*ಗಂಗಾಧರ ಕಲ್ಲಪಳ್ಳಿ.
ಸುಳ್ಯ:ಮಾನ್ಸೂನ್ ಆರಂಭವಾದೊಡನೆ ಕೇರಳದ ಊಟಿ ಎಂದೇ ಪ್ರಸಿದ್ದಿ ಪಡೆದಿರುವ ‘ರಾಣಿಪುರಂ’ ಗಿರಿ ಶೃಂಗಗಳ ಹಸಿರು ಹೊದ್ದು ಮನ ಸೆಳೆಯುವ ಪರಿಸರವನ್ನು ಕಣ್ತುಂಬಿಕೊಳ್ಳಲು, ಇಡೀ ಪರಿಸರವನ್ನು ತಬ್ಬಿಕೊಂಡಿರುವ ಮಂಜಿನ ಮತ್ತು ಮಳೆಯ ಕಣಗಳ ಸೊಬಗನ್ನು ಆಸ್ವಾದಿಸಲು ಪ್ರವಾಸಿಗರ ದಂಡೇ ಇಲ್ಲಿಗೆ ಆಗಮಿಸುತ್ತಿದ್ದಾರೆ. ಮಾನ್ಸೂನ್ ಆರಂಭವಾದೊಡನೆ ಮಾನ್ಸೂನ್ ವೈಭವ, ಪ್ರಕೃತಿಯ ಸೊಬಗನ್ನು ಆಸ್ವಾದಿಸಲು ಪ್ರವಾಸಿಗರ,ಪ್ರಕೃತಿ ಪ್ರಿಯರು ತಂಡೋಪ ತಂಡವಾಗಿ
ಆಗಮಿಸುತ್ತಿದ್ದಾರೆ. ಕರ್ನಾಟಕದ ವಿವಿಧ ಭಾಗಗಳಿಂದ ಮತ್ತು ಕೇರಳದಿಂದ ರಾಣಿಪುರಂಗೆ ನೂರಾರು ಮಂದಿ ಪ್ರಕೃತಿಯ ಸೌಂದರ್ಯವನ್ನು ಅರಸಿ ದಿನಾಲು ಬರುತ್ತಿದ್ದಾರೆ. ಮಾನ್ಸೂನ್ ಆರಂಭವಾದ ಮೇಲೆ ಹಸಿರು ಪ್ರಕೃತಿಯನ್ನೂ, ಮಳೆಯ ಸೌಂದರ್ಯ ವನ್ನು ಅರಸಿ ಬರುವವರ ಸಂಖ್ಯೆ ಹೆಚ್ಚಿದೆ. ಶನಿವಾರ, ಭಾನುವಾರವಂತೂ ರಾಣಿಪುರಂಗೆ ಬರುವವರ ಸಂಖ್ಯೆ ದುಪ್ಪಟ್ಟಾಗಿದೆ. ಮಹಿಳೆಯರೂ ಸೇರಿದಂತೆ ಪ್ರವಾಸಿಗರು, ಟ್ರೆಕ್ಕಿಂಗ್ ಪ್ರಿಯರು ಆಗಮಿಸುತ್ತಿದ್ದಾರೆ. ಟ್ರಕ್ಕಿಂಗ್ಗೆ, ಪ್ರಕೃತಿಯ, ಮಳೆಯ ಸೌಂದರ್ಯ ಆಸ್ವಾದಿಸಲು, ಪ್ರಕೃತಿಯ ಅಧ್ಯಯನಕ್ಕೆ ಹೀಗೆ ಇಲ್ಲಿಗೆ ಆಗಮಿಸುವವರ ಸಂಖ್ಯೆ ನೂರಾರು. ಬೆಳಿಗ್ಗಿನಿಂದಲೇ ರಾಣಿಪುರಂಗೆ ಪ್ರವಾಸಿಗರು ಬರುತ್ತಾರೆ. ಬೆಳಿಗ್ಗೆ 8
ಗಂಟೆಗೆ ಟಿಕೆಟ್ ನೀಡಲು ಆರಂಭಗೊಳ್ಳುತ್ತದೆ. ಮಳೆಗಾಲವಾದ ಕಾರಣ ಗಿರಿಧಾಮದ ಮೇಲೆ ಇರುವ ಬಂಡೆಕಲ್ಲಿನ ಮೇಲ್ಭಾಗ ಜಾರುವ ಸಾಧ್ಯತೆ ಇರುವ ಕಾರಣ ಬಂಡೆಕಲ್ಲಿನ ಮೇಲೆ ಪ್ರವಾಸಿಗರು ಹತ್ತಬಾರದು ಎಂದು ಅರಣ್ಯ ಇಲಾಖೆಯ ಅಧಿಕಾರಿಗಳು ಹೇಳುತ್ತಾರೆ.
ಕೈ ಬೀಸಿ ಕರೆಯುವ ಕೇರಳದ ಊಟಿ..
ಸುತ್ತಲೂ ಪೋಣಿಸಿದಂತೆ ಕಾಣುವ ಹಸಿರು ಬೆಟ್ಟಗಳ ಸಾಲುಗಳು.. ಅದರ ಮೇಲೆ ಮೊಲದ ಮರಿಗಳಂತೆ ಓಡಾಡುವ ಬಿಳಿ ಮೋಡಗಳು.. ಹಾಲ್ನೊರೆ ಸೂಸುವಂತೆ ಪರಿಸರವನ್ನು ತಬ್ಬಿಕೊಳ್ಳುವ ಮಂಜಿನ ಕಣಗಳು.. ಕ್ಷಣ ಮಾತ್ರದಲ್ಲಿ ನಮ್ಮನ್ನು ಮುತ್ತಿಕೊಳ್ಳುವ ಮಂಜು ಇಡೀ ಪ್ರದೇಶದಲ್ಲಿ ಬಿಳಿ ಚಿತ್ತಾರ ಬಿಡಿಸುತ್ತದೆ. ಕೇರಳ – ಕರ್ನಾಟಕ ರಾಜ್ಯಗಳ ಗಡಿ ಪ್ರದೇಶವಾದ ರಾಣಿಪುರಂನ ಸೌಂದರ್ಯ ವರ್ಣನಾತೀತ. ಭೂಮಿಯು ಎಲ್ಲಾ ಹಸಿರು ಸೌಂದರ್ಯವನ್ನು ತನ್ನೊಡಲಲ್ಲಿರಿಸಿ ಬೀಗುತ್ತಿರುವ ರಾಣಿಪುರಂನ ಸುಂದರ ಪ್ರಕೃತಿಯಲ್ಲಿ ಮೈಮರೆತಾಗ ಭೂಮಿಯಲ್ಲಿಯೇ ಸ್ವರ್ಗವನ್ನು ಕಂಡಂತೆ ಮನ ಪುಳಕಗೊಳ್ಳುತ್ತದೆ. ಎಲ್ಲೆಲ್ಲೂ ಹಸಿರಿನಿಂದ ಕಂಗೊಳಿಸುವ ಭೂರಮೆಯ ಸ್ವರ್ಗದಂತಿರುವ ರಾಣಿಪುರಂ ಪ್ರವಾಸಿಗರನ್ನು ಕೈ ಬೀಸಿ
ಕರೆಯುತ್ತಿದೆ.ಕೇರಳದ ಊಟಿ’ ಎಂದೇ ಪ್ರಸಿದ್ಧವಾಗಿರುವ ರಾಣಿಪುರಂ ಎಂಬ ಹಸಿರ ಸೌಂದರ್ಯ ಇರುವುದು ಕಾಸರಗೋಡು ಜಿಲ್ಲೆಯ ಪನತ್ತಡಿ ಗ್ರಾಮ ಪಂಚಾಯತಿಯಲ್ಲಿ. ಸಮುದ್ರ ಮಟ್ಟದಿಂದ 2,460 ಅಡಿ ಎತ್ತರದಲ್ಲಿದೆ ಈ ಗಿರಿ ಶಿಖರ. ಪಶ್ಚಿಮ ಘಟ್ಟ ತಪ್ಪಲಿನ ಸಹ್ಯಾದ್ರಿ ಬೆಟ್ಟಗಳ ಸಾಲಿಗೆ ಸೇರುವ ರಾಣಿಪುರಂ ಗಿರಿಶೃಂಗಕ್ಕೆ ತಲುಪಲು ಸುಮಾರು 5 ಕಿ.ಮೀ. ಕಾಡಿನ ಮಧ್ಯೆ ನಡೆದು ಸಾಗಬೇಕು. ಚಿಕ್ಕ ಚಿಕ್ಕ, ಜಲಪಾತಗಳ, ಸ್ಪಟಿಕದಂತೆ ಹೊಳೆಯುವ ನೀರು ಹರಿಯುವ ತೊರೆಗಳ ಜುಳು ಜುಳು ನಿನಾದವನ್ನೂ, ಪಕ್ಷಿಗಳ ಕಲರವವನ್ನೂ ಆಲಿಸುತ್ತ, ಹಸಿರು ಹುಲ್ಲುಗಾವಲಿನ ಮತ್ತು ಭಾರಿ ಗಾತ್ರದ ಮರಗಳ ಸೌಂದರ್ಯವನ್ನು ಸವಿಯುತ್ತಾ ಕ್ರಮಿಸುವ ಈ ಪ್ರಯಾಣ ವಿಶಿಷ್ಟ ಅನುಭವ ನೀಡುತ್ತದೆ. ಬೆಟ್ಟದ ತುತ್ತ ತುದಿಗೆ ತಲುಪಿದಾಗ, ಬೆಟ್ಟದ ಮೇಲಿನ ಮುಗಿಲು ಮುಟ್ಟುವ ಬಂಡೆ ಮೇಲೆ ಏರಿ ನಿಂತಾಗ ಸುತ್ತಲೂ ಹಸಿರು ವರ್ಣ ರಾಶಿಯ ಅದ್ಭುತ ಲೋಕವೇ ತೆರೆದುಕೊಳ್ಳುತ್ತದೆ.
ಟ್ರೆಕ್ಕಿಂಗ್ ಪ್ರಿಯರ ಇಷ್ಟ ತಾಣ:
ಅಪರೂಪದ ಸಸ್ಯ ಸಂಪತ್ತು ಮತ್ತು ವಿಶಿಷ್ಟ ಮರ ಗಿಡಗಳು, ಆರ್ಕಿಡ್ ಗಿಡಗಳು, ಪಕ್ಷಿಗಳು, ವರ್ಣ ವೈವಿಧ್ಯ ಚಿಟ್ಟೆಗಳು, ದುಂಬಿಗಳು, ರಾಣಿಪುರಂನ ಸೌಂದರ್ಯ ಇಮ್ಮಡಿಗೊಳಿಸುತ್ತದೆ.ಪ್ರಕೃತಿ ಆರಾಧಕರಿಗೆ, ಪರಿಸರ, ಕಾಡು,ಮೇಡುಗಳ ಸೌಂದರ್ಯ ಆಸ್ವಾದಕರಿಗರ, ಟ್ರಕ್ಕಿಂಗ್ ಪ್ರಿಯರಿಗೆ ರಾಣಿಪುರಂ ಅತ್ಯಂತ ಸೂಕ್ತ ಪ್ರದೇಶ, ನಡೆದು ಹೋಗುವಾಗ ದಾರಿ ಮಧ್ಯೆ ಕಾಡು ಕೋಣ, ಕಾಡಾನೆ ಹಿಂಡು, ಜಿಂಕೆ, ಮಂಗ, ಮೊಲ ಹೀಗೆ ಹಲವು ಪ್ರಾಣಿಗಳ ದರ್ಶನವೂ ಆಗಬಹುದು.
ಅಲ್ಲಲ್ಲಿ ಮುತ್ತು ಹರಡಿದಂತೆ ಕಾಣುವ ಕೇರಳ ಮತ್ತು ಕರ್ನಾಟಕದ ಗ್ರಾಮಗಳ ದರ್ಶನ ಮನ ತಣಿಸುತ್ತದೆ.’ರಾಣಿಪುರಂ ಬ್ರಹ್ಮಗಿರಿ ಬೆಟ್ಟದ ಸಾಲಿನೊಂದಿಗೆ ಪೋಣಿಸಿದಂತಿದೆ. ಕೆಲವು ಟ್ರೆಕ್ಕಿಂಗ್ ಉತ್ಸಾಹಿಗಳು ರಾಣಿಪುರಂ ಮೂಲಕ ಅರಣ್ಯ ದಾರಿಯಾಗಿ ತಲಕಾವೇರಿಗೂ ಟ್ರೆಕ್ಕಿಂಗ್ ಮಾಡುತ್ತಾರೆ.
ಸರ್ವಋತು ತಾಣ:
ಬೆರಳ ತುದಿಯನ್ನೂ ಆವರಿಸುವ ಮಂಜು,
ಶರೀರಕ್ಕೂ ಮನ್ನಸ್ಸಿಗೂ ಹಿತಾನುಭವವನ್ನು ನೀಡುವ ತಂಪು ಗಾಳಿ, ಹಚ್ಚ ಹಸಿರಿನ ಶುದ್ಧವಾದ ವಾತಾವರಣದಲ್ಲಿ ದಿನ ಕಳೆಯಲು ಇಚ್ಚಿಸುವವರು ರಾಣಿಪುತಂ ಅರಸಿ ಬರುತ್ತಾರೆ. ಕಡು ಬೇಸಿಗೆಯಲ್ಲಿಯೂ ತಂಪಾದ ಹಿತ ವಾತಾವರಣ ಪ್ರವಾಸಿಗರನ್ನು ಸೆಳೆಯುತ್ತದೆ. ಅಕ್ಟೋಬರ್ನಿಂದ ಮೇ ತನಕ ಇಲ್ಲಿಗೆ ಪ್ರವಾಸಿಗರ ದಂಡೇ ಆಗಮಿಸುತ್ತಾರೆ. ಮಳೆಯ ಅಧಮ್ಯ ಸೌಂದರ್ಯ, ಮಲೇಗಾಲದ ರೌಧ್ರ ಭಾವವನ್ನು ನೋಡ ಬಯಸುವವರು ಮಳೆಗಾಲದಲ್ಲೂ ಇಲ್ಲಿಗೆ ಬರುತ್ತಾರೆ.
ಹೋಗುವುದು ಹೇಗೆ?
ಸುಳ್ಯದಿಂದ ಸುಳ್ಯ ಪಾಣತ್ತೂರು ಅಂತಾರಾಜ್ಯ ರಸ್ತೆಯಲ್ಲಿ 22 ಮೀ. ಪ್ರಯಾಣಿಸಿದರೆ ಕೇರಳದ ಪಾಣತ್ತೂರು ಪಟ್ಟಣ ಸಿಗುತ್ತದೆ, ಅಲ್ಲಿಂದ ಕಾಞಂಗಾಡ್ ರಸ್ತೆಯಲ್ಲಿ 8 ಕಿ.ಮೀ ಸಂಚರಿಸಿದರೆ ಪನತ್ತಡಿ ತಲುಪಬಹುದು.ಅಲ್ಲಿಂದ 10 ಕಿ.ಮಿ ಸಾಗಿದರೆ ರಾಣಿಪುರಂ ಸಿಗುತ್ತದೆ. ಪಾಣತ್ತೂರಿನಿಂದ ಮಾಡತ್ತ್ಮಲ ಮೂಲಕ 5 ಕಿ.ಮಿ.ಪ್ರಯಾಣಿಸಿ ರಾಣಿಪುರಂ ಸೇರಬಹುದು. ರಾಣಿಪುರಂಗೆ ಬರುವ ಪ್ರವಾಸಿಗರಿಗೆ ವಾಸಿಸಲು ಕಾಟೇಜ್ಗಳು, ರೆಸಾರ್ಟ್ಗಳು ಲಭ್ಯವಿದೆ.