*ವಿದ್ವಾನ್ ಹರಿಹರ ಬಾಯಾಡಿ.
ಸುಳ್ಯ: ಎಲಿಮಲೆಯ ರಂಜನಿ ಸಂಗೀತ ಸಭಾದ 14ನೇ ವರ್ಷದ ಸಂಗೀತ ಸಂಭ್ರಮದ ಅಂಗವಾಗಿ ವಳಲಂಬೆಯ ಶ್ರೀ ಶಂಖಪಾಲ ಸುಬ್ರಹ್ಮಣ್ಯ ಸ್ವಾಮಿ ಸಭಾಭವನದಲ್ಲಿ ನಡೆದ ವಿದ್ವಾನ್ ಅನೀಶ್ ವಿ ಭಟ್ ಅವರ ಸಂಗೀತ ಕಛೀರಿಯು ಸಂಗೀತಾಸಕ್ತರ ಮನಗೆದ್ದಿತು. ತುಂಬಿದ ಸಭಾಂಗಣದಲ್ಲಿ ಕಲಾರಸಿಕರೂ.ಪುಟಾಣಿಗಳೂ ಸಾವದಾನದಿಂದ, ಉತ್ಸಾಹದಿಂದ ಕೊನೆ ತನಕ ಆಲಿಸಿ ತಲೆದೂಗಿದರು. ತುಂಬಿದ ಸಭಾಂಗಣದಲ್ಲಿ ಮೂರು ಗಂಟೆಗೂ ಹೆಚ್ಚು ಕಾಲ ಸಂಗೀತ ಸುಧೆ ಹರಿಸಿದ ಅನೀಶ್ ಭಟ್ ಅವರ ಶಾಸ್ತ್ರೀಯ ಸಂಗೀತ ಕಛೇರಿ ಕಲಾರಸಿಕರ
ಮನದಾಳದಲ್ಲಿ ಬಹುಕಾಲ ಉಳಿಯುವಂತೆ ಮೂಡಿ ಬಂದಿತು.
ಆರಂಭದಲ್ಲಿ ಮಂಟಪಾಲಂಕಾರ (ಬೇಗಡೆ) ರಾಗದ ದೀಕ್ಷಿತರ ‘ವಲ್ಲಭ ನಾಯಕಸ್ಯ’ ಸೊಗಸಾದ ಪ್ರಸ್ತುತಿ ಸಂಗೀತ ಪ್ರಿಯರ ಮನ ತಣಿಸಿತು. ಕ್ಷೇತ್ರದ ಸನ್ನಿಧಾನದಲ್ಲಿ ಷಣ್ಮುಖನಿಗೆ ಪ್ರಿಯವಾದ ರಾಗದಲ್ಲಿ ‘ಮರಿವೇರೆ ದಿಕ್ಕೆವರಯ್ಯ ರಾಮ’ – ಸಂಗತಿಗಳು ಮಧುರೈ ಮಣಿ ಐಯ್ಯರ್ರನ್ನು ನೆನಪಿಸಿತು. ಮುಂದೆ ಶುದ್ಧ ಧನ್ಯಾಸಿ ರಾಗದ ಪ್ರೌಢ ಆಲಾಪನೆ, ದೀಕ್ಷಿತರ ಕೀರ್ತನೆ ‘ಸುಬ್ರಹ್ಮಣ್ಯೇನ ರಕ್ಷಿತೋಹಂ’ – ‘ವೆಂಕಟೇಶ್ವರ ನಾಮ ರೂಪೇಣ’ ಎಂಬಲ್ಲಿ ಸ್ವರಾರ್ಚನೆ ಪ್ರಸ್ತುತಪಡಿಸಿದರು. ಮುಂದಿನ ವಿಸ್ತಾರ ಪ್ರಸ್ತುತಿಗೆ
ಮೊದಲು ಒಂದು ಲಾಲಿತ್ಯಭರಿತ ಜಾವಳಿ ‘ಸ್ಮರಜನಕ ಶುಭಚರಿತ’; ತದನಂತರ ‘ಧರ್ಮವತಿ’ ರಾಗದ ವಿಸ್ತಾರ ಆಲಾಪನೆ, ಮೈಸೂರು ವಾಸುದೇವಾಚಾರ್ಯರ ‘ಭಜನಸೇಯರಾದ’ ಕೀರ್ತನೆ, ಮನೋಧರ್ಮದಲ್ಲಿ ಸ್ವರಗಳಲ್ಲಿ ಪ್ರತಿ ಆವರ್ತಕ್ಕೂ ‘ಸರಿಗಮಪದನಿ’ ಎಂಬ ಮಿಶ್ರ ನುಡಿ ಗುಚ್ಛದ ಮಕುಟವನ್ನು ತೊಡಿಸಿ ಸಂಗೀತ ರಸಿಕರನ್ನು ರಂಜಿಸಿತು. ನಂತರ ರಕ್ತಿರಾಗ ‘ಹಿಂದೋಳ’ ಮಿಶ್ರಛಾಪು ಲಯದೊಂದಿಗೆ ‘ಅಭಯ ವರದೇ ಶಾರದೆ’ ಎಂಬ ಕೀರ್ತನೆಯ ಸೊಗಸಾಗಿ ಮೂಡಿ ಬಂದಿತು.
ಮುಂದೆ ಕಚೇರಿಯ ಮುಖ್ಯರಾಗ ‘ಮೋಹನ’ದ ವಿವಿಧ ಮಜಲುಗಳ ಆಲಾಪನೆ, ಚೌಕಕಾಲ ಆದಿತಾಳದಲ್ಲಿ ಪ್ರಸಿದ್ಧ ಕೃತಿ ‘ಕಾಪಾಲಿ’ಯಲ್ಲಿ ಶಿವನ ಆರಾಧನೆ – ವಿಳಂಬ, ಮಧ್ಯಮ, ಧ್ರುತ ಕಾಲಗಳಲ್ಲಿ ಬಹುವಿಧ ಸ್ವರಪ್ರಸ್ತಾರ; ದೀರ್ಘವಾದ ‘ತನಿ ಆವರ್ತನ’ ನಡೆದಾಗ ಪ್ರತೀ ಆವರ್ತಕ್ಕೂ ‘ಅರಿತ’ ಪ್ರೇಕ್ಷಕರ ಕರತಾಡನ ಸ್ವಯಂ ಸ್ಪೂರ್ತಿಯಾಗಿ ಬಂದುವು – ನಿರೂಪಕರ ಒತ್ತಾಯದ ಮೇರೆಗಲ್ಲ!!!
ಕಾರ್ಯಕ್ರಮದ ಒಂದು ವಿಶೇಷ – ‘ರಾಗಂಗಳೇ ಪಾಡಲ್ಗಳೇ’ ಎಂಬ 30 ರಾಗಗಳ ರಾಗ ಮಾಲಿಕೆ – ಇದು ಕಲಾವಿದರು ತಮ್ಮ ಗುರುಗಳಾದ ಪ್ರಸಿದ್ಧ ಸಂಗೀತಗಾರ ಮತ್ತು ವಾಗ್ಗೇಯಕಾರ ಶ್ರೀ ಸೂರ್ಯಪ್ರಕಾಶ್ರವರಿಗೆ ಗುರುವಂದನೆಯಂತೆ ತೋರಿತು. ಈ ರಾಗ ಮಾಲಿಕೆಯಲ್ಲಿ ಗಮನಿಸಬಹುದಾದ ವೈಶಿಷ್ಟ್ಯ- ಸಾಹಿತ್ಯದಲ್ಲಿ ಪ್ರತೀ ರಾಗದಲ್ಲಿಯೂ ರಾಗದ ಹೆಸರು ಅಳವಡಿಸಿದ್ದಲ್ಲದೆ ಆಯಾರಾಗಗಳಲ್ಲಿ ಹಿಂದಿನ ಮಹಾ ವಾಗ್ಗೇಯಕಾರರಿಂದ ರಚಿಸಲ್ಪಟ್ಟ ಪ್ರಸಿದ್ಧ ಕೀರ್ತನೆ/ಕೃತಿಗಳನ್ನು ಪರೋಕ್ಷವಾಗಿ ಸೂಚಿತವಾಗಿತ್ತು. ಉದಾಹರಣೆ:
ರಾಗ ಸಾರಮತಿ – ಮೋಕ್ಷ (ತ್ಯಾಗರಜರ ‘ಮೋಕ್ಷಮುಗಲದಾ’ ಕೀರ್ತನೆ)
ರಾಗ ಸಾಮ – ಶಾಂತ (ತ್ಯಾಗರಜರ ‘ಶಾಂತಮುಲೇಕ ಸೌಖ್ಯಮುಲೇದು’)
ರಾಗ ಅಭೋಗಿ – ಸಭಾಪತಿ (ಗೋಪಾಲಕೃಷ್ಣಭಾರತಿಯವರ ‘ಸಭಾಪತಿಕ್ಕ್
ವೇರೆದೈವಂ ಸಮಾನಮಾಗುಮಾ?’)
ರಾಗ ವರಾಳಿ – ವರಾಳಿವೇಣಿ (ದೀಕ್ಷಿತರ ‘ಮಾಮವ ಮೀನಾಕ್ಷಿ’)
ರಾಗ ಹಂಸನಾದ – ರಾಮನಾಮ ಮನೇ (ತ್ಯಾಗರಾಜರ ‘ಬಂಟುರೀತಿ’ಯ ಚರಣ)
ಕೊನೆಯಲ್ಲಿ ‘ಕಂಡು ಧನ್ಯನಾದೆ’ ದಾಸರ ಪದ, ‘ಆಂಡವನ್ ದರ್ಶನ’ವಾದ ಮೇಲೆ ಕಾರ್ಯಕ್ರಮಕ್ಕೆ ಮಂಗಳ ಹಾಡಿದರು. ಪಕ್ಕವಾದ್ಯದವರಾದ ವಿದ್ವಾನ್ ಗಣರಾಜ್ ಕಾರ್ಲೆ ಕಾಸರಗೋಡು, ಮೃದಂಗದಲ್ಲಿ ಜಿ ಎಸ್ ನಾಗರಾಜ್ ಬೆ೦ಗಳೂರು, ಘಟಂನಲ್ಲಿ ಸಚಿನ್ ಪ್ರಸಾದ್ ಬೆಂಗಳೂರು ಸಮರ್ಥ ಸಹಯೋಗ ನೀಡಿದರು.
ಕಚೇರಿಯಲ್ಲಿ ಕನ್ನಡಭಾಷೆಯ ರಚನೆಗಳಿಗೆ ಹೆಚ್ಚಿನ ಪ್ರಾತಿನಿಧ್ಯವಿಲ್ಲವೆಂದು ಹೇಳಿದರೆ ಮೊಸರಲ್ಲಿ ಕಲ್ಲನ್ನು ಹುಡುಕಿದಂತಾಗುವುದು. ಮೇಲಾಗಿ ಸಂಗೀತಕ್ಕೆ ಭಾಷಾ ಬಂಧನಗಳಿಲ್ಲ. ಅಂಥಹ ಕಟ್ಟುಪಾಡುಗಳಿದ್ದಿದ್ದರೆ ಕನ್ನಡಿಗರಾದ ಮೈಸೂರು ವಾಸುದೇವಾಚಾರ್ಯರು ತಮ್ಮ ಕೀರ್ತನೆ/ಕೃತಿಗಳನ್ನು ತೆಲುಗಿನಲ್ಲಿ ರಚಿಸುತ್ತಿರಲಿಲ್ಲ; ಸ್ವಾತಿ ತಿರುನಾಳ್ ಮಹಾರಜರು ಸಂಸೃತವಲ್ಲದೆ, ಹಿಂದಿ ಕನ್ನಡ ಮಲೆಯಾಳ ಭಾಷೆಗಳಲ್ಲಿ ರಚಿಸಿಲ್ಲವೇ? ಇನ್ನೂ ಮುಂದುವರೆದು ದೀಕ್ಷಿತರು, ಸ್ವಾತಿ ತಿರುನಾಳ್ ಮೊದಲಾದವರು ಒಂದೇ ಕೃತಿಯಲ್ಲಿ ವಿವಿಧ ಭಾಷೆಗಳನ್ನು ಅಳವಡಿಸಿ ಭಾಷಾಮಾಲಿಕೆ (ಮಣಿಪ್ರವಾಳ) ಎಂಬ ನೂತನ ಪ್ರಕಾರದಲ್ಲಿ ರಚಿಸಲಿಲ್ಲವೇ?
ವರ್ಷಂಪ್ರತಿ ಇಂಥಹ ದಿವ್ಯ ಸಂಗೀತವನ್ನು ಸವಿಯಲು ಅವಕಾಶ ಮಾಡಿಕೊಡುತ್ತಿರುವ ‘ರಂಜನಿ ಸಂಗೀತ ಸಭಾ’ದ ಕಾರ್ಯಕರ್ತರು ಮುಖ್ಯವಾಗಿ ಅದರ ರೂವಾರಿಗಳಾದ ಸತ್ಯನಾರಾಯಣ ಹೊನ್ನಾಡಿ ಮತ್ತು ರೇಖಾವತಿ ಹೊನ್ನಾಡಿಯವರು ಅಭಿನಂದನೀಯರು. ಸಭಾಂಗಣಕ್ಕೆ ಸೂಕ್ತವಾದ ಧ್ವನಿವರ್ಧಕ ಇತ್ತು. ಆಧುನಿಕ ಯುಗದಲ್ಲಿ ಜನಪ್ರಿಯ ‘ಆರ್ಕೆಸ್ಟ್ರಾ’ ಸಂಗೀತಕ್ಕೆ ಆರ್ಭಟಿಸುವ ಪಕ್ಕವಾದ್ಯಗಳೇ ‘ಮುಖ್ಯವಾದ್ಯ’ಗಳಾಗಿರುವಲ್ಲಿ ಧ್ವನಿವರ್ಧಕ ಒದಗಿಸುತ್ತಿರುವ ನಮ್ಮ ಜಿಲ್ಲೆಯಲ್ಲಿ ಇಂಥಹ ‘ಅಭಿಜಾತ ಸಂಗೀತಕ್ಕೆ’ ಕೊಂಚ ಹದವರಿತು ಧ್ವನಿವರ್ಧಕವನ್ನು ಸ್ಥಿಮಿತಗೊಳಿಸುವಲ್ಲಿ ಗಮನ ಹರಿಸಬೇಕೆಂದು ನನ್ನ ಸ್ವಂತ ಅನಿಸಿಕೆ ಮತ್ತು ಅರಿಕೆ.
ವಿದ್ವಾನ್ ಹರಿಹರ ಬಾಯಾಡಿ
(ವಿದ್ವಾನ್ ಹರಿಹರ ಬಾಯಾಡಿ ಅವರು ಹಿರಿಯ ಸಂಗೀತಗಾರರು, ಸಂಗೀತ ಗುರುಗಳು. ಸುಳ್ಯದ ‘ನಾದ ಮಂಟಪ’ ಸಂಗೀತ ಸಭಾದ ಸ್ಥಾಪಕರು).