಹೋಟೆಲ್ನ ಪಾಲುದಾರರಾದ ಉದ್ಯಮಿ ಕೃಷ್ಣ ಕಾಮತ್ ಅಧ್ಯಕ್ಷತೆ ವಹಿಸಿದ್ದರು.

ಮುಖ್ಯ ಅತಿಥಿಗಳಾಗಿ ಮಾಜಿ ಸಚಿವ ಎಸ್.ಅಂಗಾರ, ಕಾಸರಗೋಡು ಕಾಮತ್ ಮೆಡಿಕಲ್ ಸೆಂಟರ್ನ ಡಾ. ಅನಂತ್ ಕಾಮತ್, ಪದ್ಮಶ್ರೀ ಪುರಸ್ಕೃತ ರಾದ ಡಾ.ಗಿರೀಶ್ ಭಾರದ್ವಾಜ್, ಆರ್.ಎಸ್.ಎಸ್. ಕರ್ನಾಟಕ ದಕ್ಷಿಣ ಪ್ರಾಂತ ಸಹ ಸೇವಾ ಪ್ರಮುಖ್ ನ.ಸೀತಾರಾಮ, ಸುಳ್ಯ ಶ್ರೀ ಚೆನ್ನಕೇಶವ ದೇವಸ್ಥಾನದ ಅನುವಂಶಿಕ ಆಡಳಿತ ಮೊಕ್ತೇಸರ ಡಾ. ಹರಪ್ರಸಾದ್ ತುದಿಯಡ್ಕ, ಜಿ.ಪಂ. ಮಾಜಿ ಸದಸ್ಯ ಹರೀಶ್ ಕಂಜಿಪಿಲಿ, ಸುಳ್ಯ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಪಿ.ಸಿ.ಜಯರಾಮ, ಬಿಜೆಪಿ ಮಂಡಲ ಸಮಿತಿ ಅಧ್ಯಕ್ಷ ವೆಂಕಟ್ ವಳಲಂಬೆ, ಆಲೆಟ್ಟಿ ಗ್ರಾ.ಪಂ. ಅಧ್ಯಕ್ಷೆ ವೀಣಾ ವಸಂತ್, ಸುಳ್ಯ ನಗರ ಯೋಜನಾ ಪ್ರಾಧಿಕಾರ ಅಧ್ಯಕ್ಷ ಕೆ.ಎಂ. ಮುಸ್ತಫ, ವರ್ತಕರ ಸಂಘದ ಅಧ್ಯಕ್ಷ ಪಿ.ಬಿ.ಸುಧಾಕರ ರೈ, ಕಾಯರ್ತೋಡಿ ಶ್ರೀ ಮಹಾವಿಷ್ಣು ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಎಂ.ವೆಂಕಪ್ಪ ಗೌಡ, ನಗರ ಪಂಚಾಯತ್ ಮಾಜಿ ಅಧ್ಯಕ್ಷರಾದ ಎನ್.ಎ.ರಾಮಚಂದ್ರ,ಎಸ್.ಸಂಶುದ್ದೀನ್, ಲಯನ್ಸ್ ಮಾಜಿ ಗವರ್ನರ್ ಎಂ.ಬಿ.ಸದಾಶಿವ, ಸುಳ್ಯ ರೋಟರಿ ಕ್ಲಬ್ ಅಧ್ಯಕ್ಷ ಡಾ.ರಾಮ್ ಮೋಹನ್, ಆಲೆಟ್ಟಿ ಗ್ರಾ.ಪಂ. ಸದಸ್ಯರಾದ ಸುದೇಶ್ ಅರಂಬೂರು, ಪುಷ್ಪಾವತಿ ಕುಡೆಕಲ್ಲು, ಅನಿತಾ ಇಡ್ಯಡ್ಕ ಭಾಗವಹಿಸಿದ್ದರು.
ಸಂಸ್ಥೆಯ ಪಾಲುದಾರರಾದ ನಾರಾಯಣ ಕೇಕಡ್ಕ,ಸುಪ್ರೀತ ಕೇಕಡ್ಕ,ಕೃಷ್ಣ ಕಾಮತ್, ನಳಿನಿ ಕಾಮತ್ ಮತ್ತು ಮತ್ತು ಮನೆಯವರು ಎಲ್ಲರನ್ನು ಸ್ವಾಗತಿಸಿ ಬರಮಾಡಿಕೊಂಡರು.
ಬೂಡು ರಾಧಾಕೃಷ್ಣ ರೈ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು. ಹೋಟೆಲ್ ಪಾಲುದಾರರಾದ ನಾರಾಯಣ ಕೇಕಡ್ಕ ವಂದಿಸಿದರು.

ನವರಸಗಳ ರಸಪಾಕದ ವೈವಿಧ್ಯ ಖಾದ್ಯಗಳು..!
ನವರಸಗಳ ರಸಪಾಕದ ಖಾದ್ಯಗಳನ್ನು ಉಣಬಡಿಸುವ ನೂತನ ಹೋಟೆಲ್ ‘ಶ್ರೀಕೃಷ್ಣ ರಸಪಾಕ ಗ್ರ್ಯಾಂಡ್’. ರಸಪಾಕ ಗ್ರೂಪ್ಸ್ನ ಈ ನೂತನ ಹೋಟೆಲ್ನಲ್ಲಿ ದೇಶದ ಎಲ್ಲಾ ವಿಧದ ಸಸ್ಯಾಹಾರಿ ಖಾದ್ಯಗಳು ದೊರೆಯುವ ರುಚಿ ವೈವಿಧ್ಯತೆಯ ತಾಣವಾಗಲಿದೆ.
ದಕ್ಷಿಣ ಭಾರತದ ಮತ್ತು ಉತ್ತರ ಭಾರತದ ಎಲ್ಲಾ ಸಸ್ಯಾಹಾರಿ ಊಟ ಉಪಹಾರಗಳು, ಜೈನ್ಸ್ ಫುಡ್ಗಳು, ಚೈನೀಸ್ ಖಾದ್ಯಗಳು, ರುಚಿ ವೈವಿಧ್ಯತೆಯ ಚಾರ್ಟ್ಸ್ಗಳು, ಫ್ರೆಶ್ ಜ್ಯೂಸ್, ಐಸ್ಕ್ರೀಂ ಸೇರಿದಂತೆ ಎಲ್ಲಾ ವರ್ಗದವರಿಗೂ ಇಷ್ಟವಾಗುವ ಎಲ್ಲಾ ಊಟ, ಉಪಾಹಾರಗಳು ಅತ್ಯಂತ ಉತ್ಕೃಷ್ಟ ಗುಣಮಟ್ಟದ ಮತ್ತು ರುಚಿಭರಿತವಾಗಿ ಲಭ್ಯವಿರಲಿದೆ.
ಎಸಿ ಹಾಗೂ ನಾನ್ಎಸಿ, ಮಿನಿ ಸಭಾಂಗಣ, ವಿಶಾಲವಾದ ಪಾರ್ಕಿಂಗ್ ವ್ಯವಸ್ಥೆಯ ಜೊತೆಗೆ ಹಚ್ಚ ಹಸಿರು ಪರಿಸರದ ಸುಂದರ ವಾತಾವರಣ, ಸುತ್ತಲೂ ಹಸಿರು ಹೊದ್ದ ಪರಿಸರ ಗ್ರಾಹಕರಿಗೆ ಮುದ ನೀಡಲಿದೆ.





