ಸುಳ್ಯ: ಸುಳ್ಯದ ಸಾಂಸ್ಕೃತಿಕ ಕಲಾ ಕೇಂದ್ರ ರಂಗಮಯೂರಿ ಕಲಾಶಾಲೆಯ ವತಿಯಿಂದ ಬೇಸಿಗೆ ಶಿಬಿರ ಏಪ್ರಿಲ್ 9 ರಿಂದ 17 ರವರೆಗೆ ಸುಳ್ಯದ ಕಾಯರ್ತೋಡಿ ಶ್ರೀ ಮಹಾವಿಷ್ಣು ದೇವಾಲಯದ ಸಭಾಂಗಣದಲ್ಲಿ ನಡೆಯಲಿದೆ..ಬೇಸಿಗೆ ರಜೆಯಲ್ಲಿ ವಿದ್ಯಾರ್ಥಿಗಳನ್ನು ಮತ್ತಷ್ಟು ಕ್ರಿಯಾತ್ಮಕವಾಗಿ ಪಾಲ್ಗೊಳ್ಳುವಂತೆ ಮಾಡುವ ಉದ್ದೇಶದಿಂದ ರಂಗಮಯೂರಿ ಕಲಾ ಶಾಲೆಯು ಬೇಸಿಗೆ ಶಿಬಿರವನ್ನು ಆಯೋಜಿಸುತ್ತಾ ಬಂದಿದ್ದು ಮಕ್ಕಳಿಗೆ ವೈವಿಧ್ಯಮಯ ಕಲೆಗಳ ಕಲಿಸುವಿಕೆಯ ರಸದೌತಣವನ್ನು ಉಣ ಬಡಿಸಲಿದೆ. ಮಕ್ಕಳ ಬಾಲ್ಯದ ಕನಸಿಗೆ
ಬಣ್ಣ ಹಚ್ಚುವ ಈ ‘ಬಣ್ಣ’ ಶಿಬಿರದಲ್ಲಿ ತರಬೇತುದಾರರು ಮಕ್ಕಳಿಗೆ ವೈವಿಧ್ಯಮಯ ತರಬೇತಿಯನ್ನು ನೀಡುವುದರ ಜೊತೆಗೆ, ಮಕ್ಕಳನ್ನು ಒಂದೇ ಕಡೆ ಒಂದೇ ವೇದಿಕೆಯಲ್ಲಿ ಪರಿಚಯಸ್ಥರನ್ನಾಗಿಸಿ ಮನೊಲ್ಲಾಸದಿಂದ ಮನರಂಜಿಸುವಂತೆ ಮಾಡುತ್ತದೆ. ಈ ಬಾರಿಯೂ ಶಿಬಿರದಲ್ಲಿ ರಾಜ್ಯದ ವಿವಿಧ ಕ್ಷೇತ್ರದ ಹೆಸರಾಂತ ಸಂಪನ್ಮೂಲ ವ್ಯಕ್ತಿಗಳು ವಿದ್ಯಾರ್ಥಿಗಳಿಗೆ ತರಬೇತಿ ನೀಡಲು ಆಗಮಿಸುತ್ತಿದ್ದು ಏಳರಿಂದ ಹದಿನೇಳು (7-17) ವರ್ಷ ವಯೋಮಿತಿಯ ಮಕ್ಕಳಿಗೆ ಶಿಬಿರದಲ್ಲಿ ಪಾಲ್ಗೊಳ್ಳಬಹುದು.
ದೇಸೀಯತೆಗೆ ಒತ್ತು:
ಪ್ರಶಾಂತ ವಾದ ವಾತಾವರಣದಲ್ಲಿ ಪ್ರಕೃತಿಯೊಡನೆ ಬೆರೆತು ಹಾಡು,ನಗು ಖುಷಿಯೊಂದಿಗೆ ಸಹಬೋಜನದ ಕ್ಷಣಗಳು. ಹಿಂದೆ ನಮ್ಮ ಹಿರಿಯರು ಪ್ರಕೃತಿಯನ್ನೇ ನಂಬಿ ಅದನ್ನೇ ಪೂಜಿಸಿ,ಪರಿಸರದಲ್ಲಿ ಸಿಗುವ ಬಿದಿರು,ಬೆತ್ತವನ್ನು ಉಪಯೋಗಿಸಿ ಗೃಹ ಬಳಕೆಗೆ,ಕೃಷಿಗೆ,ಮನರಂಜನೆಗೆ ಉಪಯೋಗಿಸುತ್ತಿದ್ದರು.ಈಗ ಎಲ್ಲವೂ ಕೃತಕವಾಗಿದೆ. ಹಾಗಾಗಿ ಆ ಬದುಕನ್ನು ನೆನಪಿಸುವ ಸಮಯ ಈ ಶಿಬಿರ
ಮರೆತು ಹೋದ ದೇಸೀ ಕಲೆಗಳನ್ನು ಶಿಬಿರದಲ್ಲಿ ಮಕ್ಕಳಿಗೆ ಪರಿಚಯಿಸಿ ಕಲಿಸಲಾಗುವುದು.ದೇಸೀ ಆಟಗಳು, ಜಾನಪದ ಹಾಡುಗಳು, ದೇಸೀ ವಸ್ತುಗಳ ತಯಾರಿಕೆ, ಪ್ರಾತ್ಯಕ್ಷಿಕೆ ಕಲಿಸುವುದರ ಜೊತೆಗೆ ಮಕ್ಕಳಿಗೆ ರಂಗ ತರಬೇತಿ, ನಾಟಕ ರಚನೆ-ನಿರ್ಮಾಣ, ಜನಪದ ಹಾಡು, ನೃತ್ಯ ಕಲಿಸಲಾಗುತ್ತದೆ. ದೇಶಭಕ್ತಿಯ ಗಾನ, ಸಂವಿಧಾನ ಪಠಣದ ಜೊತೆಗೆ ಇತರ ಚಟುವಟಿಕೆಗಳು ಇರಲಿದೆ. ಒಟ್ಟಿನಲ್ಲಿ ಪ್ರತಿ ಕ್ಷಣವೂ ಕಲಿಕೆ, ಪ್ರತಿ ಗಳಿಗೆಯೂ ಖುಷಿಯ ನಗು ಹಂಚುವ ಮಕ್ಕಳ ಕನಸಿನ ಬಣ್ಣದ ಹಬ್ಬಕ್ಕೆ ಇನ್ನು ಕೆಲವೇ ದಿನಗಳು ಮಾತ್ರ ಬಾಕಿ. ಮಕ್ಕಳ ರಜೆಯ ಮಜಾಕ್ಕೆ ಖುಷಿಯ ನಗುವಿಗೆ ಕ್ಷಣಗಣನೆ ಶುರುವಾಗಿದೆ. ಮಕ್ಕಳಿಗೆ ಹಳ್ಳಿಯ ಬದುಕನ್ನು ಮತ್ತೆ ನೆನಪಿಸಿ ಕೊಡುವುದೇ ಶಿಬಿರದ ಉದ್ದೇಶ. ದೇಸೀಯತೆಯ ಜೊತೆಗೆ ಕಲಿಕೆ ಮತ್ತು ಪ್ರಾತ್ಯಕ್ಷಿಕೆ ಮಕ್ಕಳಿಗೇನು ಬೇಕು,ಮಕ್ಕಳ ನಾಡಿ ಮಿಡಿತ ಅರಿತು ಮಕ್ಕಳೊಡನೆ ಮಕ್ಕಳಾಗುವ ರಾಜ್ಯದ ಹಲವು ಮಕ್ಕಳ ಶಿಬಿರದಲ್ಲಿ ಭಾಗವಹಿಸಿದ ಸಂಪನ್ಮೂಲ ವ್ಯಕ್ತಿಗಳು
ಜೊತೆಗೆ ಸಂವಿದಾನದ ಮಹತ್ವ,ಜನಪದ ಕಲೆಗಳ ಅರಿವು,ಪ್ರಥಮ ಚಿಕಿತ್ಸೆ, ಬೆಂಕಿ ಅನಾಹುತದ ಬಗ್ಗೆ ಮಾಹಿತಿ ಮತ್ತು ಪ್ರಾತ್ಯಕ್ಷಿಕೆ. ಎಲ್ಲರೂ ಒಂದಾಗಿ ಒಂದೇ ಸೂರಿನಡಿ ಹಾಡಿ ಕುಣಿವ ಸಮಯ, ದೇಸಿಯತೆಯನ್ನು ಸಾರುವ,ಹಾಡುಗಳು,ಪಾಡ್ದನಗಳು,ಕುಣಿತ,ನಾಟಕ..ಸಂಪನ್ಮೂಲ ವ್ಯಕಿಗಳ ಜೊತೆಗೆ ಇಪ್ಪತ್ತಕ್ಕೂ ಹೆಚ್ಚು ಮೇಲ್ವಿಚಾರಕರು. ಹೌದು
ಏ.9ರಿಂದ 17 ಕಾಯರ್ತೋಡಿಯಲ್ಲಿ ಅಕ್ಷರಷಃ ‘ಬಣ್ಣದ ಲೋಕ’ ತೆರೆದುಕೊಳ್ಳಲಿದೆ.
ರಂಗಮಯೂರಿ ಕಲಾಶಾಲೆಯ ಆಕರ್ಷಕ ಬೇಸಿಗೆ ಶಿಬಿರಕ್ಕೆ ನೋಂದಣಿ ಆರಂಭಗೊಂಡಿದೆ. ಎಪ್ರಿಲ್ 7ರ ತನಕ ನೋಂದಾವಣೆ ಮಾಡಿಕೊಳ್ಳಬಹುದು. ಸೀಮಿತ ಸಂಖ್ಯೆ ಶಿಬಿರಾರ್ಥಿಗಳಿಗೆ ಅವಕಾಶ ಇದ್ದು ಮೊದಲು ನೋಂದಾವಣೆ ಮಾಡಿದವರಿಗೆ ಆದ್ಯತೆ ನೀಡಲಾಗುತ್ತದೆ.
ದೇಸೀ ಕಲೆಗಳ ಅನಾವರಣಕ್ಕೆ ಶಿಬಿರ ಈ ಬಾರಿ ವಿಶೇಷ ಆದ್ಯತೆ ನೀಡಲಿದೆ.ಬೆಳಿಗ್ಗೆ 8.45ರಿಂದ ಸಂಜೆ 5 ಗಂಟೆಯ ತನಕ ಶಿಬಿರ ನಡೆಯಲಿದೆ.
ಆಸಕ್ತ ವಿದ್ಯಾರ್ಥಿಗಳು ಈ ಕೆಳಗಿನ ಸಂಖ್ಯೆ 9611355496 ಸಂಪರ್ಕಿಸಿ ಅಥವಾ ಪೋಸ್ಟರ್ನಲ್ಲಿ ನಮುದಿಸಿದ ಸಂಖ್ಯೆಗಳನ್ನು ಸಂಪರ್ಕಿಸಿ ನೋಂದಾಯಿಸಿಕೊಳ್ಳಬಹುದು ಎಂದು ರಂಗಮಯೂರಿ ಶಾಲೆಯ ನಿರ್ದೇಶಕ ಲೋಕೇಶ್ ಊರುಬೈಲು ತಿಳಿಸಿದ್ದಾರೆ.
ರಂಗಮಯೂರಿ ಕಲಾ ಶಾಲೆಯ ಬಗ್ಗೆ…..
ಗ್ರಾಮೀಣ ಭಾಗದ ವಿದ್ಯಾರ್ಥಿಗಳು ಕಲೆ, ಸಾಹಿತ್ಯದಲ್ಲಿ ಬಹಳಷ್ಟು ಆಸಕ್ತಿ ಹೊಂದಿದವರಾಗಿರುತ್ತಾರೆ. ಕೆಲವೊಮ್ಮೆ ಪ್ರತಿಭೆಗಳಿಗೆ ಸರಿಯಾದ ವೇದಿಕೆ, ಗುರುಗಳು ದೊರಕದೇ ಹಲವು ಮಕ್ಕಳು ಅರ್ಧದಲ್ಲಿಯೇ ತಮ್ಮ ಆಸಕ್ತಿಯ ಕ್ಷೇತ್ರಗಳನ್ನು ಬಿಡುವ ಸಂದರ್ಭಗಳು ಎದುರಾಗುತ್ತವೆ. ಈ ಕಾರಣ, ಅವಕಾಶಗಳನ್ನು ಒದಗಿಸಿಕೊಡುವುದರ ಜೊತೆಗೆ, ಆಸಕ್ತ ವಿದ್ಯಾರ್ಥಿಗಳಿಗೆ ಉತ್ತಮ ವೇದಿಕೆಯನ್ನು ಕಲ್ಪಿಸುವುದಕ್ಕಾಗಿ ಜೂನ್, 2018ರಲ್ಲಿ ಸುಳ್ಯದ ರಂಗಮಯೂರಿ ಕಲಾಶಾಲೆ(ರಿ.)ಯು ಉದ್ಘಾಟನೆಯಾಗಿ ಇವತ್ತಿಗೆ ಸಾಂಸ್ಕೃತಿಕ ಕ್ಷೇತ್ರದಲ್ಲಿ ತನ್ನದೇ ಆದ ಛಾಪು ಮೂಡಿಸಿದೆ.
ಪ್ರಾರಂಭದಲ್ಲಿ ಹಂತ ಹಂತವಾಗಿ ಸಾಕಷ್ಟು ಆಸಕ್ತ ವಿದ್ಯಾರ್ಥಿಗಳು ತಮ್ಮ ಕ್ಷೇತ್ರವನ್ನು ಆರಿಸಿಕೊಂಡು ರಂಗಮಯೂರಿ ಕಲಾಶಾಲೆಯನ್ನು ಸೇರುವುದರ ಜೊತೆಗೆ, ವೇದಿಕೆಯ ಮೇಲೆ ಅಭಿನಯ, ನಾಟಕ,ನೃತ್ಯ, ಸಂಗೀತ ಯೋಗ, ಭಜನೆ ಯಕ್ಷಗಾನ ಹೀಗೇ ಹಲವಾರು ಕಡೆ ಕಾರ್ಯಕ್ರಮ ನೀಡಿ ರಾಷ್ಟ್ರ ಮಟ್ಟಕ್ಕೂ ತಲುಪಿದ್ದಾರೆ. ಸಾಮಾಜಿಕ ಹಾಗೂ ಸಾಂಸ್ಕ್ರತಿಕವಾಗಿ ಎಲ್ಲರನ್ನೂ ಬೆಳೆಸುವ ಉದ್ದೇಶದಿಂದ ಪ್ರತೀ ದಿನ ಹೊಸತನವನ್ನು ಕಂಡುಕೊಳ್ಳುವ ನಿಟ್ಟಿನಲ್ಲಿ ವಿಭಿನ್ನ ಶೈಲಿಯಲ್ಲಿ ವಿದ್ಯಾರ್ಥಿಗಳಿಗಾಗಿಯೇ ಹಲವಾರು ಸಾಂಸ್ಕ್ರತಿಕ ಕಾರ್ಯಕ್ರಮಗಳನ್ನು ಒದಗಿಸಿಕೊಡುವುದರ ಜೊತೆಗೆ, ಮಕ್ಕಳು ಸ್ವತಂತ್ರವಾಗಿ ಸ್ಪರ್ಧೆಗಳಲ್ಲಿ ಪಾಲ್ಗೊಂಡು ಪ್ರಶಸ್ತಿ, ಪ್ರಶಂಸೆಗಳನ್ನು ಗಳಿಸಿಕೊಳ್ಳುವಲ್ಲಿ ರಂಗ ಮಯೂರಿ ಕಲಾಶಾಲೆಯು ಮಾದರಿಯಾಗುತ್ತಾ ಬಂದಿದೆ.
ರಂಗಮಯೂರಿ ಕಲಾಶಾಲೆಯಲ್ಲಿ ಯೋಗ, ಕರಾಟೆ, ಭಜನೆ, ಯಕ್ಷಗಾನ, ಡ್ರಾಯಿಂಗ್, ಸುಗಮ ಸಂಗೀತ, ಶಾಸ್ತ್ರೀಯ ಸಂಗೀತ, ನೃತ್ಯ, ಅಭಿನಯ ಇತ್ಯಾದಿ ತರಗತಿಗಳನ್ನು ಆಯಾಯ ಶಿಕ್ಷಕರ ಮಾರ್ಗದರ್ಶನದ ಮುಖಾಂತರ ವಾರಪೂರ್ತಿ ನಡೆಸುತ್ತಿರುತ್ತದೆ. ಅಲ್ಲದೇ, ಪ್ರಸ್ತುತ ಸಮಯದಲ್ಲಿ ರಂಗಮಯೂರಿ ಕಲಾಶಾಲೆಯು ವಿದ್ಯಾರ್ಥಿಗಳನ್ನು ಸ್ಥಳೀಯ ವೇದಿಕೆಯ ಜೊತೆಗೆ ಹೊರಗಿನ ರಾಜ್ಯ, ರಾಷ್ಟ್ರಮಟ್ಟದ ವೇದಿಕೆಗಳಲ್ಲೂ ಕಾರ್ಯಕ್ರಮ, ಸ್ಪರ್ಧೆಗಳೊಂದಿಗೆ ವಿಜೇತರಾಗಿಸಿರುವುದನ್ನು ಕಾಣಬಹುದಾಗಿದೆ.