ಸುಳ್ಯ:ರಂಗಮಯೂರಿ ಕಲಾಶಾಲೆಯ ಬಹು ನಿರೀಕ್ಷಿತ ಮಕ್ಕಳ ರಾಜ್ಯಮಟ್ಟದ ಬೇಸಿಗೆ ಶಿಬಿರ ‘ಬಣ್ಣ-2026’ ಏಪ್ರಿಲ್ 13ನಿಂದ 21 ವರೆಗೆ ಸುಳ್ಯದ ಕಾಯರ್ತೋಡಿ ದೇವಸ್ಥಾನದ ಆವರಣದಲ್ಲಿ ನಡೆಯಲಿದೆ ಎಂದು ರಂಗಮಯೂರಿ ಕಲಾ ಶಾಲೆಯ ಪದಾಧಿಕಾರಿಗಳು ತಿಳಿಸಿದ್ದಾರೆ. ಸುಳ್ಯ ಪ್ರೆಸ್ ಕ್ಲಬ್ನಲ್ಲಿ ಸುದ್ದಿಗೋಷ್ಠಿಯಲ್ಲಿ ರಂಗಮಯೂರಿ ಕಲಾ ಶಾಲೆಯ ನಿರ್ದೇಶಕರಾದ ಲೋಕೇಶ್ ಊರುಬೈಲು ಮತ್ತು ಭವಾನಿಶಂಕರ ಅಡ್ತಲೆ ಮಾಹಿತಿ ನೀಡಿ ‘ಮಕ್ಕಳ ಕನಸು ನನಸಾಗಿಸುವ ವೇದಿಕೆ ಇದಾಗಿದೆ. ಮಕ್ಕಳ ಪ್ರಪಂಚದಲ್ಲಿ
ಕಲೆ, ಸಾಹಿತ್ಯಕ್ಕೆ ಒತ್ತು ನೀಡಿ, ಬಣ್ಣ ಬಣ್ಣದ ರೆಕ್ಕೆಯನ್ನು ಕಟ್ಟಿ ಉತ್ತುಂಗಕ್ಕೆ ಏರಿಸುವ ಕಾರ್ಯ ಮಾಡಿಸುತ್ತಿರುವುದು, ಕಳೆದ ಎಂಟು ವರ್ಷಗಳಿಂದ ಸಾಂಸ್ಕೃತಿಕ ಕ್ಷೇತ್ರದಲ್ಲಿ ತನ್ನದೇ ಆದ ಛಾಪು ಮೂಡಿಸುತ್ತಿರುವ ಸುಳ್ಯದ ರಂಗಮಯೂರಿ ಕಲಾಶಾಲೆ. ಬೇಸಿಗೆ ರಜಾ ಸಮಯದಲ್ಲಿ ವಿದ್ಯಾರ್ಥಿಗಳನ್ನು ಮತ್ತಷ್ಟು ಕ್ರಿಯಾತ್ಮಕವಾಗಿ ವಿವಿಧ ಚಟುವಟಿಕೆಗಳಲ್ಲಿ ಪಾಲ್ಗೊಳ್ಳುವಂತೆ ಮಾಡುವ ಉದ್ದೇಶದಿಂದ ಈ ಸಂಸ್ಥೆ ಬೇಸಿಗೆ ಶಿಬಿರವನ್ನು ಆಯೋಜಿಸುತ್ತಾ ಬಂದಿದೆ. ಸುಳ್ಯದ ಶ್ರೀ ಮಹಾವಿಷ್ಣು ದೇವಸ್ಥಾನ ಕಾಯರ್ತೋಡಿಯ ಸ್ವಚ್ಚ ಸುಂದರ ಪರಿಸರದಲ್ಲಿ ಮಕ್ಕಳ ಶಿಬಿರವನ್ನು ನಡೆಸುತ್ತಿದ್ದು, ರಾಜ್ಯದ ಹೆಸರಾಂತ ರಂಗ ಸಂಸ್ಥೆಗಳ ಸಂಪನ್ಮೂಲ ವ್ಯಕ್ತಿಗಳೊಂದಿಗೆ ಮಕ್ಕಳು ಒಂದಷ್ಟು ಹೊತ್ತು ತರಬೇತಿಯನ್ನು ಪಡೆಯುವುದರ ಜೊತೆಗೆ, ನಾಡಿನ ಬೇರೆ ಬೇರೆ ಕಡೆಯ ಮಕ್ಕಳು ಆಗಮಿಸಿ ಒಂದೇ ಕಡೆ ಒಂದೇ ವೇದಿಕೆಯಲ್ಲಿ ಪರಿಚಯವಾಗುತ್ತಾರೆ.

ಸಿಗುವ ಕಡಿಮೆ ಕಾಲಾವಕಾಶದಲ್ಲಿ ಮಕ್ಕಳಿಗೆ ತರಬೇತಿಯನ್ನು ನೀಡಿ ಕೊನೆಯ ದಿನ ಪ್ರತೀ ಮಗುವೂ ವೇದಿಕೆಯಲ್ಲಿ ಸಾಂಸ್ಕತಿಕ ಪ್ರದರ್ಶನಕ್ಕೆ ತಯಾರುಗುವಂತೆ ಮಾಡುವುದೇ ಈ ಶಿಬಿರದ ವಿಶೇಷ.
ಈ ಬಾರಿಯ ಶಿಬಿರದಲ್ಲಿ ದೇಸೀಯ ಕಲೆಗಳ ಅನಾವರಣದೊಂದಿಗೆ ಮಕ್ಕಳ ಕನಸಿನ ‘ಬಣ್ಣ’ ಸಜ್ಜಾಗುತ್ತಿದೆ. ರಂಗ ತರಬೇತಿಯ ಜೊತೆಗೆ ಹಲವು ಶೈಲಿಯ ನಾಟಕ ಪ್ರಕಾರಗಳು ಅಂದರೆ ಐತಿಹಾಸಿಕ, ಪೌರಾಣಿಕ, ಸಾಮಾಜಿಕ, ಶೈಲೀಕೃತ ನಾಟಕಗಳ ಕಲಿಕೆ, ಪ್ರದರ್ಶನ, ಜನಪದ ಹಾಡು, ನೃತ್ಯ, ದೇಸೀ ಆಟ, ದೇಸೀ ವಸ್ತುಗಳ ತಯಾರಿಕೆ, ಪ್ರಾತ್ಯಕ್ಷಿಕೆ ಇತ್ಯಾದಿ ವಿಭಿನ್ನ ಚಟುವಟಿಕೆಗಳ ಜೊತೆಗೆ ಹೆಸರಾಂತ ಸಂಪನ್ಮೂಲ ವ್ಯಕ್ತಿಗಳು, ರಂಗಮಯೂರಿ ಶಿಕ್ಷಕರು, ವ್ಯವಸ್ಥಾಪಕರು, ಹಿರಿಯ ವಿದ್ಯಾರ್ಥಿಗಳು ಹಾಗೂ ಪೋಷಕರು ಜೊತೆಗಿರುತ್ತಾರೆ. ಅಲ್ಲದೇ, ಏಳರಿಂದ ಹದಿನೇಳು (07-17) ವರ್ಷ ವಯೋಮಿತಿಯ ವಿದ್ಯಾರ್ಥಿಗಳಿಗೆ ರಂಗಮಯೂರಿ ಕಲಾಶಾಲೆಯು ನಡೆಸುತ್ತಿರುವ ಬೇಸಿಗೆ ಶಿಬಿರದಲ್ಲಿ ಪಾಲ್ಗೊಳ್ಳಬಹುದು ಎಂದು
ಅವರು ತಿಳಿಸಿದ್ದಾರೆ. ಸಂಪನ್ಮೂಲ ವ್ಯಕ್ತಿಗಳಾಗಿ ಖ್ಯಾತ ರಂಗ ನಿರ್ದೇಶಕರಾದ ಚರಿತ, ಮೋಹನ್ ಶೇಣಿ, ಮಹೇಶ್ ಆಚಾರ್ಯ ಹೊನ್ನಾವರ, ಶುಭಕರ ಪುತ್ತೂರು, ಹೇಮಂತ್ ಕುಮಾರ್ ಬೆಂಗಳೂರು, ರೋಹಿತ್ ಬೈಕಾಡಿ, ಪಲ್ಲವಿ ಕೊಡಗು, ವಿನೋದ್ ಕರ್ಕೇರ್, ಡಾನ್ಸ್ ಮಾಸ್ಟರ್ ರಾಹುಲ್ ಎಸ್.ರಾವ್ ಮತ್ತಿತರರು ಭಾಗವಹಿಸಲಿದ್ದಾರೆ ಎಂದು ಅವರು ವಿವರಿಸಿದರು.

ರಂಗಮಯೂರಿ ಕಲಾಶಾಲೆಯ ಬಗ್ಗೆ ;
ಈ ಸಮಾಜದಲ್ಲಿ ಉತ್ತಮ ಪೋಷಕರು ಮಕ್ಕಳ ಕನಸುಗಳಿಗೆ ಪ್ರೋತ್ಸಾಹ ನೀಡಿ ಪ್ರಜೆಯಾಗಿಸುವುದರ ಜೊತೆಗೆ, ಪ್ರತಿಭೆಗಳನ್ನು ಪೋಷಿಸಿ, ಬೆಳೆಸಿ ಸತ್ಪಜೆಯನ್ನಾಗಿಸುವ ಸಲುವಾಗಿ ಕಲಾಶಾಲೆಗಳನ್ನು ಅರಸುತ್ತಾರೆ. ಅಂತಹ ಪೋಷಕರಿಗೆ ತೆರೆದ ಬಾಗಿಲಾಗಿ ಪ್ರತಿಭೆಗಳಿಗಾಗಿ, ಪ್ರತಿಭೆಗಳಿಗೋಸ್ಕರ ಬೆಳೆಯುತ್ತಿರುವ ಸಂಸ್ಥೆ ರಂಗಮಯೂರಿ ಕಲಾಶಾಲೆ.
ಸಾಮಾಜಿಕ ಹಾಗೂ ಸಾಂಸ್ಕೃತಿಕವಾಗಿ ಎಲ್ಲರನ್ನೂ ಬೆಳೆಸುವ ಉದ್ದೇಶದಿಂದ ಪ್ರತೀ ದಿನ ಹೊಸತನವನ್ನು ಕಂಡುಕೊಳ್ಳುವ ನಿಟ್ಟಿನಲ್ಲಿ ವಿಭಿನ್ನ ಶೈಲಿಯಲ್ಲಿ ವಿದ್ಯಾರ್ಥಿಗಳಿಗಾಗಿಯೇ ಹಲವಾರು ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಒದಗಿಸಿಕೊಡುವುದರ ಜೊತೆಗೆ, ಮಕ್ಕಳು ಸ್ವತಂತ್ರವಾಗಿ ಸ್ಪರ್ಧೆಗಳಲ್ಲಿ ಪಾಲ್ಗೊಂಡು ಪ್ರಶಸ್ತಿ, ಪ್ರಶಂಸೆಗಳನ್ನು ಗಳಿಸಿಕೊಳ್ಳುವಲ್ಲಿ ಈ ಕಲಾಶಾಲೆಯು ಮಾದರಿಯಾಗುತ್ತಾ ಬಂದಿರುತ್ತದೆ.ರಂಗಮಯೂರಿ ಕಲಾಶಾಲೆಯಲ್ಲಿ, ಡ್ರಾಯಿಂಗ್, ಸುಗಮ ಸಂಗೀತ, ಶಾಸ್ತ್ರೀಯ ಸಂಗೀತ, ನೃತ್ಯ, ಅಭಿನಯ ಇತ್ಯಾದಿ ತರಗತಿಗಳನ್ನು ಆಯಾಯ ಶಿಕ್ಷಕರ ಮಾರ್ಗದರ್ಶನದ ಮುಖಾಂತರ ವಾರಪೂರ್ತಿ ನಡೆಸುತ್ತಿರುತ್ತದೆ. ಅಲ್ಲದೇ, ಪ್ರಸ್ತುತ ಸಮಯದಲ್ಲಿ ರಂಗಮಯೂರಿ ಕಲಾಶಾಲೆಯು ವಿದ್ಯಾರ್ಥಿಗಳನ್ನು ಸ್ಥಳೀಯ ವೇದಿಕೆಯ ಜೊತೆಗೆ ಹೊರಗಿನ ರಾಜ್ಯ, ರಾಷ್ಟ್ರ, ಅಂತರಾಷ್ಟ್ರೀಯ ಮಟ್ಟದ ವೇದಿಕೆಗಳಲ್ಲೂ ಕಾರ್ಯಕ್ರಮ, ಸ್ಪರ್ಧೆಗಳೊಂದಿಗೆ ವಿಜೇತರಾಗಿಸಿರುವುದನ್ನು ಕಾಣಬಹುದು. ಪ್ರಾರಂಭದಲ್ಲಿ ಅಂಜಿಕೆಯಿಂದಿರುವ ಮಕ್ಕಳು ಒಂದೊಂದೇ ಕಾರ್ಯಕ್ರಮದ ಮುಖಾಂತರ ಪ್ರತೀ ಹೆಜ್ಜೆಗೂ ಹೊಸತನ್ನು ಕಲಿಯುವುದರ ಜೊತೆಗೆ ಮುಂದೊಂದು ದಿನ ಅತ್ಯುತ್ತಮ ಪ್ರತಿಭಾನ್ವಿತ ಕಲಾಸಕ್ತರಾಗಿ ಹೊರಬೀಳಲು ಇಂತಹಾ ವೇದಿಕೆ ಬಹಳಷ್ಟು ಸಹಕಾರಿಯಾಗುತ್ತವೆ ಎಂದು ಸ್ವತಃ ಅಲ್ಲಿ ಕಲಿತಿರುವ ಹಾಗೂ ಕಲಿಯುತ್ತಿರುವ ವಿದ್ಯಾರ್ಥಿಗಳು ಅಭಿಪ್ರಾಯ ಪಡುತ್ತಾರೆ.
ದಾಖಲಾತಿಗಾಗಿ ಮಾಹಿತಿ ;
ಏಪ್ರಿಲ್ 13 ರಿಂದ 21 (2026)ರವರೆಗೆ ಸುಳ್ಯದ ಕಾಯರ್ತೋಡಿ ಶ್ರೀ ಮಹಾವಿಷ್ಣು ದೇವಾಲಯದ ಆವರಣದಲ್ಲಿ ನಡೆಯಲಿರುವ ಶಿಬಿರದ ದಾಖಲಾತಿ ಈಗಾಗಲೇ ಆರಂಭಗೊಂಡಿದ್ದು, ಏಪ್ರಿಲ್ 08, 2026 ರ ಒಳಗಾಗಿ, ಆಸಕ್ತ ವಿದ್ಯಾರ್ಥಿಗಳು ಸಂಪರ್ಕಿಸಬಹುದಾಗಿ ತಿಳಿಸಲಾಗಿದೆ.
ದಾಖಲಾತಿ ಹಾಗೂ ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಬಹುದಾದ ಮೊಬೈಲ್ ಸಂಖ್ಯೆ : 9611355496
6363783983 ಎಂದು ಲೋಕೇಶ್ ಊರುಬೈಲು ಹಾಗೂ ಭವಾನಿಶಂಕರ ಅಡ್ತಲೆ ಹೇಳಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ರಂಗಮಯೂರಿ ಕಲಾ ಶಾಲೆಯ ನಿರ್ದೇಶಕರಾದ ಶಿಶಿಕಾಂತ್ ಮಿತ್ತೂರು, ಜಯಾ ಕೃಷ್ಣ ಕಾಯರ್ತೋಡಿ, ಸೌಮ್ಯ ಆಲಂಕಳ್ಯ ಉಪಸ್ಥಿತರಿದ್ದರು.















