ಸುಳ್ಯ: ಮಂಗಳೂರಿನ ಬಾವುಟ ಗುಡ್ಡೆಯಲ್ಲಿ ಸ್ವಾತಂತ್ರ್ಯ ಸಮರ ವೀರ ಕೆದಂಬಾಡಿ ರಾಮಯ್ಯ ಗೌಡರ ಕಂಚಿನ ಪ್ರತಿಮೆ ಲೋಕಾರ್ಪಣೆ ಕಾರ್ಯಕ್ರಮ ನ.19ರಂದು ನಡೆಯಲಿದೆ. ಆದಿ ಚುಂಚನಗಿರಿ ಮಹಾ ಸಂಸ್ಥಾನದ ಮಠದ ಪೀಠಾಧ್ಯಕ್ಷ ಶ್ರೀ ಡಾ.ನಿರ್ಮಲಾನಂದನಾಥ ಮಹಾ ಸ್ವಾಮಿ ಮತ್ತು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಪ್ರತಿಮೆ ಅನಾವರಣ ಕಾರ್ಯ ನೆರವೇರಿಸಸಲಿದ್ದಾರೆ ಎಂದು ಬಂದರು,ಮೀನುಗಾರಿಕೆ ಮತ್ತು ಒಳನಾಡು ಜಲ ಸಾರಿಗೆ ಸಚಿವ ಎಸ್.ಅಂಗಾರ ಹೇಳಿದ್ದಾರೆ. ಸುಳ್ಯದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ
ಅವರು ಬಾವುಟ ಗುಡ್ಡೆಯಲ್ಲಿ ಪ್ರತಿಮೆ ಅನಾವರಣದ ಬಳಿಕ ಕಾರ್ಯಕ್ರಮದ ಬಳಿಕ ನೆಹರೂ ಮೈದಾನದಲ್ಲಿ ಸಾರ್ವಜನಿಕ ಕಾರ್ಯಕ್ರಮ ನಡೆಯಲಿದೆ. ಕಾರ್ಯಕ್ರಮಕ್ಕೆ ಸುಳ್ಯ ತಾಲೂಕಿನಿಂದ 10 ಸಾವಿರ ಮಂದಿ ಭಾಗವಹಿಸಲು ನಿರ್ಧಾರ ಮಾಡಲಾಗಿದೆ.ಗ್ರಾಮ ಗ್ರಾಮಗಳಿಂದ ಹೆಚ್ಚಿನ ಸಂಖ್ಯೆಯಲ್ಲಿ ಸಾರ್ವಜನಿಕರು ಭಾಗವಹಿಸಬೇಕು. 200 ಬಸ್ಗಳನ್ನು ವ್ಯವಸ್ಥೆ ಮಾಡಲಾಗುವುದು. ಕೆದಂಬಾಡಿ ರಾಮಯ್ಯ ಗೌಡ ಸ್ಮಾರಕ ಉಸ್ತುವಾರಿ ಸಮಿತಿಯ ನೇತೃತ್ವದಲ್ಲಿ ಅಲ್ಲಲ್ಲಿ ಸಭೆಗಳನ್ನು ನಡೆಸಿ ಸಿದ್ಧತೆಗಳನ್ನು ಮಾಡಲಾಗುತಿದೆ ಎಂದು ಅಂಗಾರರು ಹೇಳಿದರು.

ರಾಜ್ಯ ಮೀನುಗಾರಿಕಾ ಅಭಿವೃದ್ಧಿ ನಿಗಮದ ಅಧ್ಯಕ್ಷ ಎ.ವಿ.ತೀರ್ಥರಾಮ ಮಾತನಾಡಿ ‘ಪ್ರಥಮ ಸ್ವಾತಂತ್ರ್ಯ ಹೋರಾಟ ಸುಳ್ಯದಲ್ಲಿ ನಡೆದಿದೆ ಎಂಬುದು ನಮಗೆ ಹೆಮ್ಮೆ. ಆದುದರಿಂದ ಸ್ವಾತಂತ್ರ್ಯ ಹೋರಾಟದ ನಾಯಕ ಕೆದಂಬಾಡಿ ರಾಮಯ್ಯ ಗೌಡರ ಪ್ರತಿಮೆ ಜಿಲ್ಲಾ ಕೇಂದ್ರದಲ್ಲಿ ಲೋಕಾರ್ಪಣೆಯಾಗುವುದು ಸುಳ್ಯಕ್ಕೆ ಸಂದ ಗೌರವ. ಆದುದರಿಂದ ಸುಳ್ಯದಿಂದ ಹೆಚ್ಚು ಮಂದಿ ಸಮಾರಂಭದಲ್ಲಿ ಭಾಗವಹಿಸಬೇಕು ಎಂದು ಮನವಿ ಮಾಡಿದರು.
ಸುದ್ದಿಗೋಷ್ಠಿಯಲ್ಲಿ ನಗರ ಪಂಚಾಯತ್ ಅಧ್ಯಕ್ಷ ವಿನಯಕುಮಾರ್ ಕಂದಡ್ಕ, ಬಿಜೆಪಿ ಮಂಡಲ ಸಮಿತಿ ಅಧ್ಯಕ್ಷ ಹರೀಶ್ ಕಂಜಿಪಿಲಿ, ಪ್ರಮುಖರಾದ ಡಾ.ಎನ್.ಎ.ಜ್ಞಾನೇಶ್, ದೊಡ್ಡಣ್ಣ ಬರೆಮೇಲು, ರಜತ್ ಅಡ್ಕಾರ್, ವೀರಪ್ಪ ಗೌಡ, ಸುನಿಲ್ ಕೇರ್ಪಳ, ಮಹೇಶ್ ಕುಮಾರ್ ಮೇನಾಲ ಉಪಸ್ಥಿತರಿದ್ದರು