*ಶಿವಸುಬ್ರಹ್ಮಣ್ಯ ಕಲ್ಮಡ್ಕ.
ಈ ಕಾಡು ಯಾಕೆ ರಾಮಣ್ಣನವರ ಹೆಸರಿನ ಹಿಂದೆ ಸೇರಿತು ಎಂಬುದು ಅಚ್ಚರಿಯ ವಿಷಯ.ಬಂಟಮಲೆ ಕಾಡಿಗೆ ರಾಮಣ್ಣ ಸೇರಿದ್ದರಿಂದ ರಾಮಣ್ಣನವರನ್ನು ನಾವೆಲ್ಲ ( ಊರಿನ ಬಹುತೇಕ ಆಪ್ತರು) ಕಾಡು ರಾಮಣ್ಣ ಎಂದೇ ಕರೆಯುತ್ತಿದ್ದುದು.ಕಾಡು ಎಂಬ ಹೆಸರು ತನ್ನ ಹೆಸರಿನ ಜತೆಗೆ ಸೇರಲೂ ಪುಣ್ಯ ಮಾಡಿರಬೇಕು. ರಾಮಣ್ಣ ಪುಣ್ಯವಂತ. ಇಷ್ಟು ವಿವರಣೆ ಇದಕ್ಕೆ ಸಾಕು. ಆದರೆ, 50 ಕ್ಕೂ ಹೆಚ್ಚು ವರ್ಷಗಳಿಂದ ಯಕ್ಷಗಾನ ಲೋಕಕ್ಕೆ ತಮ್ಮನ್ನು ಸಮರ್ಪಿಸಿಕೊಂಡಿದ್ದ ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ತಾಲೂಕಿನ
ಕಲ್ಮಡ್ಕದ ಪಿ.ರಾಮಣ್ಣ ಗೌಡ. ಸೋಮವಾರ ( ಫೆ.3) ತಮ್ಮ 74 ನೇ ವಯಸ್ಸಿನಲ್ಲಿ ನಿಧನರಾದಾಗ ಯಕ್ಷಗಾನ ಕ್ಷೇತ್ರದ ಹಿರಿಯ ಕೊಂಡಿ ಕಳಚಿದಂತಾಯಿತು.
ರಾಮಣ್ಣ ಮೇಳದ ಕಲಾವಿದರಲ್ಲ. ಅವರು ಮಾಡಿದ ವೇಷ ಪ್ರಖ್ಯಾತವೂ ಆಗಿಲ್ಲ. ಅವರು ವೇಷ ಮಾಡುತ್ತಾರೆಂದು ನೂರಾರು ಜನ ಬರುವ ಪ್ರಸಂಗವೂ ನಡೆದಿಲ್ಲ. ಅವರಿಗಾಗಿಯೇ ಪ್ರಸಂಗವೂ ತಯಾರಾಗಿಲ್ಲ. ಆದ್ದರಿಂದ ರಾಮಣ್ಣನವರ ಅಗಲಿಕೆ ನಾಡಿನಾದ್ಯಂತ ಪ್ರಚಾರವೂ ಆಗಲಿಲ್ಲ.
ಬದಲಾಗಿ, ಕಲ್ಮಡ್ಕ ಗ್ರಾಮಕ್ಕೆ, ಕಲ್ಮಡ್ಕದ ಸಂಘಮ ಕಲಾ ಸಂಘಕ್ಕೆ, ಜಿಲ್ಲೆಯ ಅನೇಕ ಶಾಲೆಗಳಿಗೆ, ಸಂಘ ಸಂಸ್ಥೆಗಳಿಗೆ ರಾಮಣ್ಣನವರ ಗೈರು ಹಾಜರಿ ಇನ್ನು ಮುಂದೆ ಶಾಶ್ವತ. ರಾಮಣ್ಣನಂತಹ ಯಕ್ಷಗಾನ ಕಲಾ ಸೇವಕನ ಅಗಲಿಕೆ ಅಲ್ಲಿ ಬಹುವಾಗಿ ಕಾಡಲಿದೆ.

ರಾಮಣ್ಣ ಗೌಡ.
ಯಕ್ಷಗಾನದಲ್ಲಿ ಇವರು ಮಾಡುತ್ತಿದ್ದ ಪಾತ್ರ ವಿದೂಷಕ. ಕಲ್ಮಡ್ಕ ಶಾಲೆಯಲ್ಲಿ ಯಕ್ಷಗಾನ ನಡೆಯುತ್ತಿದ್ದಾಗ ವೇದಿಕೆಗೆ ರಾಮಣ್ಣನವರ ಆಗಮನವನ್ನೇ ನಾವು ಕಾಯುತ್ತಿದ್ದೆವು.
ಪ್ರಸಾಧನದಲ್ಲೇ ಆಸಕ್ತಿ…..
ಪಾತ್ರ ಮಾಡುವುದಕ್ಕಿಂತಲೂ ಅವರು ಪ್ರಸಾಧನ, ವೇಷಭೂಷಣ, ರಂಗಪರಿಕರ ತಯಾರಿಯಲ್ಲಿಯೇ ಆಸಕ್ತಿ ಹೆಚ್ಚಿಸಿ ತೊಡಗಿಸಿಕೊಂಡವರು. ಸಂಘಮ ಕಲಾಸಂಘದ ವೇಷಭೂಷಣಗಳೊಂದಿಗೆ ದಕ ಜಿಲ್ಲೆಯಾದ್ಯಂತ ಮತ್ತು ನೆರೆ ಜಿಲ್ಲೆಗಳಿಗೂ ತಿರುಗಾಡಿದವರು. ಈ ವಿಷಯದಲ್ಲಿ ದಿ. ಕೆರೆಕ್ಕೋಡಿ ಗಣಪತಿ ಭಟ್ ಮತ್ತು ಅವರ ಪುತ್ರ, ನೀನಾಸಂ ಕಲಾವಿದ ಕೆರೆಕ್ಕೋಡಿ ಮಹಾಬಲ ಅವರ ಮಾರ್ಗದರ್ಶನ ರಾಮಣ್ಣನವರಿಗೆ ಇತ್ತು.
ಕೆರೆಕ್ಕೋಡಿ ಗಣಪತಿ ಭಟ್, ಕಾವು ಗಣೇಶ ಭಟ್, ಕುಂಬ್ಳೆ ರಾಮಚಂದ್ರರಾಯರು, ಅಮೈ ಗೋವಿಂದ ಭಟ್ಟರು ರಾಮಣ್ಣನವರ ಯಕ್ಷಗಾನ ಗುರುಗಳು. ಖ್ಯಾತ ಭಾಗವತ ದಿ. ಪದ್ಯಾಣ ಗಣಪತಿ ಭಟ್ ಇವರ ಆಪ್ತರಾಗಿದ್ದರು.ಜಿಲ್ಲೆಯ ಸಾವಿರಾರು ಮಕ್ಕಳು ಇವರಿಂದ ಯಕ್ಷಗಾನ ಮತ್ತು ನಾಟಕಕ್ಕೆ ಮುಖ ಅಲಂಕಾರ ಮಾಡಿಸಿಕೊಂಡಿದ್ದಾರೆ. ಯಕ್ಷಗಾನ ಉಡುಪು ಧರಿಸಲು ಸಹಾಯ ಪಡೆದಿದ್ದಾರೆ.

ಯಕ್ಷಗಾನ ಉಡುಪು ತೆಗೆದುಕೊಂಡು ಹೋಗುವ ಜವಾಬ್ದಾರಿಯಲ್ಲಿ ರಾಮಣ್ಣ ನಿದ್ರೆಯಿಲ್ಲದ ಎಷ್ಟೋ ರಾತ್ರಿಗಳನ್ನು ಕಳೆದಿದ್ದಾರೆ. ಆರೋಗ್ಯ ಕೆಲವೊಮ್ಮೆ ಕೈಕೊಟ್ಟಿತ್ತು. ಆದರೆ ಯಕ್ಷಗಾನ ಎಂಬ ಶಬ್ದವೇ ಅವರನ್ನು ಕ್ಷಣದಲ್ಲಿ ಎದ್ದು ಕುಳಿತುಕೊಳ್ಳುವಂತೆ ಮಾಡುತ್ತಿತ್ತು!
ಪ್ರೀತಿಯ ಧಾರೆ……
ಕಲ್ಮಡ್ಕದ ಯಾವುದೇ ಮನೆಗಳಲ್ಲಿ ವಿಶೇಷ ಸಮಾರಂಭ ನಡೆದರೆ ಮನೆ ಅಲಂಕಾರಕ್ಕೆ ರಾಮಣ್ಣರಿಗೆ ಆಹ್ವಾನ ಇರುತ್ತಿತ್ತು. ತೋರಣ, ವೇದಿಕೆ ಅಲಂಕಾರದಲ್ಲಿ ಅವರ ಶ್ರಮ ಇರುತ್ತಿತ್ತು. ಇದಕ್ಕೆ ರಾಮಣ್ಣ ಹಣದ ಅಪೇಕ್ಷೆ ಹೊಂದಿರಲಿಲ್ಲ. ಅವರು ಬಯಸುತ್ತಿದ್ದುದು ಪ್ರೀತಿ ಮಾತ್ರ. ಗ್ರಾಮಸ್ಥರೂ ರಾಮಣ್ಣರಿಗೆ ಪ್ರೀತಿಯನ್ನು ಧಾರೆ ಎರೆದಿದ್ದರು.

ರಾಮಣ್ಣ ಗ್ರಾಮ ಪಂಚಾಯತ್ ಸದಸ್ಯರಾಗಿ, ಕಲ್ಮಡ್ಕ ವ್ಯವಸಾಯ ಸೇವಾ ಸಹಕಾರಿ ಬ್ಯಾಂಕ್ ನಿರ್ದೇಶಕರಾಗಿ, ಶಾಲಾಭಿವೃದ್ಧಿ ಸಮಿತಿ ಸದಸ್ಯರಾಗಿಯೂ ಕಾರ್ಯನಿರ್ವಹಿಸಿದ್ದಾರೆ. ಸಂಘಮ ಕಲಾ ಸಂಘದ ಸದಸ್ಯರಾಗಿ ಅವರು ಮಾಡಿದ ಕೆಲಸ ಗಮನಾರ್ಹ. ಸುಳ್ಯ ತಾಲೂಕು ಸಾಹಿತ್ಯ ಸಮ್ಮೇಳನದ ಸನ್ಮಾನ ಇವರಿಗೆ ದೊರೆತಿದೆ.
ಕಾಡಿನೊಳಗೆ ಹೆಜ್ಜೆ…….
ಇತ್ತೀಚೆಗೆ ವಯೋಸಹಜ ಬಳಲಿಕೆಯಿಂದ ವಿಶ್ರಾಂತಿಯಿಂದ ಇದ್ದರು. ವಯೋಸಹಜ ಮರೆವಿನಿಂದಾಗಿ ಮನೆ ಬಾಗಿಲು ತೆರೆದು ಕಾಲಿಟ್ಟ ರಾಮಣ್ಣನವರು ಮನೆಗೆ ಅಂಟಿಕೊಂಡಿರುವ ಬಂಟಮಲೆ ಕಾಡಿನ ಬಳಿ ಹೋಗಿ ಹೊರಬರಲಾರದೆ ನಿತ್ರಾಣದಿಂದ ಕುಳಿತಿದ್ದರು. ಮಕ್ಕಳು ಮತ್ತು ಊರಿನ ಹುಡುಗರ ಹುಡುಕಾಟದಿಂದ ಪತ್ತೆಯಾಗಿದ್ದರು.
ನಾಟಿ ಚಿಕಿತ್ಸೆ ಕಲಿಕೆ….ರಾಮಣ್ಣನವರ ಅಜ್ಜಿ ದೆಯ್ಯಕ್ಕು ನಾಟಿ ಚಿಕಿತ್ಸೆ ಪರಿಣತರಾಗಿದ್ದರು. ಅವರಿಂದ ನಾಟಿ ಚಿಕಿತ್ಸೆಯನ್ನು ಕಲಿತಿದ್ದರೂ ರಾಮಣ್ಣನವರು ಮುಂದುವರಿಸಲಿಲ್ಲ.

ನಮ್ಮ ಕುಟುಂಬಕ್ಕೂ ಕಾಡು ರಾಮಣ್ಣನವರಿಗೂ ಅವಿನಾಭಾವ ಸಂಬಂಧ. ರಾಮಣ್ಣ ನಮ್ಮ ಮನೆಯ ಸದಸ್ಯರಂತೆಯೇ ಇದ್ದರು. ರಾಮಣ್ಣನವರ ಮಾತೃಭಾಷೆ ಗೌಡರ ಅರೆಭಾಷೆ. ನಮ್ಮದು ಹವ್ಯಕ ಭಾಷೆ. ಆದರೆ ಊರಲ್ಲಿ ಹವ್ಯಕರ ಸಂವಹನ ಅವರ ಜತೆ ಹವ್ಯಕ ಭಾಷೆಯಲ್ಲೇ ಇರುತ್ತಿತ್ತು. ನಾನು ಬೆಂಗಳೂರು ನಿವಾಸಿಯಾದ ನಂತರ ಎಷ್ಟೋ ಬಾರಿ ರಾಮಣ್ಣ ನನ್ನಿಂದಲೂ ಚೆನ್ನಾಗಿ ಹವ್ಯಕ ಭಾಷೆ ಮಾತನಾಡುತ್ತಿದ್ದುದನ್ನು ಗಮನಿಸಿದ್ದೆ!
ರಾಮಣ್ಣ ನಮ್ಮ ಜತೆ ಕ್ರಿಕೆಟ್ ಆಡಿದ್ದಿದೆ. ವಾಲಿಬಾಲ್ ಆಡಿದ್ದಿದೆ. ಊರಿನವರ ಮನೆಗಳಲ್ಲಿ ಕುಟುಂಬ ಸದಸ್ಯರಂತೆ ಇದ್ದ ಕ್ಷಣಗಳಿವೆ. ನಮ್ಮ ಮನೆ ಜಗುಲಿಯಲ್ಲಿ ಕುಳಿತು ಹರಟೆ ಹೊಡೆಯುತ್ತಿದ್ದ ಕ್ಷಣ ನೆನಪಾಗುತ್ತಿದೆ. ಜತೆಗೇ ಊಟ ಮಾಡುತ್ತಿದ್ದಾಗ ಹಳೇ ಘಟನೆಗಳನ್ನು ರಸವತ್ತಾಗಿ ವಿವರಿಸುತ್ತಿದ್ದುದು ಕಣ್ಣಿಗೆ ಕಾಣುತ್ತಿದೆ. ರಾಮಣ್ಣನವರ ಸಹೋದರಿ ಪಾರ್ವತಿ ನಾವು ಚಿಕ್ಕವರಿರುವಾಗ ಆರೈಕೆ ಮಾಡುತ್ತ ಕಾಪಾಡುತ್ತಿದ್ದವರು. ಈಗಲೂ ಪಾರ್ವತಿ ನಮ್ಮ ಮನೆಯ ಸದಸ್ಯರಂತೆಯೇ ಇದ್ದಾರೆ. ರಾಮಣ್ಣನವರ ತಾಯಿ ದೆಯ್ಯಕ್ಕು ಅವರ ಫೋಟೋಶೂಟ್ ಕಲ್ಚಾರ್ ಸತ್ಯಶಂಕರ ಅವರಿಂದ ಮಾಡಿಸಿದ್ದೆ. ಇತ್ತೀಚೆಗೆ ರಾತ್ರಿ ರಾಮಣ್ಣನವರ ಮನೆಗೆ ತೆರಳಿ ಅವರ ಫೋಟೋಶೂಟ್ ಮಾಡಿದ್ದೆ.

ನಿಂಗ ಇನ್ನೊಂದರಿ ಹಗಲು ಹೊತ್ತು ಬನ್ನಿ….ಎಂದಿದ್ದರು ರಾಮಣ್ಣ. ಸಮಯವೇ ಸಿಗಲಿಲ್ಲ.
ಕಳೆದ ಭೇಟಿ ಸಂದರ್ಭದಲ್ಲೇ ರಾಮಣ್ಣ ಮಗುವಿನಂತೆ ವರ್ತಿಸುತ್ತಿರುವುದನ್ನು ಗಮನಿಸಿದ್ದೆವು. ಮನೆಯಲ್ಲಿ ತೂಗು ಹಾಕಿದ್ದ ಫೋಟೋಗಳನ್ನು ಹೆಮ್ಮೆಯಿಂದ ತೋರಿಸಿ ಖುಷಿಪಟ್ಟಿದ್ದರು.
ಹಣದ ಆಸೆಗೆ ಜೋತುಬಿದ್ದ ಕಲಾವಿದ ತಾನಲ್ಲ ಎಂಬುದನ್ನು ರಾಮಣ್ಣ ಯಾವತ್ತೋ ಋಜುಪಡಿಸಿದ್ದರು. ಯಕ್ಷಗಾನದ ವೇಷದ ಫೋಟೋಗಳು, ಸಿಕ್ಕಿದ ಸನ್ಮಾನ ಪತ್ರಗಳು, ಹಳೆಯ ಕುರ್ಚಿ ಅವರ ಪ್ರಾಮಾಣಿಕತೆಗೆ ಸಾಕ್ಷಿಯಾಗಿದ್ದವು. ಉದ್ಯೋಗಕ್ಕೆ ಸೇರಿದ್ದ ಮಕ್ಕಳು ಕೂಡಿಟ್ಟ ಹಣದಿಂದ ಸಣ್ಣ ಮನೆಗೆ ಮತ್ತೆರೆಡು ರೂಮ್ ಸೇರಿಸಿ ಹೊಸ ರೂಪ ಕೊಟ್ಟರು. ಇದೆಲ್ಲ ಖರ್ಚು….ಎಂದು ರಾಮಣ್ಣ ಗೊಣಗುತ್ತ ಸರಳತೆಯನ್ನೇ ಮೆರೆದರು. ಹಾಗೆಯೇ ನಮ್ಮನ್ನೆಲ್ಲ ಅಗಲಿ ನಿರ್ಗಮಿಸಿದರು.ರಾಮಣ್ಣ ಗೌಡ ಅವರು ಪತ್ನಿ, ಇಬ್ಬರು ಗಂಡು ಮಕ್ಕಳು ಮತ್ತು ಒರ್ವ ಹೆಣ್ಣು ಮಗಳನ್ನು ಅಗಲಿದ್ದಾರೆ.
