*ಗಂಗಾಧರ ಕಲ್ಲಪಳ್ಳಿ.
ಸುಳ್ಯ:ಕೇರಳದ ಊಟಿ ಎಂದೇ ಕರ್ನಾಟಕ ಮತ್ತು ಕೇರಳದ ಜನರಿಗೆ ಚಿರ ಪರಿಚಿತವಾದ ರಮ್ಯ ತಾಣ ಗಡಿ ಪ್ರದೇಶದ ರಾಣಿಪುರಂ ಗಿರಿ ಶೃಂಗಗಳು.ಈ ಗಿರಿ ಶೃಂಗಗಳ ಸುತ್ತ ಇದೀಗ ವಸಂತ ಕಾಲದ ಸಂಭ್ರಮ. ವಸಂತ ಕಾಲದಲ್ಲಿ ಅನೇಕ ಪಕ್ಷಿಗಳು ಅತಿಥಿಗಳಾಗಿ ಆಗಮಿಸುವಂತೆ,ರಾಣಿಪುರಂನ ಸೌಂದರ್ಯವನ್ನು ಆಸ್ವಾದಿಸಲು ನಾಡಿನಾದ್ಯಂತದಿಂದ ಪ್ರವಾಸಿಗರ ದಂಡೇ ಆಗಮಿಸುತಿದೆ.ಸುತ್ತಲೂ

ಪೋಣಿಸಿದಂತೆ ಕಾಣುವ ಹಸಿರು ಬೆಟ್ಟಗಳ ಸಾಲುಗಳು.. ಅದರ ಮೇಲೆ ಮೊಲದ ಮರಿಗಳಂತೆ ಓಡಾಡುವ ಬಿಳಿ ಮೋಡಗಳು.. ಹಾಲ್ನೊರೆ ಸೂಸುವಂತೆ ಪರಿಸರವನ್ನು ತಬ್ಬಿಕೊಳ್ಳುವ ಮಂಜಿನ ಕಣಗಳು.. ಕ್ಷಣ ಮಾತ್ರದಲ್ಲಿ ನಮ್ಮನ್ನು ಮುತ್ತಿಕೊಳ್ಳುವ ಮಂಜು ಇಡೀ ಪ್ರದೇಶದಲ್ಲಿ ಬಿಳಿ ಚಿತ್ತಾರ ಬಿಡಿಸುತ್ತದೆ. ಕೇರಳ – ಕರ್ನಾಟಕ ರಾಜ್ಯಗಳ ಗಡಿ ಪ್ರದೇಶವಾದ ರಾಣಿಪುರಂನ ಸೌಂದರ್ಯ ವರ್ಣನಾತೀತ, ಭೂಮಿಯು ಎಲ್ಲ ಹಸಿರು ಸೌಂದರ್ಯವನ್ನು ತನ್ನೊಡಲಲ್ಲಿರಿಸಿ ಬೀಗುತ್ತಿರುವ ರಾಣಿಪುರಂನ ಸುಂದರ ಪ್ರಕೃತಿಯಲ್ಲಿ ಮೈಮರೆತಾಗ ಭೂಮಿಯಲ್ಲಿಯೇ ಸ್ವರ್ಗವನ್ನು ಕಂಡಂತೆ ಮನ ಪುಳಕಗೊಳ್ಳುತ್ತದೆ.ಎಲ್ಲೆಲ್ಲೂ ಹಸಿರಿನಿಂದ ಕಂಗೊಳಿಸುವ ಭೂರಮೆಯ ಸ್ವರ್ಗದಂತಿರುವ ರಾಣಿಪುರಂ ಪ್ರವಾಸಿಗರನ್ನು ಕೈ ಬೀಸಿ ಕರೆಯುತ್ತಿದೆ.

ಚಿತ್ರಗಳು:ದಯಾನಂದ ಕಲ್ನಾರ್ ಮತ್ತು ಗಂಗಾ ಕಲ್ಲಪಳ್ಳಿ
ಕೇರಳದ ಊಟಿ’ ಎಂದೇ ಪ್ರಸಿದ್ಧವಾಗಿರುವ ರಾಣಿಪುರಂ ಎಂಬ ಹಸಿರ ಸೌಂದರ್ಯದ ಖನಿ ಇರುವುದು ಕಾಸರಗೋಡು ಜಿಲ್ಲೆಯ ಪನತ್ತಡಿ ಗ್ರಾಮ ಪಂಚಾಯತಿಯಲ್ಲಿ, ಸಮುದ್ರ ಮಟ್ಟದಿಂದ 2,460 ಅಡಿ ಎತ್ತರದಲ್ಲಿದೆ ಈ ಗಿರಿಶಿಖರ. ಪಶ್ಚಿಮ ಘಟ್ಟ ತಪ್ಪಲಿನ ಸಹ್ಯಾದ್ರಿ ಬೆಟ್ಟಗಳ ಸಾಲಿಗೆ ಸೇರುವ ರಾಣಿಪುರಂ ಗಿರಿಶೃಂಗಕ್ಕೆ ತಲುಪಲು ಸುಮಾರು 5 ಕಿ.ಮೀ. ಕಾಡಿನ, ಹುಲ್ಲುಗಾವಲಿನ ಮಧ್ಯೆ ನಡೆದು ಸಾಗಬೇಕು. ಚಿಕ್ಕ ಚಿಕ್ಕ ಜಲಪಾತಗಳ, ಸ್ಪಟಿಕದಂತೆ ಹೊಳೆಯುವ ನೀರು ಹರಿಯುವ ತೊರೆಗಳ ಜುಳು ಜುಳು ನಿನಾದವನ್ನೂ, ಪಕ್ಷಿಗಳ ಕಲರವವನ್ನು ಆಲಿಸುತ್ತ, ಹಸಿರು ಹುಲ್ಲುಗಾವಲಿನ ಮತ್ತು ಭಾರಿ ಗಾತ್ರದ ಮರಗಳ ಸೌಂದರ್ಯವನ್ನು ಸವಿಯುತ್ತ ಕ್ರಮಿಸುವ ಈ ಪ್ರಯಾಣ ವಿಶಿಷ್ಟ ಅನುಭವ ನೀಡುತ್ತದೆ. ಬೆಟ್ಟದ ತುತ್ತ ತುದಿಗೆ ತಲುಪಿದಾಗ, ಬೆಟ್ಟದ ಮೇಲಿನ ಮುಗಿಲು ಮುಟ್ಟುವ ಬಂಡೆ ಮೇಲೆ ಏರಿ ನಿಂತಾಗ ಸುತ್ತಲೂ ಹಸಿರು ವರ್ಣ ರಾಶಿಯ ಅದ್ಭುತ ಲೋಕವೇ ತೆರೆದುಕೊಳ್ಳುತ್ತದೆ.

ಟ್ರೆಕ್ಕಿಂಗ್ ಪ್ರಿಯರ ಇಷ್ಟ ತಾಣ:
ಅಪರೂಪದ ಸಸ್ಯ ಸಂಪತ್ತು ಮತ್ತು ವಿಶಿಷ್ಟ ಮರ ಗಿಡಗಳು, ಆರ್ಕಿಡ್ ಗಿಡಗಳು, ಪಕ್ಷಿಗಳು, ವರ್ಣ ವೈವಿಧ್ಯ ಚಿಟ್ಟೆಗಳು, ದುಂಬಿಗಳು, ರಾಣಿಪುರಂನ ಸೌಂದರ್ಯ ಇಮ್ಮಡಿಗೊಳಿಸುತ್ತದೆ.ಪ್ರಕೃತಿ ಆರಾಧಕರಿಗೆ, ಪರಿಸರ, ಕಾಡು,ಮೇಡುಗಳ ಸೌಂದರ್ಯ ಆಸ್ವಾದಕರಿಗರ, ಟ್ರಕ್ಕಿಂಗ್ ಪ್ರಿಯರಿಗೆ ರಾಣಿಪುರಂ ಅತ್ಯಂತ ಸೂಕ್ತ ಪ್ರದೇಶ, ನಡೆದು ಹೋಗುವಾಗ ದಾರಿ ಮಧ್ಯೆ ಜಿಂಕೆ, ಮಂಗ, ಮೊಲ,ಕಾಡು ಕೋಣ, ಕಾಡಾನೆ ಹಿಂಡು
ಹೀಗೆ ಹಲವು ಪ್ರಾಣಿಗಳ ದರ್ಶನವೂ ಕೆಲವೊಮ್ಮೆ ಆಗಬಹುದು.
ಅಲ್ಲಲ್ಲಿ ಮುತ್ತು ಹರಡಿದಂತೆ ಕಾಣುವ ಕೇರಳ ಮತ್ತು ಕರ್ನಾಟಕದ ಗ್ರಾಮಗಳ ದರ್ಶನ ಮನ ತಣಿಸುತ್ತದೆ.
‘ರಾಣಿಪುರಂ ಬ್ರಹ್ಮಗಿರಿ ಬೆಟ್ಟದ ಸಾಲಿನೊಂದಿಗೆ ಪೋಣಿಸಿದಂತಿದೆ. ಕೆಲವು ಟ್ರೆಕ್ಕಿಂಗ್ ಉತ್ಸಾಹಿಗಳು ರಾಣಿಪುರಂ ಮೂಲಕ ಅರಣ್ಯ ದಾರಿಯಾಗಿ ತಲಕಾವೇರಿಗೂ ಟ್ರೆಕ್ಕಿಂಗ್ ಮಾಡುತ್ತಾರೆ.

ಸರ್ವಋತು ತಾಣ:
ಬೆರಳ ತುದಿಯನ್ನೂ ಆವರಿಸುವ ಮಂಜು,
ಶರೀರಕ್ಕೂ ಮನ್ನಸ್ಸಿಗೂ ಹಿತಾನುಭವವನ್ನು ನೀಡುವ ತಂಪು ಗಾಳಿ, ಹಚ್ಚ ಹಸಿರಿನ ಶುದ್ಧವಾದ ವಾತಾವರಣದಲ್ಲಿ ದಿನ ಕಳೆಯಲು ಇಚ್ಚಿಸುವವರು ರಾಣಿಪುತಂ ಅರಸಿ ಬರುತ್ತಾರೆ. ಕಡು ಬೇಸಿಗೆಯಲ್ಲಿಯೂ ತಂಪಾದ ಹಿತ ವಾತಾವರಣ ಪ್ರವಾಸಿಗರನ್ನು ಸೆಳೆಯುತ್ತದೆ. ಅಕ್ಟೋಬರ್ನಿಂದ ಮೇ ತನಕ ಇಲ್ಲಿಗೆ ಪ್ರವಾಸಿಗರ ದಂಡೇ ಆಗಮಿಸುತ್ತಾರೆ. ಮಳೆಯ ಅಧಮ್ಯ

ಸೌಂದರ್ಯ, ಮಲೇಗಾಲದ ರೌಧ್ರ ಭಾವವನ್ನು ನೋಡ ಬಯಸುವವರು ಮಳೆಗಾಲದಲ್ಲೂ ಇಲ್ಲಿಗೆ ಬರುತ್ತಾರೆ. ರಾಣಿಪುರಂಗೆ ಆಕರ್ಷಣೆಯಾಗಿ ಗ್ಲಾಸ್ ಬ್ರಿಡ್ಜ್ ಕೂಡ ಇತ್ತೀಚೆಗೆ ಸೆಟ್ಟೇರಿದೆ. ಉಳಿದುಕೊಳ್ಳಲು ರೆಸಾರ್ಟ್ಗಳು, ಹೋಂ ಸ್ಟೇಗಳು ಲಭ್ಯವಿದೆ. ಅರಣ್ಯ ಇಲಾಖೆಯ ಸುಪರ್ದಿಯಲ್ಲಿರುವ ರಾಣಿಪುರಂ ಟ್ರಕ್ಕಿಂಗ್ ಮಾಡಲು ಅರಣ್ಯ ಇಲಾಖೆಯ ಕೌಂಟರ್ನಿಂದ ಟಿಕೆಟ್ ಪಡೆದುಕೊಳ್ಳಬೇಕು. ಹಿಲ್ ಸ್ಟೇಷನ್ನಲ್ಲಿ ಪ್ಲಾಸ್ಟಿಕ್ ಸಂಪೂರ್ಣ ನಿಷೇಧಿಸಲಾಗಿದೆ. ನೀರು ಕೊಂಡೊಯ್ಯುವ ಬಾಟಲಿಯ ಲೆಕ್ಕ ನೀಡಿ ಅದನ್ನು ಅಲ್ಲಿ ಬಿಸಾಡುವಂತಿಲ್ಲ.ಗುಡ್ಡದಿಂದ ಅದನ್ನು ಹಿಂದಕ್ಕೆ ತರಬೇಕು. ಬಳಲಿ ಬೆಂಡಾಗಿ ಗುಡ್ಡ ಏರಿದಾಗ ಬೆಟ್ಟದ ಮೇಲೆ ಚಿಕ್ಕ ಗೂಡಂಗಡಿಯಲ್ಲಿ ಸಿಗುವ ಮಜ್ಜಿಗೆ, ಜ್ಯೂಸ್, ತಿಂಡಿಗೆ ಏನೋ ಒಂದು ವಿಶಿಷ್ಟ ರುಚಿಯ ಅನುಭವ.

ಹೋಗುವುದು ಹೇಗೆ?
ಸುಳ್ಯದಿಂದ ಸುಳ್ಯ ಪಾಣತ್ತೂರು ಅಂತಾರಾಜ್ಯ ರಸ್ತೆಯಲ್ಲಿ 22 ಮೀ. ಪ್ರಯಾಣಿಸಿದರೆ ಕೇರಳದ ಪಾಣತ್ತೂರು ಪಟ್ಟಣ ಸಿಗುತ್ತದೆ, ಅಲ್ಲಿಂದ ಕಾಞಂಗಾಡ್ ರಸ್ತೆಯಲ್ಲಿ 8 ಕಿ.ಮೀ ಸಂಚರಿಸಿದರೆ ಪನತ್ತಡಿ ತಲುಪಬಹುದು.ಅಲ್ಲಿಂದ 10 ಕಿ.ಮಿ ಸಾಗಿದರೆ ರಾಣಿಪುರಂ ಸಿಗುತ್ತದೆ. ಪಾಣತ್ತೂರಿನಿಂದ ಮಾಡತ್ತ್ಮಲ ಮೂಲಕ 5 ಕಿ.ಮಿ.ಪ್ರಯಾಣಿಸಿ ರಾಣಿಪುರಂ ಸೇರಬಹುದು. ಸುಳ್ಯ- ಬಂದಡ್ಕ-ಪನತ್ತಡಿ ಮೂಲಕವೂ ಹೋಗಬಹುದು. ಕಾಸರಗೋಡು-ಕಾಞಂಗಾಡ್-ಪನತ್ತಡಿ-ರಾಣಿಪುರಂ ಋತು ರಸ್ತೆಯಲ್ಲಿಯೂ ರಾಣಿಪುರಂ ತಲುಪಬಹುದು.









